ಮೈತ್ರಿ ಸರ್ಕಾರವನ್ನು ಸಿದ್ದರಾಮಯ್ಯ ಅವರೇ ಬೀಳಿಸುತ್ತಾರೆ: ಅಶೋಕ್
ಬೀದರ್, ಮೇ 9: ಈಗಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೇ ಕೆಡವುತ್ತಾರೆ ಎಂದು ಬಿಜೆಪಿ ಮುಖಂಡ ಆರ್. ಅಶೋಕ್ ಹೇಳಿದರು.
ಬೀದರ್‌ನಲ್ಲಿ ಗುರುವಾರ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿಲ್ಲ. ಅದನ್ನು ಸಿದ್ದರಾಮಯ್ಯ ಅವರೇ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮೊದಲಿನಿಂದಲೂ ದೇವೇಗೌಡ ಅವರನ್ನು ಕಂಡರೆ ಆಗುವುದಿಲ್ಲ. ಅವರದು 40 ವರ್ಷಗಳ ದ್ವೇಷ. ಅದು ಯಾವಾಗ ಸಿಡಿಯುತ್ತದೆಯೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಮಾತ್ರ ಗೊತ್ತಿದೆ ಎಂದರು.
ನಾನೇನು ಎಚ್ ಡಿ ರೇವಣ್ಣ ಅವರ ಹಾಗೆ ನಿಂಬೆಹಣ್ಣು ಇಟ್ಟುಕೊಂಡು ಜ್ಯೋತಿಷ್ಯ ಹೇಳುವುದಿಲ್ಲ. ಸಿದ್ದರಾಮಯ್ಯ ಅವರನ್ನು ಜೆಡಿಎಸ್ ಪಕ್ಷದಿಂದ ಬಿಸಾಡಿದ್ದಾರೆ. ಕತ್ತು ಹಿಡಿದು ತಳ್ಳಿ ಮೈಸೂರು ಹೆದ್ದಾರಿಗೆ ತಂದು ಬಿಸಾಕಿದ್ದಾರೆ. ಅದನ್ನು ಸಿದ್ದರಾಮಯ್ಯ ಮರೆತಿಲ್ಲ. ಆ ಹಾವಿನ ದ್ವೇಷವನ್ನು ಸಿದ್ದರಾಮಯ್ಯ ಈಗ ತೀರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುತ್ತಿರುವವರೆಲ್ಲ ಚುನಾವಣೆಗೆ ಮುಂಚೆ ಮಾತೇ ಆಡಿರಲಿಲ್ಲ. ಈಗ ಬಾಲ ಬಿಚ್ಚುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕೀ ಕೊಟ್ಟಿರುವ ಗೊಂಬೆಗಳು ಈಗ ಮಾತನಾಡುತ್ತಿವೆ. ಚುನಾವಣೆ ಮುಂಚೆ ಈ ಗೊಂಬೆಗಳು ಏಕೆ ಮಾತನಾಡಲಿಲ್ಲ? ಸಿದ್ದರಾಮಯ್ಯ ಹೇಳಿದ ಹಾಗೆ ಈ ಗೊಂಬೆಗಳು ಹೇಳುತ್ತಿವೆ. ಅವರ ಮಾತುಗಳೇ ಸರ್ಕಾರ ಮುಂದೆ ಇರುವುದಿಲ್ಲ, ಸಿದ್ದರಾಮಯ್ಯ ಅದನ್ನು ಬೀಳಿಸುತ್ತಾರೆ ಎಂಬುದಕ್ಕೆ ಸಾಕ್ಷಿ. ಸರ್ಕಾರ ಬೀಳಿಸಲು ಸಿದ್ದರಾಮಯ್ಯ ಮತ್ತು ತಂಡ ಸ್ಕೆಚ್ ಹಾಕಿದೆ. ಇದರಲ್ಲಿ ನಮ್ಮ ಪಾತ್ರ ಏನೂ ಇಲ್ಲ. ನಾವು ಏನು ಮಾಡೋಕೂ ಹೋಗುವುದಿಲ್ಲ ಎಂದು ತಿಳಿಸಿದರು.












Click it and Unblock the Notifications