ಬೆಂಗಳೂರು ನಗರಕ್ಕೆ ಪ್ರತ್ಯೇಕ ಆರೋಗ್ಯ ಆಯುಕ್ತರ ನೇಮಕ?
ಬೆಂಗಳೂರು, ಜುಲೈ 23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರು ನಗರಕ್ಕೆ ಪ್ರತ್ಯೇಕ ಆರೋಗ್ಯ ಆಯುಕ್ತರನ್ನು ನೇಮಕ ಮಾಡುವಂತೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಆರೋಗ್ಯ ಇಲಾಖೆ ಈ ಕುರಿತು ಶೀಘ್ರವೇ ತೀರ್ಮಾನವನ್ನು ಕೈಗೊಳ್ಳುವ ನಿರೀಕ್ಷೆ ಇದೆ.
ಬೆಂಗಳೂರು ನಗರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡಲು ಬೆಂಗಳೂರು ಆರೋಗ್ಯ ಆಯುಕ್ತರನ್ನು ನೇಮಕ ಮಾಡಲು ಬಿಬಿಎಂಪಿ ಪ್ರಸ್ತಾವನೆಯನ್ನು ಆರೋಗ್ಯ ಇಲಾಖೆಗೆ ಸಲ್ಲಿಕೆ ಮಾಡಿದೆ.

ಸದ್ಯ ಬಿಬಿಎಂಪಿಯ ವಿಶೇಷ ಆಯುಕ್ತರಾಗಿ (ಆರೋಗ್ಯ) ಕಿಶೋರ್ ವಿಕಾಸ್ ಸುರಾಳ್ಕರ್ ಇದ್ದಾರೆ. ಬಿಬಿಎಂಪಿ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದರೆ ಬೆಂಗಳೂರು ನಗರದಲ್ಲಿರುವ ಎಲ್ಲಾ ಆರೋಗ್ಯ ಸೇವೆಗಳು ಇವರ ವ್ಯಾಪ್ತಿಗೆ ಸೇರಲಿವೆ.
ಏನಿದು ಪ್ರಸ್ತಾವನೆ?; ಬೆಂಗಳೂರು ನಗರಕ್ಕೆ ಪ್ರತ್ಯೇಕ ಆರೋಗ್ಯ ಆಯುಕ್ತರು ನೇಮಕವಾದರೆ ಅವರು ಪ್ರಾಥಮಿಕವಾಗಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮತ್ತು ನೇರವಾಗಿ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅವರಿಗೆ ವರದಿ ಮಾಡಿಕೊಳ್ಳುತ್ತಾರೆ. ಅಲ್ಲದೇ ನಗರ ವ್ಯಾಪ್ತಿಯ ವೈದ್ಯಕೀಯ ಕಾಲೇಜುಗಳಿಗೆ ನಿರ್ದೇಶಕರಾಗಲಿದ್ದಾರೆ.
ಬಿಬಿಎಂಪಿಯ ಆರೋಗ್ಯ ವಿಭಾಗದ ಅಧಿಕಾರಿಗಳು ಕೆಲವು ದಿನಗಳ ಹಿಂದೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿಯಾಗಿದ್ದರು. ಆಗ ಪ್ರತ್ಯೇಕ ಆರೋಗ್ಯ ಆಯುಕ್ತರನ್ನು ನೇಮಕ ಮಾಡುವ ಕುರಿತು ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆ. "ಹೌದು ನಮಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಕುರಿತು ಶೀಘ್ರದಲ್ಲಿಯೇ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ" ಎಂದು ಸಚಿವರು ಹೇಳಿದ್ದಾರೆ.
ಕಿಶೋರ್ ವಿಕಾಸ್ ಸುರಾಳ್ಕರ್ ಈ ಕುರಿತು ಮಾತನಾಡಿದ್ದು, "ಈ ಕುರಿತು ಆರೋಗ್ಯ ಇಲಾಖೆ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ಬೆಂಗಳೂರು ನಗರದಲ್ಲಿರುವ ಹಲವಾರು ಆರೋಗ್ಯ ಸೇವೆಗಳು ಈಗ ಬಿಬಿಎಂಪಿ, ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿವೆ. ಒಂದು ವೇಳೆ ಪ್ರತ್ಯೇಕ ಆರೋಗ್ಯ ಆಯುಕ್ತರ ನೇಮಕವಾದರೆ ಎಲ್ಲಾ ಸೇವೆಗಳು ಒಬ್ಬರ ಅಡಿ ಬರುತ್ತದೆ. ಆಗ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು, ಆರೋಗ್ಯ ಸೇವೆಗಳ ಮೇಲುಸ್ತುವಾರಿಗೆ ಸಹಾಯಕವಾಗಲಿದೆ" ಎಂದು ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ. ರಂದೀಪ್ ಈ ಕುರಿತು ಮಾತನಾಡಿ, "ಹೌದು ಈ ಕುರಿತ ಪ್ರಸ್ತಾವನೆ ನಮಗೆ ತಲುಪಿದೆ. ಇದರ ಸಾಧಕ ಬಾಧಕದ ಕುರಿತು ನಾವು ಚರ್ಚೆಯನ್ನು ನಡೆಸುತ್ತಿದ್ದೇವೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ಉಸ್ತುವಾರಿ, ರಾಷ್ಟ್ರೀಯ ಆರೋಗ್ಯ ಮಿಷನ್ ಕಾರ್ಯಕ್ರಮಗಳನ್ನು ಹೇಗೆ ಅನುಷ್ಠಾಣಗೊಳಿಸಬೇಕು? ಎಂದು ರೂಪುರೇಷೆ ತಯಾರು ಮಾಡಲಾಗುತ್ತಿದೆ" ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬೆಂಗಳೂರು ನಗರಕ್ಕೆ ಪ್ರತ್ಯೇಕ ಆರೋಗ್ಯ ಆಯುಕ್ತರನ್ನು ನೇಮಕ ಮಾಡುವಂತೆ ಸಲ್ಲಿಕೆಯಾದ ಪ್ರಸ್ತಾವನೆ ಕುರಿತು ವಿವರವಾದ ವರದಿ ತಯಾರು ಮಾಡಿ ಆರೋಗ್ಯ ಸಚಿವರಿಗೆ ಸಲ್ಲಿಕೆ ಮಾಡಲಿದ್ದಾರೆ. ಬೆಂಗಳೂರು ನಗರದ ಜನರ ಹಿತದೃಷ್ಟಿಯನ್ನು ಮುಂದಿಟ್ಟುಕೊಂಡು ಸಚಿವರು ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, "ಬಿಬಿಎಂಪಿ ವಲಯದ ಆರೋಗ್ಯ ಸೇವೆಗಳ ಪರಿಷ್ಕರಣೆ ಕುರಿತು ಚರ್ಚೆ ಮಾಡಿದ್ದೇವೆ. ಪಾಲಿಕೆ ವ್ಯಾಪ್ತಿಯ ಆರೋಗ್ಯ ಸೇವೆಗಳ ಕುರಿತು ಹಲವು ಗೊಂದಲಗಳಿವೆ. ಪರಿಷ್ಕರಣೆ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತರು, ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗುತ್ತಿದೆ" ಎಂದು ಹೇಳಿದ್ದಾರೆ.












Click it and Unblock the Notifications