ಮಧ್ಯಪ್ರದೇಶ; ರಾಜಕೀಯ ಬೆಳವಣಿಗೆಗೆ ಮಹತ್ವದ ತಿರುವು
ಭೋಪಾಲ್, ಮಾರ್ಚ್ 06 : ಮಧ್ಯಪ್ರದೇಶದ ರಾಜಕೀಯ ಬೆಳವಣಿಗೆ ಮಹತ್ವದ ತಿರುವು ಸಿಕ್ಕಿದೆ. ಒಬ್ಬ ಕಾಂಗ್ರೆಸ್ ಶಾಸಕ ರಾಜೀನಾಮೆ ನೀಡಿದ್ದು, ಕಮಲನಾಥ್ ನೇತೃತ್ವದ ಸರ್ಕಾರ ಪತನಗೊಳಿಸಲು ಬಿಜೆಪಿ ಪ್ರಯತ್ನ ನಡೆಸಿದೆ ಎಂದು ಕಾಂಗ್ರೆಸ್ ದೂರಿದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿ ಶಾಸಕ ನಾರಾಯಣ ತ್ರಿಪಾಠಿ ಕಮಲನಾಥ್ ಭೇಟಿ ಮಾಡಿದ್ದಾರೆ. ಭೋಪಾಲ್‌ನಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಈ ಭೇಟಿ ನಡೆದಿದ್ದು, ಕುತೂಹಲ ಹುಟ್ಟು ಹಾಕಿದೆ.
ಕಮಲನಾಥ್ ಸರ್ಕಾರಕ್ಕೆ ಬೆಂಬಲ ನೀಡಿದ್ದ ಬಿಎಸ್‌ಪಿ, ಪಕ್ಷೇತರ ಮತ್ತು ಕೆಲವು ಕಾಂಗ್ರೆಸ್ ಶಾಸಕನ್ನು ಸೆಳೆಯಲು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ. ಕಾಂಗ್ರೆಸ್ ಶಾಸಕ ಹರ್ದೀಪ್ ಸಿಂಗ್ ಗುರುವಾರ ರಾತ್ರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಮಲನಾಥ್ ಭೇಟಿ ಬಳಿಕ ಮಾತನಾಡಿದ ನಾರಾಯಣ ತ್ರಿಪಾಠಿ, "ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರದ ಕುರಿತು ಚರ್ಚೆ ನಡೆಸಲು ಆಗಮಿಸಿದ್ದೆ" ಎಂದು ಹೇಳಿಕೆ ನೀಡಿದರು.

ಆಪರೇಷನ್ ಕಮಲಕ್ಕೆ ತಿರುಗೇಟು
ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಕಸರತ್ತು ನಡೆಸಿದೆ. ಲೋಕೋಪಯೋಗಿ ಸಚಿವ ಸಜ್ಜನ್ ಸಿಂಗ್ ವರ್ಮಾ, "ಒಂದಕ್ಕೆ ಬದಲಾಗಿ ನಾವು 3 ವಿಕೆಟ್ ಬೀಳಿಸುತ್ತೇವೆ" ಎಂದು ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ತಿರುಗೇಟು ನೀಡಲು ಮುಂದಾಗಿದೆಯೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಬಿಜೆಪಿ ಶಾಸಕನಿಂದ ಸಿಎಂ ಭೇಟಿ
ಮುಖ್ಯಮಂತ್ರಿ ಕಮಲನಾಥ್ ಭೇಟಿ ಬಳಿಕ ಮಾಧ್ಯಮಗಳು ನೀವು ಯಾರ ಜೊತೆ ಇದ್ದೀರಿ ಎಂದು ಬಿಜೆಪಿ ಶಾಸಕ ನಾರಾಯಣ ತ್ರಿಪಾಠಿಯನ್ನು ಪ್ರಶ್ನಿಸಿದವು. "ಸರ್ವಧರ್ಮ ಸಮಭಾವ, ವಸುದೈವ ಕುಟುಂಬಕಂ, ಯಾರು ನಮ್ಮ ಜೊತೆ ಚರ್ಚಿಸುತ್ತಾರೋ ಅವರ ಜೊತೆ ಇದ್ದೇನೆ" ಎಂದು ಹೇಳಿದರು.

ಬೆಂಗಳೂರಲ್ಲಿ 4 ಶಾಸಕರು
ಕಾಂಗ್ರೆಸ್ ಮತ್ತು ಪಕ್ಷೇತರ ಶಾಸಕರನ್ನು ಬಿಜೆಪಿ ಕರ್ನಾಟಕಕ್ಕೆ ಕರೆದುಕೊಂಡು ಹೋಗಿದೆ ಎಂದು ಬಿಜೆಪಿ ಆರೋಪ ಮಾಡಿದೆ. ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ವಿಲ್ಲಾದಲ್ಲಿ ಶಾಸಕರು ಇದ್ದಾರೆ. ಕರ್ನಾಟಕದ ಬಿಜೆಪಿಯ ಶಾಸಕರೊಬ್ಬರು ಅವರ ಜೊತೆ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಒಬ್ಬ ಶಾಸಕರಿಂದ ರಾಜೀನಾಮೆ
ಕಾಂಗ್ರೆಸ್ ಶಾಸಕ ಹರ್ದೀಪ್ ಸಿಂಗ್ ಬೆಂಗಳೂರಿನಲ್ಲಿ ಇದ್ದಾರೆ ಎಂದು ಪಕ್ಷ ಆರೋಪ ಮಾಡುತ್ತಿದೆ. ಗುರುವಾರ ಸಂಜೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬೆಂಗಳೂರಿನಿಂದಲೇ ರಾಜೀನಾಮೆ ಪತ್ರವನ್ನು ವಿಧಾನಸಭೆ ಸ್ಪೀಕರ್ ಎನ್. ಪಿ. ಪ್ರಜಾಪತಿಗೆ ಕಳುಹಿಸಿದ್ದಾರೆ.












Click it and Unblock the Notifications