BMTC: ಬಸ್ ಚಾಲಕರ ಮೇಲಿನ ಹಲ್ಲೆಗೆ ಕಡಿವಾಣ ಶೀಘ್ರ: ಗೃಹ ಇಲಾಖೆಗೆ ರಾಮಲಿಂಗಾ ರೆಡ್ಡಿ ಪತ್ರ
ಬೆಂಗಳೂರು, ಜೂನ್ 15: ತಾನು ಕೇಳಿದ ಸ್ಥಳದಲ್ಲಿ ಬಸ್ ನಿಲ್ಲಿಸಿಲ್ಲ ಎಂದು ಬಿಎಂಟಿಸಿ ಬಸ್ ಚಾಲಕನಿಗೆ ಮಹಿಳಾ ಉದ್ಯೋಗಿಯೊಬ್ಬರು ಚಪ್ಪಲಿಯಿಂದ ಹೊಡೆದ ಘಟನೆ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ. ಇದೇ ರೀತಿಯ ಘಟನೆಗಳು ಆಗಾಗ ಮರುಕಳಿಸುತ್ತಲೇ ಇವೆ. ಜನರಿಗಾಗಿ ಸೇವೆ ನೀಡುವ ಬಸ್ ಸಿಬ್ಬಂದಿ ಮೇಲಿನ ಹಲ್ಲೆ ತಡೆಗೆ ಹಾಗೂ ಸೂಕ್ತ ಕೈಗೊಳ್ಳುವಂತೆ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಭಾನುವಾರ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಪತ್ರ ಮುಖೇನ ಆಗ್ರಹಿಸಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಿಬ್ಬಂದಿಯು ಮೇಲೆ ಆಗಾಗ್ಗೆ ಹಲ್ಲೆಗಳು ನಡೆಯುತ್ತಿವೆ. ಶನಿವಾರ ನಡೆದ ಸರ್ಜಾಪುರ ರಸ್ತೆಯಲ್ಲಿನ ಹಲ್ಲೆ, ಅವಮಾನ ಸಂಗತಿ ಬೆನ್ನಲ್ಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಮಲಿಂಗಾ ರೆಡ್ಡಿ ಅವರು ಗೃಹ ಸಚಿವರಿಗೆ ಆಗ್ರಹಿಸಿದ್ದಾರೆ. ಒಂದು ಪತ್ರವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ರವಾನಿಸಿದ್ದಾರೆ.

ಪತ್ರದಲ್ಲಿ ರಾಮಲಿಂಗಾ ರೆಡ್ಡಿ ಅವರು, ಈ ಹಿಂದೆಯೂ ಹಲವಾರು ಈ ರೀತಿಯ ಪ್ರಕರಣಗಳು ನಡೆದಿದ್ದು, ನಾನು ಪೊಲೀಸ್
ಆಯುಕ್ತರು ಬೆಂಗಳೂರುರವರಿಗೆ ಪತ್ರ ಬರೆದು ಸೂಕ್ತ ಕ್ರಮ ತೆಗೆದುಕೊಳ್ಳಲು ಹಾಗೂ ಈ ಸಂಬಂಧ ಖುದ್ದು ವ್ಯವಸ್ಥಾಪಕ ನಿರ್ದೇಶಕರು ಬಿಎಂಟಿಸಿ ರವರಿಗೆ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ವಿವರಿಸಲು ಕೂಡ ಸೂಚಿಸಿದ್ದೇನೆ. ಈ ಎಲ್ಲಾ ಕ್ರಮಗಳ ಹೊರತಾಗಿಯೂ ಮತ್ತೊಂದು ಪ್ರಕರಣವು ಎರಡು ದಿನಗಳಿಂದಷ್ಟೇ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ಆಘಾತಕಾರಿಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಮಹಿಳಾ ಟೆಕ್ಕಿಯೊಬ್ಬರು ತಾವು ಕೋರಿದ ಕಡೆ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಚಾಲಕ ಹುಸೇನ್ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಇತ್ತೀಚೆಗೆ ಬಸ್ ಚಾಲಕರು ಹಾಗೂ ನಿರ್ವಾಹಕರ ಮೇಲೆ ಇಂತಹ ಹಲ್ಲೆ ಮತ್ತು ಅವಮಾನಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ಕಿಡಿಗೇಡಿಗಳು ಪ್ರಾಣಕ್ಕೆ ಸಂಚಕಾರ ತರುವಂತಹ ಪ್ರಯತ್ನವನ್ನೂ ನಡೆಸಿದ್ದಾರೆ. ಚಾಕುವಿನಿಂದ ಹಲ್ಲೆ ಮಾಡಿದ ಘಟನೆಯೂ ಈ ಹಿಂದೆ ನಡೆದಿತ್ತು. ಹೀಗಾಗಿ, ಇಂತಹ ನಡೆಯನ್ನು ತಪ್ಪಿಸಲು ಪೊಲೀಸ್ ಇಲಾಖೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಸಾರಿಗೆ ನೌಕರರ ಹಿತರಕ್ಷಣೆಗೆ ಬದ್ಧ
BMTC, KSRTC ಸೇರಿ ಯಾವುದೇ ಸಾರಿಗೆ ಸಂಸ್ಥೆಯ ಸಿಬ್ಬಂದಿಯ ಹಿತರಕ್ಷಣೆ ನಮ್ಮ ಬದ್ಧತೆಯಾಗಿದ್ದು, ನಮ್ಮ ಇಲಾಖೆಯ ಸಿಬ್ಬಂದಿ ಮೇಲೆ ನಡೆಯುವ ಹಲ್ಲೆ ಮತ್ತು ಅವಮಾನವನ್ನು ಸಹಿಸಲಾಗದು. ನಮ್ಮ ಸಿಬ್ಬಂದಿಯಿಂದ ಏನಾದರೂ ಪ್ರಮಾದವಾದರೆ, ದೂರು ನೀಡಿದ ಕೂಡಲೇ ವಿಚಾರಣೆ ನಡೆಸಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ನಾವು ಕೂಡ ಮುಲಾಜಿಲ್ಲದೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ, ಕಾನೂನು ಮೀರಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ. ಹೀಗಾಗಿ, ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಈ ರೀತಿಯ ಪ್ತಕರಣಗಳು ಮರುಕಳಿಸದಂತೆ ತಡೆಯಲು ಶಾಶ್ವತ ಪರಿಹಾರವನ್ನು ರೂಪಿಸುವಂತೆ ಅವರು ಕೋರಿದ್ದಾರೆ.












Click it and Unblock the Notifications