ಮೇಲ್ಸೇತುವೆ ನಾಮಕರಣ ಮುಂದೂಡಿಕೆಗೆ ಟ್ವಿಸ್ಟ್, ವಿರೋಧಿಸಿದ್ದು ಯಾರು ಗೊತ್ತಾ?
ಬೆಂಗಳೂರು, ಮೇ 29: ಕೊರೊನಾ ವೈರಸ್ ಸಂಕಷ್ಟದ ಲಾಕ್‌ಡೌನ್ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವುದಕ್ಕೆ ಮುಂದಾಗಿದ್ದ ರಾಜ್ಯ ಬಿಜೆಪಿ ಸರ್ಕಾರ ತಾತ್ಕಾಲಿಕವಾಗಿ ಹಿಂದೆ ಸರಿದಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಫ್ಲೈಓವರ್ ನಾಮಕರಣ ಕಾರ್ಯಕ್ರಮವನ್ನು ಮುಂದೂಡಿರುವುದಾಗಿ ಬಿಬಿಎಂಪಿ ಸ್ಪಷ್ಟನೆ ಕೊಟ್ಟಿದೆ. ಆದರೆ ಅದು ಸ್ಪಷ್ಟನೆ ಮಾತ್ರ. ಯಲಹಂಕ ಫ್ಲೈಓವರ್ ನಾಮಕರಣ ಕಾರ್ಯಕ್ರಮ ಮುಂದೂಡಿಕೆ ನಿರ್ಧಾರಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ವಿರೋಧ ಪಕ್ಷಗಳ ವಿರೊಧಕ್ಕೆ ಮಣಿದು ಬಿಜೆಪಿ ಸರ್ಕಾರ ನಾಮಕರಣದಿಂದ ಹಿಂದೆ ಸರಿದಿಲ್ಲ ಎನ್ನಲಾಗಿದೆ.
ಬೆಂಗಳೂರಿನ ಯಲಹಂಕದ ಡೈರಿ ಸರ್ಕಲ್ ಬಳಿ 43 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಕಳೆದ 3 ವರ್ಷಗಳಿಂದ ನಡೆಯುತ್ತಿದ್ದ ಕಾಮಗಾರಿ ಇದೀಗ ಮುಗಿದಿದ್ದು, ಯಶವಂತಪುರ ಮಾರ್ಗವಾಗಿ ಯಲಹಂಕ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ನಾಲ್ಕು ಪಥಗಳ ಮೇಲ್ಸೇತುವೆ ನೆರವಾಗಲಿದೆ. ಆದರೆ ಸರ್ಕಾರ ಲೋಕಾರ್ಪಣೆ ಕಾರ್ಯಕ್ರಮವನ್ನು ದಿಢೀರ್ ಮುಂದೂಡಿದೆ.

ಸಾವರ್ಕರ್ ಮೇಲ್ಸೇತುವೆ
ಯಲಹಂಕದ ಮೇಲು ಸೇತುವೆಗೆ 'ಸ್ವಾತಂತ್ರ ಯೋಧ ವೀರ ಸಾವರ್ಕರ್ ಮೇಲ್ಸೇತುವೆ' ಎಂದು ನಾಮಕರಣ ಮಾಡಲು ರಾಜ್ಯ ಬಿಜೆಪಿ ಸರ್ಕಾರ ತೀರ್ಮಾನ ಮಾಡಿತ್ತು. ಅದನ್ನೇ ಅನುಮೋದಿಸಿದ್ದ ಬಿಜೆಪಿ ಆಡಳಿತ ಬಿಬಿಎಂಪಿ ಕೂಡ ಲಾಕ್‌ಡೌನ್ ಸಂದರ್ಭದಲ್ಲಿಯೆ ಮೇಲು ಸೇತುವೆಗೆ ನಾಮಕರಣ ಮಾಡಿ ಲೋಕಾರ್ಪಣೆ ಮಾಡಲು ಮುಂದಾಗಿತ್ತು.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧಿಕೃತ ಕಾರ್ಯಕ್ರಮದಲ್ಲಿ ಸೇತುವೆ ಉದ್ಘಾಟನೆ ಸೇರಿಸಲಾಗಿತ್ತು. ಆದರೆ ದಿಢೀರ್ ಬೆಳವಣಿಗೆಯಲ್ಲಿ ಮೇಲು ಸೇತುವೆಗೆ ನಾಮಕರಣ ಕಾರ್ಯಕ್ರಮವನ್ನು ಬಿಬಿಎಂಪಿ ಮುಂದೂಡಿತ್ತು. ಅದಕ್ಕೆ ಕಾರಣವನ್ನೂ ಕೊಟ್ಟಿತ್ತು.

ಲಾಕ್‌ಡೌನ್ ಕಾರಣ
ಮೇಲು ಸೇತುವೆ ನಾಮಕರಣ ಮುಂದೂಡಲು ಲಾಕ್‌ಡೌನ್ ಕಾರಣ ಎಂದು ಬಿಬಿಎಂಪಿ ಪ್ರಕಟಣೆ ಕೊಟ್ಟಿತ್ತು. ಕೊರೊನಾ ವೈರಸ್ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಸೇರುವ ಸಾಧ್ಯತೆಗಳಿವೆ. ಹಾಗಾದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗುವುದಿಲ್ಲ.
ಹೀಗಾಗಿ ಕಾರ್ಯಕ್ರಮವನ್ನು ಮುಂದೂಡಿದ್ದೇವೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ಸ್ಪಷ್ಟನೆಕೊಡಲಾಗಿತ್ತು. ಆದರೆ ನಾಮಕರಣ ಮುಂದೂಡಲು ಕಾರಣ ಬಿಜೆಪಿಯಲ್ಲಿನ ನಾಯಕರು ಎಂಬ ಮಾಹಿತಿ ಇದೀಗ ಬಂದಿದೆ.

ಒಕ್ಕಲಿಗ ಮುಖಂಡರ ವಿರೋಧ?
ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿನ ಮೇಲು ಸೇತುವೆಗೆ ಸಾವರ್ಕರ್ ಹೆಸರಿಡೋದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ವಿರೋಧ ಕಾರಣ ಎಂದು ಮೊದಲು ಹೇಳಲಾಗಿತ್ತು. ಆದರೆ ಸ್ವಪಕ್ಷದವರ ವಿರೋಧವೂ ಇತ್ತು ಎನ್ನುವ ಮಾಹಿತಿ ಬಂದಿದೆ.
ಮೇಲ್ಸೇತುವೆಗೆ 'ನಾಡಪ್ರಭು ಕೆಂಪೇಗೌಡ ಮೇಲ್ಸೇತುವೆ' ಎಂದು ಹೆಸರನ್ನು ಇಡಲು ಬಿಜೆಪಿಯಲ್ಲಿನ ಹಲವು ನಾಯಕರು ಒತ್ತಾಯಿಸಿದ್ದರು. ಹೀಗಾಗಿ ಸ್ವಪಕ್ಷದಲ್ಲಿನ ಒತ್ತಡಗಳಿಂದ ಕಾರ್ಯಕ್ರಮ ಮುಂದೂಡಲಾಗಿದೆ ಎನ್ನಲಾಗಿದೆ.

ಸಾವರ್ಕರ್ ಹೆಸರನ್ನೇ ಇಡ್ತೇವೆ
ಈ ಮಧ್ಯೆ ಕಾರ್ಯಕ್ರಮ ಮುಂದೂಡಿದ್ದನ್ನು ಒಪ್ಪಿಕೊಂಡಿದ್ದ ಬಿಜೆಪಿ ನಾಯಕರು, ಮೇಲು ಸೇತುವೆಗೆ ನಾಮಕರಣ ಕಾರ್ಯಕ್ರಮ ಮುಂದಕ್ಕೆ ಹೋಗಿದೆ ಅಷ್ಟೇ. ಮುಂದೆಯೂ ಕೂಡ 'ಸ್ವಾತಂತ್ರ ಯೋಧ ವೀರ ಸಾವರ್ಕರ್ ಮೇಲ್ಸೇತುವೆ' ಎಂದೆ ನಾಮಕರಣ ಮಾಡಲಾಗುವುದು ಎಂದಿದ್ದಾರೆ.
ಕಂದಾಯ ಸಚಿವ ಆರ್. ಅಶೋಕ್, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಸೇರಿದಂತೆ ಬಿಜೆಪಿಯ ಹಲವು ನಾಯಕರು ಸೇತುವೆಗೆ ಸಾವರ್ಕರ್ ಹೆಸರನ್ನು ಇಟ್ಟೇ ತೀರುತ್ತೇವೆ ಎಂದಿದ್ದಾರೆ.












Click it and Unblock the Notifications