ಗೂಂಡಾ ಪ್ರವೃತ್ತಿಯ ಪ್ರಮೋದ್ ಮುತಾಲಿಕ್‌ನನ್ನು ನಿಮ್ಹಾನ್ಸ್‌ಗೆ ದಾಖಲಿಸಬೇಕು: ಜಮೀರ್
ಬೆಂಗಳೂರು, ಜು. 07: ''ಮಸೀದಿಗಳಲ್ಲಿ ಧ್ವನಿವರ್ಧಕ ತೆಗೆಸಲು ಸರ್ಕಾರಕ್ಕೆ ಗಡುವು ಕೊಡೋಕೆ ಮುತಾಲಿಕ್ ಯಾರು ? ಗೂಂಡಾ ಪ್ರವೃತ್ತಿ ತೋರುತ್ತಿರುವ ಮುತಾಲಿಕ್ ನನ್ನು ನಿಮ್ಹಾನ್ಸ್ ಗೆ ದಾಖಲಿಸಬೇಕು''
ಚಾಮರಾಜಪೇಟೆ ಶಾಸಕ ಬಿ.ಝಡ್ ಜಮೀರ್ ಅಹಮದ್ ಖಾನ್ ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್ ಬಗ್ಗೆ ಮಂಗಳವಾರ ಹೇಳಿದ ಮಾತಿದು.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಸೀದಿಗಳಲ್ಲಿ ಧ್ವನಿ ವರ್ಧಕ ಅಳವಡಿಕೆ ಸಂಬಂಧ ಸರ್ಕಾರಕ್ಕೆ ಶುಲ್ಕ ಪಾವತಿಸಿ ಅನುಮತಿ ಪಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜಮೀರ್ ಅಹಮದ್ ಖಾನ್, ಮಸೀದಿಗಳಲ್ಲಿ ಧ್ವನಿ ವರ್ಧಕ ತೆಗೆಸುವಂತೆ ಸರ್ಕಾರಕ್ಕೆ ಗಡುವು ಕೊಟ್ಟಿರುವ ಮುತಾಲಿಕ್ ವಿರುದ್ಧ ಹರಿಹಾಯ್ದರು.

ನ್ಯಾಯಾಲಯದ ಆದೇಶವನ್ನು ಸರಿಯಾಗಿ ತಿಳಿದುಕೊಳ್ಳದೇ ತಾನೇ ಸರ್ಕಾರ, ತನ್ನಿಂದಲೇ ಸರ್ಕಾರ ಎಂಬಂತೆ ವರ್ತಿಸುತ್ತಿರುವ ಗೂಂಡಾ ಪ್ರವೃತ್ತಿಯ ಪ್ರಮೋದ್ ಮುತಾಲಿಕ್ ಮಾನಸಿಕ ಸ್ಥಿಮಿತತೆ ಕಳೆದಿಕೊಂಡಿದ್ದಾನೆ. ನಿಮ್ಹಾನ್ಸ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಸಲಹೆ ನೀಡಿದರು.
ಹೈಕೋರ್ಟ್ ಆಗಲಿ, ಸುಪ್ರೀಂ ಕೋರ್ಟಾಗಲಿ, ಧ್ವನಿವರ್ಧಕಗಳನ್ನು ತೆಗೆಯುವಂತೆ ಎಲ್ಲಿಯೂ ಸೂಚಿಸಿಲ್ಲ. ಬದಲಾಗಿ, ನಿಗದಿತ ಸ್ಥಳಗಳಲ್ಲಿ ನಿಗದಿತ ಸಮಯದಲ್ಲಿ ಇಂತಿಷ್ಟು ಡೆಸಿಬಲ್ ಪ್ರಮಾಣದಲ್ಲಿ ಧ್ವನಿವರ್ಧಕಗಳನ್ನು ಬಳಸುವಂತೆ ನ್ಯಾಯಾಲಯ ಆದೇಶಿಸಿದೆ. ಧ್ವನಿವರ್ಧಕಗಳ ಬಳಕೆಗೆ ಪರವಾನಗಿ ಪಡೆಯುವುದಕ್ಕಾಗಿಯೇ ಸರ್ಕಾರ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಲು ಅವಕಾಶವನ್ನೂ ನೀಡಿದೆ. ಇದ್ಯಾವುದನ್ನೂ ಸರಿಯಾಗಿ ತಿಳಿದುಕೊಳ್ಳದೇ, ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಮೋದ್ ಮುತಾಲಿಕ್ ಮನಬದಂತೆ ಹೇಳಿಕೆ ನೀಡುತ್ತಿದ್ದಾನೆ ಎಂದು ಜಮೀರ್ ಕಿಡಿ ಕಾರಿದರು.
ಶುಲ್ಕ ಪಾವತಿಸಿದ ಜಮೀರ್:
ಚಾಮರಾಜಪೇಟೆ ಕ್ಷೇತ್ರದ ವ್ಯಾಪ್ತಿಯ ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಸ್ವತಃ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ ಶಾಸಕ ಜಮೀರ್ ಅಹ್ಮದ್ ಖಾನ್ ಪರವಾನಗಿ ಕೊಡಿಸಿದ್ದಾರೆ.
ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕಗಳನ್ನು ಬಳಕೆಗೆ 450 ರೂಪಾಯಿ ಶುಲ್ಕ ಪಾವತಿಯೊಂದಿಗೆ ಹೊಸ ನಮೂನೆಯ ಅರ್ಜಿಯನ್ನು ಸಲ್ಲಿಸಿ ಪರವಾನಗಿ ಪಡೆಯುವಂತೆ ಸರ್ಕಾರವು ಸೂಚಿಸಿತ್ತು. ಆ ಪ್ರಕಾರ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಸೀದಿಗಳು, ಮಂದಿರಗಳು ಮತ್ತು ಚರ್ಚ್ ಗಳು ಸೇರಿದಂತೆ ಧಾರ್ಮಿಕ ಕೇಂದ್ರಗಳ ಪರವಾಗಿ ಜಮೀರ್ ಅಹ್ಮದ್ ಖಾನ್ ಶುಲ್ಕ ಪಾವತಿಸಿ ಪರವಾನಗಿಯನ್ನು ವಿತರಣೆ ಮಾಡಿದರು.












Click it and Unblock the Notifications