Youth Congress: ಯೂತ್ ಕಾಂಗ್ರೆಸ್ ನಾಯಕರಿಗೆ ಚಳಿ ಬಿಡಿಸಿದ ಡಿ.ಕೆ.ಶಿವಕುಮಾರ್
ಕರ್ನಾಟಕ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳಿಗೆ ಪದಗ್ರಹಣಕ್ಕೂ ಮುನ್ನವೇ ಡಿಸಿಎಂ ಡಿಕೆ ಶಿವಕುಮಾರ್ ಶಾಕ್ ಕೊಟ್ಟಿದ್ದಾರೆ. ಇಂದು ಅದ್ಧೂರಿಯಾಗಿ ಪದಗ್ರಹಣಕ್ಕೆ ಸಜ್ಜಾಗಿದ್ದ ಯೂತ್ ಕಾಂಗ್ರೆಸ್ ನಾಯಕರಿಗೆ ರಾತ್ರೋರಾತ್ರಿ ಚಳಿ ಬಿಡಿಸಿದ್ದಾರೆ. ಅಧಿಕಾರ ಸ್ವೀಕಾರಕ್ಕೂ ಮುನ್ನವೇ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದ ಯುವ ನಾಯಕರ ವಿರುದ್ಧ ಫುಲ್ ಗರಂ ಆಗಿರುವ ಡಿಕೆಶಿ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಅವರ ಸಿಟ್ಟಿಗೆ ಕಾರಣವಾಗಿದ್ದು ಏನು ಗೊತ್ತಾ?
ಕರ್ನಾಟಕ ಯುವ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಮಂಜುನಾಥ್ ಗೌಡ ಸೇರಿದಂತೆ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಸೋಮವಾರ ಅದ್ಧೂರಿಯಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಹಿನ್ನೆಲೆ ರಸ್ತೆಯುದ್ದಕ್ಕೂ ಅನಧಿಕೃತ ಬ್ಯಾನರ್ ಹಾಗೂ ಫ್ಲೆಕ್ಸ್ ಅನ್ನು ಹಾಕುವ ಮೂಲಕ ಯುವ ಕಾಂಗ್ರೆಸ್ ನಾಯಕರು ನಿಯಮ ಉಲ್ಲಂಘಿಸಿದ್ದಾರೆ. ಕಾರ್ಯಕ್ರಮದ ಹೆಸರಿನಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದ ನಾಯಕರ ನಡೆಗೆ ಡಿಕೆ ಶಿವಕುಮಾರ್ ಕೆಂಡವಾಗಿದ್ದಾರೆ. ತಮ್ಮದೇ ಪಕ್ಷದವರ ಮೇಲೆ ಗರಂ ಆಗಿರುವ ಡಿಕೆಶಿ ಖಡ್ ವಾರ್ನಿಂಗ್ ಕೊಟ್ಟಿದ್ದಾರೆ.

ಇದನ್ನೆಲ್ಲ ಬೂತ್‌ಗಳಲ್ಲಿ ಪ್ರದರ್ಶಿಸಿ: ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅರಮನೆ ಮೈದಾನದ ಸುತ್ತಮುತ್ತ ಸೇರಿದಂತೆ ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಕಮಿಷನರ್ ಅವರಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ. ಅನಧಿಕೃತವಾಗಿ ಬ್ಯಾನರ್, ಫ್ಲೆಕ್ಸ್ ಹಾಕಿರುವವರು ತಾವಾಗಿಯೇ ತೆಗೆಯಬೇಕು. ತೆರವು ಮಾಡದಿದ್ದರೆ ಸಂಬಂಧಪಟ್ಟವರ ವಿರುದ್ಧ ದಂಡ ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಆದೇಶಿಸಿದ್ದೇನೆ. ಯುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಬಲವನ್ನು ಬೂತ್‌ಗಳಲ್ಲಿ ಪ್ರದರ್ಶಿಸಬೇಕೇ ಹೊರತು, ಈ ರೀತಿ ಬ್ಯಾನರ್, ಫ್ಲೆಕ್ಸ್ ಹಾಕಿಸಿ ಅಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಆದೇಶದ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರಾತ್ರೋರಾತ್ರಿ ಫೀಲ್ಡಿಗಿಳಿದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅರಮನೆ ಮೈದಾನ ಹಾಗೂ ನಗರದ ವಿವಿಧೆ ಯುವ ಕಾಂಗ್ರೆಸ್ ಹಮ್ಮಿಕೊಂಡಿರುವ ಯುವ ಸಂಕಲ್ಪ ಪದಗ್ರಹಣ ಸಮಾರಂಭಕ್ಕಾಗಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಸಿರುವುದು ಕಂಡುಬಂದಿರುತ್ತದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಸಿರುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿರುವ ಹಿನ್ನಲೆಯಲ್ಲಿ ಎಲ್ಲ ಕಡೆ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ಫ್ಲೆಕ್ಸ್ ಅಳವಡಿಸಿರುವವರ ಮೇಲೆ ಸುಮಾರು 5 ಲಕ್ಷ ರೂಪಾಯಿ ದಂಡ ವಿಧಿಸುವ ಜೊತೆಗೆ ಕ್ರಿಮಿನಲ್ ಕೇಸ್ ಕೂಡ ದಾಖಲಿಸಲಾಗುವುದು. ಅದರಂತೆ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಬೃಹತ್ ಗಾತ್ರದ 40 ಫ್ಲೆಕ್ಸ್ ಹಾಗೂ ಸಣ್ಣ ಗಾತ್ರದ 130ಕ್ಕೂ ಹೆಚ್ಚು ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಫ್ಲೆಕ್ಸ್ ತೆರವುಗೊಳಿಸಲು ಖರ್ಚಾಗುವ ಹಣವನ್ನು ಕೂಡ ಅವರಿಂದಲೇ ವಸೂಲಿ ಮಾಡಲಾಗುವುದು. ಅಧಿಕಾರಿಗಳು ಖುದ್ದು ಸ್ಥಳದಲ್ಲಿದ್ದು, ಅನಧಿಕೃತ ಫ್ಲೆಕ್ಸ್‌ಗಳ ತೆರವು ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ.












Click it and Unblock the Notifications