Namma Metro: ರೈಲ್ವೆ, ಬಸ್, ಮೆಟ್ರೋ ನಿಲ್ದಾಣಗಳಲ್ಲಿ 'ಸ್ತನ್ಯಪಾನ ಕೇಂದ್ರ' ಸ್ಥಾಪನೆಗೆ ಹೆಚ್ಚಿದ ಆಗ್ರಹ
ಬೆಂಗಳೂರು, ಸೆಪ್ಟಂಬರ್ 22: ಬೆಂಗಳೂರು ನಮ್ಮ ಮಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಸ್ತನ್ಯಪಾನಕ್ಕೆ ಜಾಗವಿಲ್ಲದೆ ಪರದಾಡಿದ ಘಟನೆಯು ವರದಿ ಆಗುತ್ತಿದ್ದಂತೆ ವಿವಿಧ ನಿಲ್ದಾಣಗಳಲ್ಲಿ ಮಹಿಳಾ ಆರೈಕೆ ಕೇಂದ್ರ/ಶಿಶುಗಳಿಗೆ ಹಾಲುಣಿಸುವ ಕೇಂದ್ರ ಸ್ಥಾಪಿಸಬೇಕು ಎಂಬ ಕೂಗು ಹೆಚ್ಚಾಗಿದೆ. ಈ ಕುರಿತು ಸರ್ಕಾರ, ಸಂಬಂಧಿಸಿದ ಸಾರಿಗೆ ಸಂಸ್ಥೆಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಬೆಂಗಳೂರು ಮಟ್ರೋ ಟ್ರಿನಿಟಿ ನಿಲ್ದಾಣ (ನೇರಳೆ ಮಾರ್ಗ) ದಲ್ಲಿ ತನ್ನ ಮಗುವಿಗೆ ಹಾಲುಣಿಸಲು ಸೂಕ್ತ ಜಾಗ ಇಲ್ಲದೇ ತಾಯಿಯೊಬ್ಬರು ಒದ್ದಾಡಿದ್ದರು. ಬಳಿಕ ತಾಯಿ ಸರಿಯಾದ ಜಾಗ ಇಲ್ಲದ್ದು ಕಂಡು ಕೊನೆಗೆ ವಿಧಿ ಇಲ್ಲದೇ ಪ್ಲಾಟ್‌ಫಾರ್ಮ್ ಬಳಿ ಅಡಗಿಕೊಂಡು ಸ್ತನ್ಯಪಾನ ಮಾಡಿದರು. ಆಗ ಅವರ ಪತಿ ಅವರಿಗೆ ಕಾವಲಾಗಿ ನಿಂತಿದ್ದನ್ನು ಯಾರೋ ಪ್ರಯಾಣಿಕರು ಸೆರೆ ಹಿಡಿದಿದ್ದರು.

ಈ ಘಟನೆ ಬೆಳಕಿಗೆ ಬಂದ ನಂತರ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ KSRTC, BMTC ಹಾಗೂ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಮಹಿಳಾ ಆರೈಕೆ ಕೇಂದ್ರ ಸ್ಥಾಪಿಸುವಂತೆ ಮಹಿಳೆಯರು ಆಗ್ರಹಿಸಿದ್ದಾರೆ.
ನಮ್ಮ ಮೆಟ್ರೋ ಅಧಿಕಾರಿಗಳು ಹೇಳಿದ್ದೇನು?
ಬೆಂಗಳೂರಿನಲ್ಲಿ 2017ರಿಂದಲೇ ಮಹಿಳಾ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ನಿಲ್ದಾಣಗಳಲ್ಲಿ ಸ್ತನ್ಯಪಾನ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಹಾಗೂ ಯಶವಂತಪುರ ನಿಲ್ದಾಣದಲ್ಲಿ ತಾಯಂದಿರಿಗೆ ಹಾಲುಣಿಸುವ ಕೇಂದ್ರ ನಿರ್ಮಿಸಿದ್ದೇವೆ ಎಂದು BMRCL ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಹಲವೆಡೆ ನಿರ್ಮಿಸಲಾಗುವುದು ಅಂತಲೂ ಮಾಹಿತಿ ಕೊಟ್ಟಿದ್ದಾರೆ.
ಹಾಗಾದರೆ ಸದ್ಯ ಬೆಂಗಳೂರಿನ ಯಾವ ನಿಲ್ದಾಣಗಳಲ್ಲಿ ಶಿಶುಗಳಿಗೆ ಹಾಲುಣಿಸುವ ಕೇಂದ್ರ ಸ್ಥಾಪನೆಗೆ ಆಗಿವೆ ಎಂದು ನೋಡುವುದಾದರೆ, ಯಶವಂತಪುರ, ಪೀಣ್ಯ ಮತ್ತು ಕೆಂಗೇರಿ ಉಪನಗರ ಮೆಟ್ರೋ ನಿಲ್ದಾಣಗಳಲ್ಲಿ ನಿರ್ಮಾಣ ಮಾಡಲಾಗಿದೆ.
ಇನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಎಂಟು ಬಸ್ ನಿಲ್ದಾಣಗಳಲ್ಲಿ ಮಹಿಳಾ ಆರೈಕೆ ಕೆಂದ್ರ ನಿರ್ಮಿಸಲಾಗಿದೆ. ಕೋರಮಂಗಲ, ವೈಟ್‌ಫೀಲ್ಡ್, ಯಲಹಂಕ, ಜಯನಗರ, ಶಾಂತಿ ನಗರ, ಮೆಜೆಸ್ಟಿಕ್, ಬನ್ನೇರುಘಟ್ಟ, ಬನಶಂಕರಿ ಮತ್ತು ದೊಮ್ಮಲೂರು ಸೇರಿದಂತೆ ಬಿಎಂಟಿಸಿ ಬಸ್‌ಗಳೂ ಒಂದೆಡೆ ಸೇರುವ ಬೃಹತ್ ನಿಲ್ದಾಣಗಳಲ್ಲಿ ಈ ಮಹಿಳಾ ಆರೈಕೆ ಕೇಂದ್ರ ಸ್ಥಾಪಿಸಲಾಗಿದೆ ಎಂದು ಈಟಿವಿ ಭಾರತ್ ವರದಿ ಮಾಡಿದೆ.
ಟಿಟಿಎಂಸಿ ಹೊರತು ಬೇರೆ ಕಡೆಗೂ ನಿರ್ಮಾಣವಾಗಲಿ
ಬೇಬಿ ಕೇರ್ ಸೆಂಟರ್ ಗಳನ್ನು ಕೇವಲ ದೊಡ್ಡ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಮಾತ್ರ ಮಾಡದೇ ಸಣ್ಣ ಸಣ್ಣ ಬಸ್ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಸ್ಥಾಪಿಸುವ ಮೂಲಕ ತಾಯಂದಿರಿಗೆ ಅನುಕೂಲ ಮಾಡಿಕೊಂಡುವಂತೆ ಮೆಜೆಸ್ಟಿಕ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಮಾತನಾಡಿದರು.
ಬೆಂಗಳೂರು ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಸುವ್ಯವಸ್ಥಿತವಾಗಿ ಮಹಿಳಾ ಆರೈಕೆ ಕೇಂದ್ರಗಳಿವೆ. ಇದು ಮಕ್ಕಳಿಗೆ ಹಾಲುಣಿಸಲು, ಆರೈಕೆಗೆ ಸಹಾಯಕ್ಕೆ ಬರಲಿವೆ. ರೈಲ್ವೆ ಅಧಿಕಾರಿಗಳು ಇದನ್ನು ಸುಸ್ಥಿತಿಯಲ್ಲಿ ಇಟ್ಟಿದ್ದಾರೆ. ಮಹಿಳಾ ವಿಶ್ರಾಂತಿ ಕೊಠಡಿ ಮತ್ತು ಊಟದ ಕೊಠಡಿ ಸ್ವಚ್ಛವಾಗಿದೆ ಎಂದು ಮಹಿಳೆಯೊಬ್ಬರು ಮಾಹಿತಿ ನೀಡಿದ್ದಾರೆ. ಇದೇ ರೀತಿ ಬೇರೆ ಬೇರೆ ಕಡೆಗಳಲ್ಲಿ ನಿರ್ಮಾಣವಾಗಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ..
ಇತ್ತೀಚೆಗೆ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಮಹಿಳಾ ಆರೈಕೆ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿದ ಕರ್ನಾಟಕ ರಾಜ್ಯ ಮಹಿಳಾ ಆರೋಗದ ಅಧ್ಯಕ್ಷ ಡಾ.ನಾಗಲಕ್ಷ್ಮೀ ಚೌಧರಿ ಅವರು ಬಿಎಂಆರ್‌ಸಿಎಲ್‌ಗೆ ಪತ್ರ ಮುಖೇನ ಮನವಿ ಮಾಡಿಕೊಂಡಿದ್ದರು.












Click it and Unblock the Notifications