ವಿವಾದಾತ್ಮಕ ಹೇಳಿಕೆ: ಗೃಹ ಸಚಿವರ ರಾಜೀನಾಮೆಗೆ ಅಗ್ರಹಿಸಿದ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್
ಬೆಂಗಳೂರು, ಏ. 07: 'ಗೃಹ ಸಚಿವ ಆರಗ ಜ್ಞಾನೇಂದ್ರಗೆ ಅರ್ಧ ಜ್ಞಾನ ಇರೋದು ತುಂಬಾ ಕಷ್ಟವಾದ ವಿಷಯ. ಕೋಮು ಸೌಹಾರ್ದವನ್ನು ಹಾಳು ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ! ಆರಗ ಗೃಹ ಖಾತೆಯಲ್ಲಿರಲು ಅರ್ಹರಲ್ಲ'!
ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಬಗ್ಗೆ ಯುವ ಕಾಂಗ್ರೆಸ್ ಮುಖಂಡ ಮಹಮದ್ ನಲಪಾಡ್ ಆಡಿದ ಮಾತುಗಳಿವು.
ಜೆ.ಜೆ. ನಗರ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಯುವ ಕಾಂಗ್ರೆಸ್ ಮುಖಂಡ ಮಹಮದ್ ನಲಪಾಡ್ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಅವರಿಗೆ ದೂರು ನೀಡಿದ್ದಾರೆ.

ಆರಗ ಜ್ಞಾನೇಂದ್ರ ಅವರು ಕೋಮು ಸೌಹಾರ್ದ ಹಾಳು ಮಾಡುವ ಹೇಳಿಕೆಗಳನ್ನು ನೀಡಿದ್ದಾರೆ. ಮೈಸೂರು ರೇಪ್ ಕೇಸಿನಲ್ಲಿ ಇದೇ ರೀತಿ ಹೇಳಿಕೆ ನೀಡಿದ್ದಾರೆ. ನಾವು ಪ್ರತಿಭಟನೆ ಮಾಡ್ತೀವಿ ಹಂತ ಹೇಳ್ತಿದ್ದ ಹಾಗೇ ನಮ್ಮನ್ನು ತಡೆದರು. ಜೆ.ಜೆ. ನಗರ ಚಂದ್ರು ಕೊಲೆ ವಿಚಾರದಲ್ಲಿ ಕೋಮು ಸಂಘರ್ಷ ಉಂಟು ಮಾಡುವ ಹೇಳಿಕೆ ನೀಡಿರುವ ಸಂಬಂಧ ಹೋಬಳಿ ಮತ್ತು ಜಿಲ್ಲಾ ಮಟ್ಟದಲ್ಲಿ ದೂರುಗಳನ್ನು ನೀಡಿದ್ದೇವೆ. ಆರಗ ಅವರು ಗೃಹ ಖಾತೆಯಲ್ಲಿರಲು ಅರ್ಹರಲ್ಲ. ಆದಷ್ಟು ಬೇಗ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ನಲಪಾಡ್ ಒತ್ತಾಯಿಸಿದರು.

ಗೃಹ ಸಚಿವರು ಕೋಮು ಸಂಘರ್ಷ ಉಂಟು ಮಾಡುವ ಹೇಳಿಕೆ ನೀಡಿದ್ದಾರೆ. ಹೀಗಾಗಿ ಇವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಯುವ ಕಾಂಗ್ರೆಸ್ ಮುಖಂಡರಾದ ಬಳಿಕ ನಲಪಾಡ್ ಇದೀಗ ಗೃಹ ಸಚಿವರ ವಿರುದ್ಧ ದೂರು ನೀಡಿ ಸುದ್ದಿಯಾಗಿದ್ದಾರೆ.












Click it and Unblock the Notifications