Namma Metro: ಮೆಟ್ರೋದಲ್ಲಿ "ತರ್ಲೆ ಕೆಲಸ" ಮಾಡಿ ಜೈಲು ಸೇರಿದ ಯುವಕ, ಮೂವರು ಪರಾರಿ!
Namma Metro: ನಮ್ಮ ಮೆಟ್ರೋದಲ್ಲಿ ರೀಲ್ಸ್ ಮಾಡುವುದು, ಸಿಬ್ಬಂದಿಯೊಂದಿಗೆ ಜಗಳಕ್ಕೆ ಇಳಿಯುವುದು ಆಗ್ಗಾಗ್ಗೆ ವರದಿಯಾಗುತ್ತಿರುತ್ತದೆ. ಇದೀಗ ನಮ್ಮ ಮೆಟ್ರೋ ಕೆಲವು ಮಾಡಿರುವ ಪುಂಡಾಟದಿಂದ ಒಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಇವನೊಂದಿಗಿದ್ದ ಮೂರು ಜನ ಪರಾರಿಯಾಗಿದ್ದು, ಅವರಿಗೆ ಪೊಲೀಸರು ಬಲೆ ಬೀಸಿದ್ದಾರೆ. ಬೆಂಗಳೂರಿನಲ್ಲಿ ಬಿಎಂಟಿಸಿ ಹಾಗೂ ಮೆಟ್ರೋ ಸಾರ್ವಜನಿಕರ ಪ್ರಯಾಣದ ನಾಡಿಮಿಡಿತದಂತೆ ಇವೆ. ಪ್ರತಿ ನಿತ್ಯವೂ ಮೆಟ್ರೋದಲ್ಲಿ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ.
ಮೆಟ್ರೋ ಉತ್ತಮ ಸೇವೆ ನೀಡುತ್ತಿದ್ದು, ವೇಗದ ಪ್ರಯಾಣಕ್ಕೆ ಸಹಕಾರಿಯಾಗಿದೆ. ಆದರೆ, ಮೆಟ್ರೋದಲ್ಲೂ ಇತ್ತೀಚಿನ ದಿನಗಳಲ್ಲಿ ಕೆಲವರು ಅಸಭ್ಯವಾಗಿ ವರ್ತಿಸುವುದು ವರದಿಯಾಗುತ್ತಲ್ಲೇ ಇದೆ. ಇದೀಗ ಬೆಂಗಳೂರಿನ ಕಾಡುಗೋಡಿ ಟ್ರೀ ಪಾರ್ಕ್ ಮೆಟ್ರೋ ನಿಲ್ದಾಣ ಇದೇ ರೀತಿಯ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಕುಡಿದ ಅಮಲಿನಲ್ಲಿ ನಾಲ್ವರು ಮೆಟ್ರೋದಲ್ಲಿ ಪುಂಡಾಟ ಮಾಡಿದ್ದು, ಅದರಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದು, ಪರಾರಿಯಾಗಿರುವ ಮೂವರ ಹುಡುಕಾಟ ನಡೆದಿದೆ ಎನ್ನಲಾಗಿದೆ.

ಮೆಟ್ರೋದಲ್ಲಿ ನಡೆದಿದ್ದೇನು: ಬೆಂಗಳೂರಿನ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಒಂದಾಗಿರುವ ಕಾಡುಗೋಡಿ ಟ್ರೀ ಪಾರ್ಕ್ ಮೆಟ್ರೋ ನಿಲ್ದಾಣದ ಒಳಗೆ ಕುಡಿದು ಬಂದಿರುವ ಪ್ರಯಾಣಿಕರು ಇಲ್ಲಿನ ಭದ್ರತಾ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿದ್ದಾರೆ. ಕುಡಿದು ಮೆಟ್ರೋದ ಒಳಗೆ ಬರಲು ಬಂದ ನಾಲ್ವರು ಯುವಕರನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಭದ್ರತಾ ಸಿಬ್ಬಂದಿ ಹಾಗೂ ಆ ನಾಲ್ವರು ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ, ಕುಡಿದು ಬಂದ ಯುವಕರು ಭದ್ರತಾ ಸಿಬ್ಬಂದಿಯ ಮೇಲೆಯೇ ಹಲ್ಲೆ ಮಾಡಿದ್ದಾರೆ. ಮುಂದುವರಿದು ಮೆಟ್ರೋದ ಮಹಿಳಾ ಭದ್ರತಾ ಸಿಬ್ಬಂದಿ ಮತ್ತು ಟಿಕೆಟ್ ಕೌಂಟರ್ ಸಿಬ್ಬಂದಿಗೂ ಬಾಯಿಗೆ ಬಂದಂತೆ ಬೈದಿದ್ದಾರೆ. ನಾಲ್ಕು ಜನ ಯುವಕರು ಈ ರೀತಿ ಮಾಡಿದ್ದು, ಅದರಲ್ಲಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಆದರೆ, ಇನ್ನುಳಿದ ಮೂವರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಘಟನೆಯ ಹಿನ್ನೆಲೆ ಏನು: ಮೆಟ್ರೋದಲ್ಲಿ ವಾರಂತ್ಯದ ದಿನಗಳಲ್ಲಿ ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ಜನಸಂದಣಿ ಅಷ್ಟಾಗಿ ಇರುವುದಿಲ್ಲ. ಭಾನುವಾರ ಸಂಜೆ ಮೆಟ್ರೋದ ಒಳಗೆ ನಾಲ್ವರು ಯುವಕರು ಬಂದಿದ್ದಾರೆ. ಸಂಜೆ 7 ಗಂಟೆಯ ಸುಮಾರಿಗೆ ಮೆಟ್ರೋದ ಒಳಗೆ ಬರಲು ಬಂದ ಯುವಕರನ್ನು ತಪಾಸಣೆ ನಡೆಸುವ ಸಂದರ್ಭದಲ್ಲಿ ಅವರು ಕುಡಿದಿರುವ ಅನುಮಾನ ವ್ಯಕ್ತವಾಗಿದೆ. ನಾಲ್ವರು ಯುವಕರಲ್ಲಿ ಇಬ್ಬರು ಕುಡಿದಿದ್ದರು ಎನ್ನಲಾಗಿದೆ. ಕಂಠಮಟ ಕುಡಿದಿದ್ದ ಅವರಿಗೆ ಹೆಜ್ಜೆ ಮುಂದೆ ಇಡುವುದಕ್ಕೂ ಆಗುತ್ತಿರಲಿಲ್ಲವಂತೆ. ಈ ವೇಳೆ ತಪಾಸಣೆ ನಡೆಸುವಾಗ ಭದ್ರತಾ ಸಿಬ್ಬಂದಿ, ಮೆಟ್ರೋದ ಒಳಗೆ ಇಬ್ಬರಿಗೆ ಮೆಟ್ರೋ ಸೇವೆ (ಮೆಟ್ರೋದ) ಒಳಗೆ ಬರಲು ಹೋಗಲು ನಿರಾಕರಿಸಿದ್ದಾರೆ. ಒಳಗೆ ಬಿಡದೆ ಇರುವುದಕ್ಕೆ ಕೋಪಗೊಂಡ ಯುವಕರು ಭದ್ರತಾ ಸಿಬ್ಬಂದಿಯೊಂದಿಗೆ ಜಗಳಕ್ಕೆ ಇಳಿದಿದ್ದಾರೆ.

ಇನ್ನು ಭದ್ರತಾ ಸಿಬ್ಬಂದಿಯೊಂದಿಗೆ ಕುಡಿದು ಬಂದ ಈ ಗುಂಪು ಕೆಟ್ಟದಾಗಿ ವರ್ತಿಸಿದೆ. ಅಲ್ಲದೇ ಮಹಿಳಾ ಭದ್ರತಾ ಸಿಬ್ಬಂದಿ ಹಾಗೂ ಟಿಕೆಟ್ ನೀಡುವ ಸಿಬ್ಬಂದಿಗೆ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ. ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಹಾಗೂ ಅವಾಚ್ಯ ಶಬ್ದ ಬಳಸಿದ್ದ ಮೊಹಮ್ಮದ್ ಐರಿಸ್ ಎಂಬವನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಆದರೆ, ಇನ್ನು ಮೂರು ಜನ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications