ದೇಶದ ಮಣ್ಣು ಮಾರಿದವರಿಗೆ ನನ್ನ ಬಗ್ಗೆ ಮಾತನಾಡುವ ಹಕ್ಕಿಲ್ಲ: ಕುಮಾರಸ್ವಾಮಿ
ಬೆಂಗಳೂರು, ನವೆಂಬರ್ 29: ಈ ದೇಶದ ಮಣ್ಣನ್ನು ಮಾರಿದವರಿಗೆ ನನ್ನ ಬಗ್ಗೆ ಮಾತನಾಡಲು ಯಾವುದೇ ಹಕ್ಕಿಲ್ಲ. ವಿದೇಶಗಳಿಗೆ ಈ ದೇಶದ ಮಣ್ಣನ್ನು ಮಾರಿಕೊಂಡು ಹೋದಿರಲ್ಲ ನಿನಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಗ್ಯ ಸಚಿವ ಶ್ರೀರಾಮುಲು ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಶ್ರೀರಾಮುಲು ಅವರಿಗೆ ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು. ಕಾವಿ ಬಟ್ಟೆ ಹಾಕಿಕೊಂಡು, ಗಡ್ಡ ಬಿಟ್ಟು ಶೋಕಿ ಮಾಡೋದಲ್ಲಪ್ಪ ರಾಜಕೀಯ ಅಂದ್ರೆ ಎಂದು ಟೀಕಿಸಿದರು.
ನಿನ್ನ ಸಮುದಾಯದ ಮಹಿಳೆಯರಿಗೆ ಅನ್ಯಾಯವಾದಾಗ ನೀನು ಹಾಗೂ ಮುಖ್ಯಮಂತ್ರಿ ಎಲ್ಲೋಗಿದ್ದೀರಿ? ಯಾವ ಸಮುದಾಯಕ್ಕೆ ನೀನು ಮಹಾನ್ ಲೀಡರ್? ಈ ಹಿಂದೆ ನೀನು ಗದಗ ಉಸ್ತುವಾರಿಯಾಗಿದ್ದಾಗ ಏನು ಮಾಡಿದ್ದೀಯಾ? ಎಂದು ಪ್ರಶ್ನಿಸಿದರು.

ದೇವೇಗೌಡರ ಕುಟುಂಬ ಭಾವನಾತ್ಮಕ ಕುಟುಂಬ, ಬಡವರ ಕಷ್ಟಕ್ಕೆ ನಮಗೆ ಕಣ್ಣೀರು ಬರುತ್ತದೆ, ನಿಮ್ಮ ಹಾಗೆ ನಾವಲ್ಲ ಎಂದರು. ಡಿಸೆಂಬರ್ ನಂತರ ಈ ರಾಜ್ಯದಲ್ಲಿ ಏನಾಗುತ್ತದೆ ಎಂದು ನೋಡು, ರಾಜಕೀಯ ಧ್ರುವೀಕರಣ ಅಲ್ಲ, ರಾಜಕೀಯ ಶುದ್ದೀಕರಣವಾಗುತ್ತದೆ ಎಂದರು.
ಶ್ರೀರಾಮುಲು ಅವರೇ ಉಳಿದ ರಾಜಕೀಯ ನಾಯಕರ ಬಗ್ಗೆ ಏನಾದರೂ ಮಾತನಾಡಿಕೊಳ್ಳಲಿ ಆದರೆ, ನನ್ನ ಬಗ್ಗೆ ಮಾತಾಡುವಾಗ ಎಚ್ಚರವಿರಲಿ ಎಂದು ಎಚ್ಚರಿಕೆ ನೀಡಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಎಸ್.ಟಿ.ಸೋಮಶೇಖರ್, ಕಾಂಗ್ರೆಸ್ ನಿಂದ ಪಾಳ್ಯ ನಾಗರಾಜ್ ಮತ್ತು ಜೆಡಿಎಸ್ ನಿಂದ ಜವರಾಯೀಗೌಡ ಸ್ಪರ್ಧಿಸುತ್ತಿದ್ದಾರೆ. ಡಿಸೆಂಬರ್ 05 ರಂದು ಉಪ ಚುನಾವಣೆ ಮತದಾನ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications