2,000 ನೋಟು ಇನ್ನು ಮುಂದೆ ಪೀಸ್ ಆಫ್ ಪೇಪರ್ ಅಷ್ಟೇ: ಆರ್‌ಬಿಐ
ಬೆಳಗಾವಿ, ಸೆಪ್ಟೆಂಬರ್ 30: 2,000 ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ನೀಡಿದ್ದ ಗಡುವು ಸೆಪ್ಟೆಂಬರ್ 30ರಂದು ಮುಗಿಯುತ್ತಿರುವಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಆ ನೋಟು ಇನ್ನು ಮುಂದೆ ಪೀಸ್ ಪೇಪರ್ ಅಷ್ಟೇ ಎಂದು ಹೇಳಿದೆ.
2,000 ರೂಪಾಯಿಯ ನೋಟುಗಳು ಶನಿವಾರದ ಬಳಿಕ ಅದರ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಇಂದು ಕೊನೆಯ ದಿನವಾಗಿದ್ದು, ಯಾವುದೇ ಬ್ಯಾಂಕ್‌ನಲ್ಲಿ ಅದನ್ನು ವಿನಿಮಯ ಮಾಡಿಕೊಳ್ಳದಿದ್ದರೆ ಅದು ಮತ್ತೊಂದು ಕಾಗದವಾಗಿರುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸ್ಪಷ್ಟಪಡಿಸಿದೆ.

2,000 ರೂಪಾಯಿಗಳನ್ನು ರದ್ದು ಮಾಡಿದ ಬಳಿಕ ಅದರ ಬದಲಾವಣೆಗೆ ಸಾರ್ವಜನಿಕರಿಗೆ ಸಾಕಷ್ಟು ಸಮಯವನ್ನು ಒದಗಿಸುವ ಉದ್ದೇಶಕ್ಕಾಗಿ ಆರ್‌ಬಿಐ ಈ ಹಿಂದೆ ಸೆಪ್ಟೆಂಬರ್ 30, 2023 ಅನ್ನು ಕೊನೆಯ ದಿನಾಂಕವೆಂದು ನಿಗದಿಪಡಿಸಿತ್ತು.
ಕಳೆದ ತಿಂಗಳು ಆರ್‌ಬಿಐ ಮೇ ತಿಂಗಳಲ್ಲಿ 2,000 ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದ ನಂತರ 2,000 ರೂ. ಬ್ಯಾಂಕ್ ಶಾಖೆಗಳು ಮತ್ತು ಆರ್‌ಬಿಐನ ಪ್ರಾದೇಶಿಕ ಶಾಖೆಗಳಲ್ಲಿ ಜನರು ತಮ್ಮ 2,000 ರೂ ನೋಟುಗಳನ್ನು ಬದಲಾಯಿಸಲು ಅಥವಾ ಠೇವಣಿ ಮಾಡಲು ಸೂಚಿಸಲಾಗಿದೆ.
ಬ್ಯಾಂಕ್‌ನಲ್ಲಿ ಖಾತೆ ಇಲ್ಲದವರು ಕೂಡ ಯಾವುದೇ ಬ್ಯಾಂಕ್ ಶಾಖೆಯಲ್ಲಿ ಒಂದು ಸಮಯದಲ್ಲಿ 20,000 ರೂ.ಗಳ ಮಿತಿಯವರೆಗೆ ರೂ.2000 ಬ್ಯಾಂಕ್ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಮೇ 19 ರಂದು ಆರ್‌ಬಿಐ ರೂ 2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿತ್ತು. ಆದರೆ ಬದಲಾವಣೆಗೆ ತಿಂಗಳ ಅವಕಾಶವನ್ನು ನೀಡಲಾಯಿತು. ಅಲ್ಲದೆ ತಕ್ಷಣವೇ ಜಾರಿಗೆ ಬರುವಂತೆ ಇಂತಹ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿತ್ತು.
ನವೆಂಬರ್ 2016 ರಲ್ಲಿ ಆಗ ಚಲಾವಣೆಯಲ್ಲಿದ್ದ ಎಲ್ಲಾ 500 ಮತ್ತು 1,000 ರೂಪಾಯಿ ನೋಟುಗಳ ಕಾನೂನು ಮಾನ್ಯತೆಯನ್ನು ರದ್ದು ಮಾಡಲಾಗಿತ್ತು. ಇತರ ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾದ ನಂತರ 2,000 ರೂಪಾಯಿ ನೋಟುಗಳನ್ನು ಪರಿಚಯಿಸಲಾಯಿತು. 2018-19ರಲ್ಲಿ 2000 ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು.
ಆರ್‌ಬಿಐ 2,000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ನಂತರ ಚಲಾವಣೆಯಲ್ಲಿದ್ದ ನೋಟುಗಳು ಶೇಕಡಾ 50ರಷ್ಟು ವಾಪಸ್ ಬಂದಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಕಳೆದ ಜೂನ್‌ನಲ್ಲಿ ತಿಳಿಸಿದ್ದರು.
ದ್ವೈಮಾಸಿಕ ಹಣಕಾಸು ನೀತಿಯನ್ನು ಇಲ್ಲಿ ಬಿಡುಗಡೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ಮಾರ್ಚ್ 31, 2023ರಂತೆ 3.62 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳು ಚಲಾವಣೆಯಲ್ಲಿವೆ. ಇದುವರೆಗೆ ಘೋಷಣೆಯ ನಂತರ 1.80 ಲಕ್ಷ ಕೋಟಿ ರೂಪಾಯಿ ವಾಪಸ್ ಬಂದಿದೆ. ಶೇ. 85ರಷ್ಟು 2000 ರೂಪಾಯಿ ನೋಟುಗಳು ಬ್ಯಾಂಕ್ ಖಾತೆಗಳಲ್ಲಿ ಠೇವಣಿಯಾಗಿ ಬರುತ್ತಿದ್ದು, ಇದು ನಿರೀಕ್ಷೆಗೆ ತಕ್ಕಂತೆ ಇದೆ ಎಂದು ತಿಳಿಸಿದ್ದರು.












Click it and Unblock the Notifications