ನರೇಂದ್ರ ಮೋದಿ ಸ್ವಾಗತಿಸಲಿದ್ದಾನೆ ವರುಣ ದೇವ!
ಬೆಂಗಳೂರು, ನ. 16 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಬೆಂಗಳೂರಿನಲ್ಲಿ ಸ್ವಾಗತಿಸಲು ಬಿಜೆಪಿಯ ಸಾವಿರಾರು ಕಾರ್ಯಕರ್ತರು ಸಜ್ಜಾಗಿದ್ದಾರೆ. ಹಾಗೆಯೇ, ವರುಣ ದೇವ ಸಹ ಮೋದಿ ಸ್ವಾಗತಕ್ಕೆ ಸಜ್ಜಾಗಿದ್ದಾನೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾಗ ಕುಸಿತದ ಪರಿಣಾಮ ರಾಜ್ಯದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಭಾನುವಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದರಿಂದ ಮರುಣ ದೇವ ಮೋದಿಗೆ ಮಳೆಯ ಸಿಂಚನ ನೀಡುವ ಸಾಧ್ಯತೆ ಇದೆ.

ಶನಿವಾರ ಬೆಳಗ್ಗಿನಿಂದಲೇ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಸಂಜೆ ಅಥವ ಭಾನುವಾರ ಮಳೆ ಸುರಿಯುವ ಮುನ್ಸೂಚನೆ ನೀಡಿದೆ. ಭಾನುವಾರ ನರೇಂದ್ರ ಮೋದಿ ಸಮಾವೇಶದ ಸಮಯದಲ್ಲೇ ಮಳೆ ಬಂದರೆ, ಕಾರ್ಯಕ್ರಮಕ್ಕೂ ತೊಂದರೆ ಆಗುವುದು ಖಚಿತ.
ಭಾನುವಾರ ಮುಂಜಾನೆಯಿಂದಲೇ ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ತುಂತುರು ಮಳೆಯಾಗಲಿದೆ. ಮಧ್ಯಾಹ್ನದ ವೇಳೆಗೆ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. 10 ರಿಂದ 30 ಮಿ.ಮೀ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.
ನರೇಂದ್ರ ಮೋದಿ ಸಮಾವೇಶ ನಡೆಯಲಿರುವ ಅರಮನೆ ಮೈದಾನದಲ್ಲಿ ಮೋದಿ ಭಾಷಣ ಮಾಡುವ ವೇದಿಕೆಗೆ ಮಳೆ ಬಂದರೆ ರಕ್ಷಣೆ ದೊರೆಯುತ್ತದೆ. ಆದರೆ, ಸಮಾವೇಶಕ್ಕೆ ಆಗಮಿಸುವ ಮೂರು ಲಕ್ಷಕ್ಕೂ ಅಧಿಕ ಜನರು ಕುಳಿತುಕೊಳ್ಳುವ ಪ್ರದೇಶದಲ್ಲಿ ಯಾವುದೇ ರಕ್ಷಣಾ ವ್ಯವಸ್ಥೆ ಮಾಡಿಲ್ಲ. ಆದ್ದರಿಂದ ಮಳೆ ಸುರಿದರೆ, ಜನರು ಒದ್ದೆಯಾಗಬೇಕಾಗುತ್ತದೆ. (ಮೋದಿ ಅಭಿಮಾನಿಗಳಿಗೆ ಉಪ್ಪಿಟ್ಟು, ಮೈಸೂರ್ ಪಾಕ್)
ಬಂಗಾಳಕೊಲ್ಲಿಯ ಚಂಡಮಾರುತದ ಪ್ರಭಾವ ತಮಿಳುನಾಡು, ಆಂಧ್ರಪ್ರದೇಶದ ದಕ್ಷಿಣ ಭಾಗ, ಕರ್ನಾಟಕದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಹೆಚ್ಚಾಗಿರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದ್ದರಿಂದ ಭಾನುವಾರ ಮೋದಿಗೆ ವರುಣ ಸ್ವಾಗತ ಕೋರುತ್ತಾನೆಯೇ ಎಂದು ಕಾದು ನೋಡಬೇಕು.











Click it and Unblock the Notifications