ಮನೆಯನ್ನು ಮಕಾಡೆ ಮಲಗಿಸಿದ ಫೋನಿ, ಕುಟುಂಬಕ್ಕೆ ಶೌಚಾಲಯವೇ ಸೂರು!
ಕೇಂದ್ರಾಪಾರ(ಒಡಿಶಾ), ಮೇ 18: ಕಳೆದ ಕೆಲ ದಿನಗಳ ಹಿಂದೆ ಒಡಿಶಾ ರಾಜ್ಯವನ್ನು ಅಲ್ಲೋಕಲ್ಲೋಲ ಮಾಡಿದ ಫೋನಿ ಚಂಡಮಾರುತದಲ್ಲಿ ಜೀವ ಕಳೆದುಕೊಂಡವರು ಕೆಲವರಾದರೆ, ಮನೆ ಕಳೆದುಕೊಂಡವರು ಮತ್ತಷ್ಟು ಜನ. ಬದುಕಲ್ಲಿ ಭರವಸೆ ಕಳೆದುಕೊಂಡವರು ಮತ್ತೆಷ್ಟೋ ಜನ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಈ ಚಂಡಮಾರುತದಿಂದ ಮನೆಯನ್ನು ಕಳೆದುಕೊಂಡ ರಘುದೇಯ್ಪುರ ಎಂಬ ಹಳ್ಳಿಯ ಖಿರೋಡ್ ಜೆನಾ ಎಂಬ ವ್ಯಕ್ತಿಯೊಬ್ಬರು 7x6ಅಡಿಯ ಶೌಚಾಲಯದಲ್ಲಿ ಬದುಕು ನಡೆಸುತ್ತಿದ್ದಾರೆ, ಪತ್ನಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ!
ಅಚ್ಚರಿ ಎಂದರೆ ಫೋನಿ ಚಂಡಮಾರುತ ಅಪ್ಪಳಿಸುವುದಕ್ಕೂ ಎರಡು ದಿನ ಮೊದಲು ಜೇನಾಗೆ ಸರ್ಕಾರದ ಕಡೆಯಿಂದ ಶೌಚಾಲಯ ಕಟ್ಟಿಸಿಕೊಡಲಾಗಿತ್ತು! ಆ ಶೌಚಾಲಯವೇ ಇಂದು ಆತನಿಗೆ ಆಸರೆಯಾಗಿದೆ.

ಮೇ 3 ರಂದು ಒಡಿಶಾದ ಕೇಂದ್ರಪಾರಕ್ಕೆ ಅಪ್ಪಳಿಸಿದ ಫೋನಿ ಚಂಡಮಾರುತದಿಂದಾಗಿ ಜೇನಾನ ಮನೆ ನಾಶವಾಗಿತ್ತು. ಕಡುಬಡತನದಿಂದ ಬಳಲುತ್ತಿದ್ದ ಈ ಕುಟುಂಬಕ್ಕೆ ಆಸರೆಯೇ ಇಲ್ಲದಂತಾಗಿದ್ದಾಗ ಕಾಣಿಸಿದ್ದು ಒಂದು ಶೌಚಾಲಯ! ಮತ್ತೆ ಮನೆ ಕಟ್ಟುವುದಕ್ಕೂ ಹಣವಿಲ್ಲದ ಜೇನಾ ಸರ್ಕಾರದಿಂದ ತಮಗೆ ಏನಾದರೂ ಸಹಾಯ ಸಿಗುತ್ತದಾ ಎಂಬ ನಿರೀಕ್ಷೆಯಲ್ಲಿದ್ದಾರೆ.
ಮೇ ಮೊದಲ ವಾರದಲ್ಲಿ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಬಾರ ಕುಸಿತದಿಂದ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಫೋನಿ ಚಂಡಮಾರುತ ಕಾಣಿಸಿಕೊಂಡಿತ್ತು. ಈ ಚಂಡಮಾರುತಕ್ಕೆ ಇದುವರೆಗೂ ಐವತ್ತಕ್ಕೂ ಹೆಚ್ಚು ಜನ ಮೃತರಾಗಿದ್ದರು.












Click it and Unblock the Notifications