Bengaluru Winter: ತುಂತುರು ಮಳೆಯ ನಡುವೆ ಬೆಂಗಳೂರಿನಲ್ಲಿ ಮಂಜಿನ ಮುಂಜಾನೆ! ಚಳಿಗಾಲ ಆರಂಭ
ಬೆಂಗಳೂರು ನವೆಂಬರ್ 11: ಇತ್ತೀಚೆಗೆ ಬೆಂಗಳೂರು ವಾತಾವರಣ ಬದಲಾಗುತ್ತಿದೆ. ದಿನಕಳೆದಂತೆ ಬೆಳ್ಳಂಬೆಳಗ್ಗೆ ಮಂಜು ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಆಗಾಗ ಆಗುವ ಸಾಧಾರಣ ಮಳೆ ಹಾಗೂ ಬದಲಾಗುತ್ತಿರುವ ವಾತಾವರಣ ಕಣ್ಣಿಗೆ ಮಾತ್ರವಲ್ಲದೆ ಮನಸ್ಸಿಗೂ ಹಿತ ನೀಡುತ್ತಿದೆ. ತುಂತುರು ಮಳೆಯ ನಡುವೆ ಬೆಂಗಳೂರಿನಲ್ಲಿ ಮಂಜಿನ ಮುಂಜಾನೆ ಚಳಿಗಾಲದ ಆರಂಭವನ್ನು ಸೂಚಿಸಿದೆ.
ಹೌದು.. ನಗರದಲ್ಲಿ ಕಳೆದೆರೆಡು ದಿನಗಳಿಂದ ಮುಂಜಾನೆಯಲ್ಲಿ ಮಂಜು ಹೆಚ್ಚಾಗುತ್ತಿದೆ. ಭಾನುವಾರ ರಾತ್ರಿ ನಗರದಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾದರೆ ಬೆಳಗ್ಗೆ ಮಂಜು ಕವಿದಿರುವುದು ಗೋಚರಿಸಿದೆ. ಜೊತೆಗೆ ನಗರದಲ್ಲಿ ಮುಂದಿನ ಕೆಲ ದಿನಗಳವರೆಗೆ ಮೋಡ ಕವಿದ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಭಾನುವಾರ ನವೆಂಬರ್ 10 ರಂದು ಹೆಚ್ಚಿನ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಯಂತೆ ಮಳೆಯಾಗಿಲ್ಲ. ಐಎಂಡಿ ಮುನ್ಸೂಚನೆಯ ಪ್ರಕಾರ, ಬೆಂಗಳೂರಿನಲ್ಲಿ ನವೆಂಬರ್ 15 ರವರೆಗೆ ಮೋಡ ಕವಿದ ವಾತಾವರಣವಿರುತ್ತದೆ. ಗರಿಷ್ಠ ತಾಪಮಾನವು 28 ರಿಂದ 29 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಕನಿಷ್ಠ ತಾಪಮಾನ 19 ಮತ್ತು 20 ರ ನಡುವೆ ನೆಲೆಸಲಿದೆ ಎಂದು ಐಎಂಡಿ ತಿಳಿಸಿದೆ.
ಬಿಟಿಎಂ ಲೇಔಟ್, ಎಚ್‌ಬಿಆರ್ ಲೇಔಟ್ ಮತ್ತು ಬಾಣಸವಾಡಿ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಭಾನುವಾರ ಬೆಳಗಿನ ಜಾವ 1.30ರವರೆಗೆ ತುಂತುರು ಮಳೆಯಾಗಿದೆ. ಇದರಿಂದಾಗಿ ನಗರದಲ್ಲಿ ಮುಂಜಾನೆಯ ವಾತಾವರಣ ಬದಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮುಂಜಾನೆ ಮಂಜು ಕವಿದಿರುವ ಫೋಟೋಗಳು ವೈರಲ್ ಆಗುತ್ತಿದ್ದು ಜನ ಚಳಿಗಾಲ ಆರಂಭವಾಗುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
20°c , seriously Bangalore?? And fog 😶 pic.twitter.com/tGY9mfLWjq
— Nishant arora (@nishant_aroraa) November 10, 2024
ಬೆಂಗಳೂರಿನ ಹವಾಮಾನದ ಬಗ್ಗೆ ನಿವಾಸಿಯೊಬ್ಬರು ಹಂಚಿಕೊಂಡ ಫೋಟೋ ಭಾರೀ ವೈರಲ್ ಆಗಿದೆ. 'ಬೆಳಿಗ್ಗೆ ಚಳಿಯ ಅನುಭವ' ಎಂಬ ಶೀರ್ಷಿಕೆಯೊಂದಿಗೆ ಮಂಜು ಆವರಿಸಿರುವ ಫೋಟೋ ಹಂಚಿಕೊಂಡಿದ್ದಾರೆ. ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಅವರು ಹೀಗೆ ಬರೆದಿದ್ದಾರೆ, "ಗಾಳಿಯಲ್ಲಿ ಸ್ವಲ್ಪ ಚಳಿ, ಚಳಿಗಾಲವು ಪ್ರಾರಂಭವಾಗುತ್ತಿದೆ ಎಂದು ತೋರುತ್ತದೆ. ಆದರೆ ಬೆಂಗಳೂರಿನ ಹವಾಮಾನ ಯಾವಾಗಲ ಬದಲಾಗುತ್ತೋ ನಿಮಗೆ ತಿಳಿದಿಲ್ಲ'' ಎಂದಿದ್ದಾರೆ.
ಅಕ್ಟೋಬರ್‌ನಲ್ಲಿ ನಗರದಲ್ಲಿ ಭಾರೀ ಮಳೆ
ಒಂದು ತಿಂಗಳ ಹಿಂದೆ ಬೆಂಗಳೂರು ನಗರದಲ್ಲಿ ಭಾರೀ ಮಳೆಯಿಂದಾಗಿ ನಗರದಾದ್ಯಂತ ಭಾರೀ ಸಮಸ್ಯೆ ಉಂಟಾಗಿತ್ತು. ಧಾರಾಕಾರ ಮಳೆಗೆ ನಗರ ಜಲಾವೃತಗೊಂಡು ಪ್ರಮುಖ ಪ್ರದೇಶಗಳಲ್ಲಿ ಗಂಟೆಗಟ್ಟಲೆ ಸಂಚಾರ ಸ್ಥಗಿತಗೊಂಡಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸರು ರಸ್ತೆಗಳನ್ನು ತೆರವುಗೊಳಿಸಲು ಪ್ರಯತ್ನಿಸಿದರೂ, ಹಲವಾರು ಪ್ರಯಾಣಿಕರು ಟ್ರಾಫಿಕ್ ಜಾಮ್‌ನಲ್ಲಿ ಗಂಟೆಗಟ್ಟಲೆ ಸಿಲುಕಿಕೊಂಡರು.
ಹೆಬ್ಬಾಳ ಸಮೀಪದ ಮಾನ್ಯತಾ ಟೆಕ್ ಪಾರ್ಕ್ ಸಂಪೂರ್ಣ ಮುಳುಗಡೆಯಾಗಿ, ಐಟಿ ಕಂಪನಿಗಳು ಉದ್ಯೋಗಿಗಳಿಗೆ ತಾತ್ಕಾಲಿಕವಾಗಿ ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಬೇಕಾದ ಅನಿವಾರ್ಯತೆ ಎದುರಾಗಿದ್ದನ್ನು ನಾವು ನೋಡಿದ್ದೇವೆ. ಸಾಮಾಜಿಕ ಮಾಧ್ಯಮ ಬಳಕೆದಾರರು ರಸ್ತೆಗಳ ಕಳಪೆ ಸ್ಥಿತಿಯ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದು ಇದೆ.
ವಿಶೇಷವಾಗಿ ಬಹುರಾಷ್ಟ್ರೀಯ ಕಂಪನಿಗಳ ಪ್ರಮುಖ ಕೇಂದ್ರವಾದ ಹೊರ ವರ್ತುಲ ರಸ್ತೆಯಲ್ಲಿ ರಸ್ತೆಗಳು ತೀರಾ ಹದಗೆಟ್ಟು ಹೋಗಿವೆ. ನಗರದ ಗುಂಡಿಗಳ ಸಮಸ್ಯೆಗೆ ಪರಿಹಾರ ನೀಡುವಂತೆ ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರೂ, ಬೆಂಗಳೂರಿನ ವಿವಿಧ ಭಾಗಗಳಲ್ಲಿ ಈ ಸಮಸ್ಯೆಗಳು ಚಾಲ್ತಿಯಲ್ಲಿವೆ.












Click it and Unblock the Notifications