ಮಾರಕಾಸ್ತ್ರ ತಯಾರಿಕೆಗೆ ಆರೆಸ್ಸೆಸ್ ನಿಂದ ತರಬೇತಿ: ಮ.ಪ್ರ.ಸಚಿವ
ಭೋಪಾಲ್, ಜನವರಿ 21: ಶಸ್ತ್ರಾಸ್ತ್ರ, ಆಟಂ ಬಾಂಬ್, ಗ್ರೆನೆಡ್ ತಯಾರಿಸಲು ಜನರಿಗೆ ಆರೆಸ್ಸೆಸ್ ತರಬೇತಿ ನೀಡುತ್ತಿದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಮಧ್ಯಪ್ರದೇಶದ ಸಂಪುಟ ದರ್ಜೆ ಸಚಿವರೊಬ್ಬರು ನೀಡಿರುವುದು ಆರೆಸ್ಸೆಸ್ ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ.
ಮಧ್ಯಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಸರ್ಕಾರ ಹಳಿದಿದ್ದು, ಅದಕ್ಕೆ ಪ್ರತಿಕ್ರಿಯೆ ಎಂಬಂತೆ ಗೋವಿಂದ್ ಸಿಂಗ್ ಮಾತನಾಡಿದರು.
"ಬಿಜೆಪಿಯ ಸೈದ್ಧಾಂತಿಕ ಗುರುವಾದ ಆರೆಸ್ಸೆಸ್, ಜನರಿಗೆ ಮಾರಕಾಸ್ತ್ರಗಳನ್ನು ಮಾಡುವ ತರಬೇತಿ ನೀಡುತ್ತಿದೆ. ಸ್ಫೋಟ ಮಾಡಲು ಕಲಿಸುತ್ತಿದೆ" ಎಂದು ಗೋವಿಂದ್ ಸಿಂಗ್ ಹೇಳಿದ್ದಾರೆ.

ಮಧ್ಯಪ್ರದೇಶ ಕಾಂಗ್ರೆಸ್ ನ ಪ್ರಮುಖ ಮುಖಂಡರಲ್ಲಿ ಒಬ್ಬರಾದ ಗೋವಿಂದ್ ಸಿಂಗ್ ದಿಗ್ವಿಜಯ ಸೀಂಗ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ರಾಜ್ಯದ ಗೃಹಸಚಿವರಾಗಿದ್ದರು. ಮಧ್ಯಪ್ರದೇಶದ ಭಿಂದ್ ಜಿಲ್ಲೆಯ ಲಾಹರ್ ಕ್ಷೇತ್ರದಿಂದ ಏಳು ಬಾರಿ ಶಾಸಕರಾಗಿದ್ದಾರೆ.
ಗೋವಿಂದ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, "ಮುಖ್ಯಮಂತ್ರಿ ಕಮಲ್ ನಾಥ್ ಅವರ ಸಚಿವರು ಆರೆಸ್ಸೆಸ್ ಜನರಿಗೆ ಮಾರಕಾಸ್ತ್ರ ತಯಾರಿಸುವ ತರಬೇತಿ ನೀಡುತ್ತಿದೆ ಎಂದಿದ್ದಾರೆ. ಈ ಹೇಳಿಕೆ ದುರಹಂಕಾರ ಮತ್ತು ಬೇಜವಾಬ್ದಾರಿಯ ಸಂಕೇತ. ಕಳೆದ 94 ವರ್ಷಗಳಿಂದ ಸತತವಾಗಿ ದೇಶದ ಜನರಲ್ಲಿ ರಾಷ್ಟ್ರೀಯತೆ ಮೂಡಿಸಲು ಮತ್ತು ಸಚ್ಚಾರಿತ್ರ್ಯ ಮೂಡಿಸಲು ನೆರವಾಗುತ್ತಿರುವ ಬೃಹತ್ ಸಂಸ್ಥೆಯೊಂದರ ಬಗ್ಗೆ ಇಂಥ ಅವಹೇನಾಕಾರಿ ಹೇಳಿಕೆ ಸಲ್ಲ. ಇದು ಕಾಂಗ್ರೆಸ್ಸಿನ ದುರಹಂಕಾರಕ್ಕೆ ಸಾಕ್ಷಿ" ಎಂದಿದ್ದಾರೆ.












Click it and Unblock the Notifications