ಬಸವಕಲ್ಯಾಣದಲ್ಲಿ ಡಿ. ಕೆ. ಶಿವಕುಮಾರ್‌ಗೆ ಅದ್ದೂರಿ ಸ್ವಾಗತ
ಬೀದರ್, ನವೆಂಬರ್ 24 : ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬಸವಕಲ್ಯಾಣ ಪ್ರವಾಸದಲ್ಲಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಜೆಸಿಬಿ ಮೇಲೆ ನಿಂತು ಹೂಮಳೆ ಸುರಿಸುವ ಮೂಲಕ ಅವರಿಗೆ ಅದ್ದೂರಿ ಸ್ವಾಗತವನ್ನು ಕೋರಿದರು.
ಮಂಗಳವಾರ ಬಸವಕಲ್ಯಾಣ ಸಮೀಪದ ಮಂಗಳ ಗ್ರಾಮದಲ್ಲಿ ಡಿ. ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ದೂರಿ ಸ್ವಾಗತವನ್ನು ಕೋರಿದರು. ಡಿ. ಕೆ. ಶಿವಕುಮಾರ್ ಕಲಬುರಗಿ, ಬೀದರ್, ರಾಯಚೂರು ಜಿಲ್ಲಾ ಪ್ರವಾಸದಲ್ಲಿದ್ದಾರೆ.
ಬೃಹತ್ ಮಾಲಾರ್ಪಣೆ ಹಾಗೂ ಪುಷ್ಪ ಸಿಂಚನದ ಮೂಲಕ ಡಿ. ಕೆ. ಶಿವಕುಮಾರ್ ಅವರನ್ನು ಸ್ವಾಗತಿಸಲಾಯಿತು. ಕಲಬುರಗಿಯಿಂದ ಡಿ. ಕೆ. ಶಿವಕಯಮಾರ್ ಬಸವಕಲ್ಯಾಣಕ್ಕೆ ಬರುವಾಗ ಯರಂಡ ಗ್ರಾಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡಿದರು.

ಡಿ. ಕೆ. ಶಿವಕುಮಾರ್ ಮಂಗಳವಾರ ಕಲಬುರಗಿಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಅಜಯ್ ಸಿಂಗ್ ಸೇರಿದಂತೆ ಹಾಲಿ, ಮಾಜಿ ಶಾಸಕರು ಪಕ್ಷದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಉಪ ಚುನಾವಣೆ; ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ. 2018ರ ಚುನಾವಣೆಯಲ್ಲಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ (67) ಸೆಪ್ಟೆಂಬರ್‌ನಲ್ಲಿ ನಿಧನ ಹೊಂದಿದ್ದಾರೆ.

ರಾಯಚೂರು ಜಿಲ್ಲೆಯ ಮಸ್ಕಿ ಮತ್ತು ಬೀದರ್ ಜಿಲ್ಲೆಯ ಬಸವಕಲ್ಯಾಣದ ಉಪ ಚುನಾವಣೆ ಹಿನ್ನಲೆಯಲ್ಲಿ ಡಿ.ಕೆ. ಶಿವಕುಮಾರ್ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಬಸವಕಲ್ಯಾಣದಲ್ಲಿ ಅವರು ಬಿ. ನಾರಾಯಣರಾವ್ ಸಮಾಧಿಗೆ ಮಂಗಳವಾರ ನಮನವನ್ನು ಸಲ್ಲಿಸಿದರು.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆಗೆ ಚುನಾವಣಾ ಆಯೋಗ ಇನ್ನು ವೇಳಾಪಟ್ಟಿಯನ್ನು ಘೋಷಣೆ ಮಾಡಬೇಕಿದೆ. ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಈಗಾಗಲೇ ಚುನಾವಣೆ ಸಿದ್ಧತೆಯನ್ನು ಆರಂಭಿಸಿವೆ.
2018 ಚುನಾವಣೆಯಲ್ಲಿ ಬಸವಕಲ್ಯಾಣದಲ್ಲಿ ಬಿ. ನಾರಾಯಣ ರಾವ್ 61,425 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಮಲ್ಲಿಕಾರ್ಜುನ 44,153 ಮತ ಪಡೆದಿದ್ದರು. ಜೆಡಿಎಸ್‌ನಿಂದ ಪಿ. ಜಿ. ಆರ್. ಸಿಂಧ್ಯಾ ಕಣಕ್ಕಿಳಿದು 31,414 ಮತ ಪಡೆದಿದ್ದರು.












Click it and Unblock the Notifications