ಮನೆಯ ಬಾತ್‌ರೂಮಿನಲ್ಲಿ ಟೆಕ್ಕಿ ತಾಯಿಯ ಶವ ಪತ್ತೆ, ತಂದೆ ನಾಪತ್ತೆ
ಬೆಂಗಳೂರು, ಜೂನ್ 17: ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ತಾಯಿಯ ಶವ ಬಾತ್‌ರೂಮಿನಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಂದೆ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಾರತ್ತಹಳ್ಳಿ ಸಮೀಪದ ಬೋಗನಹಳ್ಳಿ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ಕೊಲೆಯಲ್ಲಿ ಆಕೆಯ ಪತಿಯ ಕೈವಾಡವಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ರಿಯಲ್ ಎಸ್ಟೇಟ್ ಬಿಜಿನೆಸ್ ಮೆನ್ ಆಗಿರುವ ದೊಡ್ಡೇಗೌಡ ಅವರ ಪತ್ನಿ ಮಂಜುಳಾ ಕೊಲೆಯಾದವರು. ಬಾತ್‌ರೂಮಿನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರ ಪುತ್ರ ಅಭಿಶೇಕ್ ಬಾಗ್ಮನೆ ಟೆಕ್‌ಪಾರ್ಕ್‌ನಲ್ಲಿ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ದೊಡ್ಡೇಗೌಡ ಅವರ ಬಳಿ ಇದ್ದ ಮಹೀಂದ್ರ ಸ್ಕಾರ್ಪಿಯೋ ವಾಹನವನ್ನು ತೆಗೆದುಕೊಂಡು ಹೋಗಿದ್ದು ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ತಾಯಿ ರಾತ್ರಿ 8.45ರ ಸುಮಾರಿಗೆ ಕೊಲೆಯಾಗಿರಬಹುದು ಎಂದು ಅಂದಾಜಿಸಲಾಗಿದೆ.
ಅಭಿಶೇಕ್ ಮನೆಗೆ ಬಂದು ಕೆಲವೇ ಹೊತ್ತಿನಲ್ಲಿ ತಂದೆ-ತಾಯಿ ಇದ್ದ ಕೋಣೆಗೆ ಹೋದಾಗ ಬಾಗಿಲು ತೆರದಿತ್ತು. ಬಾತ್‌ರೂಮಿಗೆ ಹೋಗಿ ನೋಡಿದಾಗ ತಾಯಿಯ ಶವ ಕಾಣಿಸಿತ್ತು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದರು. ಮೂಗು ಹಾಗೂ ಬಾಯಲ್ಲಿ ಗಂಭೀರ ಗಾಯಗಳಾಗಿದ್ದವು.












Click it and Unblock the Notifications