Get Updates
Get notified of breaking news, exclusive insights, and must-see stories!

ಡಿಕೆಶಿ VS ಆರ್.ಅಶೋಕ್: ಕನಕಪುರದಲ್ಲಿ ‘ಬಂಡೆ’ ಎಷ್ಟು ಗಟ್ಟಿ?

ಬೆಂಗಳೂರು: ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೇನು ಕೆಲವೇ ಗಂಟೆ ಮಾತ್ರ ಬಾಕಿ ಇದ್ದು, ಪ್ರತಿಯೊಂದು ಪಕ್ಷದ ಹಣೆಬರಹ ನಾಳೆ ಮಧ್ಯಾಹ್ನದ ಒಳಗೆ ಸ್ಪಷ್ಟವಾಗಲಿದೆ. ಆದರೆ ಇದಕ್ಕೂ ಮುನ್ನ ಹೈವೋಲ್ಟೇಜ್ ಕ್ಷೇತ್ರ ಕನಕಪುರದ ಬಗ್ಗೆ ಚರ್ಚೆ ಶುರುವಾಗಿದೆ. ಆರ್.ಅಶೋಕ್ ಈ ಬಾರಿ ಡಿಕೆಶಿ ವಿರುದ್ಧ ಗೆಲ್ತಾರಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಕನಕಪುರ ಕ್ಷೇತ್ರದಲ್ಲಿ ಸತತ 7 ಗೆಲುವು ಸಾಧಿಸಿರುವ ಡಿ.ಕೆ.ಶಿವಕುಮಾರ್ ಸೋಲಿಸಲು ಬಿಜೆಪಿಯ ರಾಷ್ಟ್ರೀಯ ನಾಯಕರು ತೊಡೆತಟ್ಟಿ ನಿಂತಿದ್ದರು. ಹೀಗಾಗಿ ಆರ್.ಅಶೋಕ್ ಅವರಂತಹ ಪ್ರಬಲ ಅಭ್ಯರ್ಥಿಯನ್ನ ಕ್ಷೇತ್ರಕ್ಕೆ ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಒಕ್ಕಲಿಗ ಅಭ್ಯರ್ಥಿ VS ಒಕ್ಕಲಿಗ ಅಭ್ಯರ್ಥಿ ಸ್ಟ್ರಾಟಜಿ ಕನಕಪುರ ಕ್ಷೇತ್ರದಲ್ಲಿ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ? ಎಂಬ ಪ್ರಶ್ನೆ ಮೂಡಿದೆ. ಹಾಗಾದರೆ ಅಕಸ್ಮಾತ್ ಡಿಕೆಶಿ ಮತ್ತೆ ಕನಕಪುರ ಕ್ಷೇತ್ರದಲ್ಲಿ ಗೆದ್ದರೆ ಯಾವ ಸ್ಟಾಟಜಿ ವರ್ಕ್ ಆಗಿದೆ? ಅಕಸ್ಮಾತ್ ಆರ್.ಅಶೋಕ್ ಗೆದ್ದರೆ ಅದಕ್ಕೆ ಕಾರಣ ಏನು? ಎಂಬುದನ್ನ ಇಲ್ಲಿ ತಿಳಿಯೋಣ.

Who can won in Kanakapura constituency 2023 assembly election

ಕನಕಪುರ ಗೆಲುವು, ಸೋಲಿನ ಲೆಕ್ಕಾಚಾರ

ಕನಕಪುರ ಕ್ಷೇತ್ರದಲ್ಲಿ ಕೇವಲ ಡಿ.ಕೆ. ಶಿವಕುಮಾರ್ ವಿರುದ್ಧ ಗೆಲುವಿಗೆ ಬಿಜೆಪಿ ರಣತಂತ್ರವನ್ನ ರೂಪಿಸಿಲ್ಲ. ಇದರ ಜೊತೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲಪಡಿಸುವ ತಂತ್ರ ಕೂಡ ಇದರಲ್ಲಿದೆ. ಎಲ್ಲರಿಗೂ ಗೊತ್ತಿರುವಂತೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಬಲವಾಗಿದೆ. JDS ಬಿಟ್ಟು ಕಾಂಗ್ರೆಸ್ ಮಾತ್ರ ಅವರ ವಿರುದ್ಧ ಗುಡುಗುವ ಶಕ್ತಿ ಹೊಂದಿದೆ. ಆದೇ ಕನಕಪುರ ಕ್ಷೇತ್ರದಲ್ಲಿ ಕಮಲ ಅರಳಿದರೆ, ಹಳೇ ಮೈಸೂರು ಭಾಗದಲ್ಲೂ ಬಿಜೆಪಿಗೆ ಬಲ ಬರುವ ಲೆಕ್ಕಾಚಾರ ಕೂಡ ಇರಬಹುದು.

ಅಣ್ಣನ ಪರ ತಮ್ಮನ ಹೋರಾಟ

ಡಿ.ಕೆ.ಸುರೇಶ್ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಉತ್ತಮ ಒಡನಾಟವಿದೆ. ಅಣ್ಣ-ತಮ್ಮನ ಬಾಂಧವ್ಯ ಅಷ್ಟು ಗಟ್ಟಿಯಾಗಿದೆ. ಇದೇ ಕಾರಣಕ್ಕೆ ಅಣ್ಣನಿಗೆ ಏನೇ ಕಷ್ಟ ಬಂದರೂ ತಮ್ಮ ಡಿ.ಕೆ. ಸುರೇಶ್ ಬಂಡೆ ರೀತಿ ನಿಲ್ಲುವುದು ಮಾಮೂಲು. ಈ ಬಾರಿ ಕೂಡ ಅಂತಹದ್ದೇ ಸ್ಥಿತಿ ಎದುರಾಗಿತ್ತು. ಡಿಕೆಶಿ ಎದುರು ಅಶೋಕ್ ಸ್ಪರ್ಧಗೆ ಇಳಿದಾಗ ಹಗಲು-ರಾತ್ರಿ ಓಡಾಡಿದ್ದು ಡಿ.ಕೆ. ಸುರೇಶ್. ಯಾಕಂದ್ರೆ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಹಿನ್ನೆಲೆ ರಾಜ್ಯದ ತುಂಬಾ ಓಡಾಡಿ ಪ್ರಚಾರ ಮಾಡಿದ್ದರು. ಹೀಗಾಗಿ ಕನಕಪುರದಲ್ಲಿ ಡಿ.ಕೆ.ಸುರೇಶ್ ಅಣ್ಣನ ಪರ ಗಟ್ಟಿಯಾಗಿ ನಿಂತರು.

Who can won in Kanakapura constituency 2023 assembly election

ಡಿ.ಕೆ. ಸುರೇಶ್‌ಗೆ ಆಳವಾದ ಹಿಡಿತ!

ಕನಕಪುರ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎನ್ನುವ ಜೊತೆಗೆ, ಡಿ.ಕೆ.ಶಿವಕುಮಾರ್‌ಗೆ ಇರುವಷ್ಟೇ ವರ್ಚಸ್ಸು ಡಿ.ಕೆ. ಸುರೇಶ್‌ಗೂ ಇದೆ. ಆ ಪ್ರಕಾರ ನೋಡುವುದಾದರೆ ತಳಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಡಿ.ಕೆ.ಶಿವಕುಮಾರ್‌ಗಿಂತ ಡಿ.ಕೆ.ಸುರೇಶ್‌ಗೆ ಹಿಡಿತ ಜಾಸ್ತಿ. ಏಕೆಂದರೆ ಅಣ್ಣ ಶಾಸಕನಾಗಿ, ಮಂತ್ರಿಯಾಗುವ ತನಕ ಡಿಕೆಶಿ ತಮ್ಮ ಡಿ.ಕೆ. ಸುರೇಶ್ ತಳಮಟ್ಟದಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದು ಗೊತ್ತೇ ಇದೆ. ಹೀಗಾಗಿ ತಮ್ಮನ ಓಡಾಟ ಕನಕಪುರದಲ್ಲಿ ಅಣ್ಣ ಡಿಕೆಶಿಗೆ ಬಲ ಕೊಟ್ಟಿರುವುದು ನಿಜ.

ಯಾವ ಸಮುದಾಯ ನಿರ್ಣಾಯಕ?

ಕನಕಪುರ ಕ್ಷೇತ್ರದಲ್ಲಿ ಯಾವ ಸಮುದಾಯ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬ ಲೆಕ್ಕಾಚರಕ್ಕೆ ಬಂದ್ರೆ, ಒಂದೇ ಉತ್ತರ ಒಕ್ಕಲಿಗ ಮತದಾರರು. ಒಟ್ಟು 2,20,391 ಮತದಾರರನ್ನು ಹೊಂದಿರುವ ಕನಕಪುರ ಕ್ಷೇತ್ರದಲ್ಲಿ 1,09, 876 ಪುರುಷರು, 1,10,500 ಮಹಿಳಾ ಮತದಾರದ್ದರೆ, ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗರ 99,567 ವೋಟ್ ಇಲ್ಲಿದೆ. ದಲಿತ ಸಮುದಾಯದ 44 ಸಾವಿರ ಮತಗಳು, ಮುಸ್ಲಿಮರ 22,500, ಲಿಂಗಾಯತರ 18,500 ಮತಗಳು ಇವೆ. ಇನ್ನುಳಿದಂತೆ ಕುರುಬರು 5,600, ತಿಗಳರು 10,500, ಕ್ರೈಸ್ತರು 2,507, ಬೆಸ್ತರು 6000 ಹಾಗೂ ಇತರೆ ಸಮುದಾಯದ 9400 ಮತದಾರರಿದ್ದಾರೆ.

Who can won in Kanakapura constituency 2023 assembly election

ಕನಕಪುರದಲ್ಲಿ ಒಕ್ಕಲಿಗರ ವೋಟ್ ಯಾರಿಗೆ?

ಈ ಲೆಕ್ಕಾಚಾರದಲ್ಲಿ ನೋಡುವುದಾದರೆ ಒಕ್ಕಲಿಗರ ಮತವಿಲ್ಲದೆ ಕನಕಪುರದಲ್ಲಿ ಗೆಲ್ಲುವ ಅಭ್ಯರ್ಥಿಯನ್ನ ಡಿಸೈಡ್ ಮಾಡಲು ಆಗಲ್ಲ. ಸುಮಾರು 1 ಲಕ್ಷದಷ್ಟು ಒಕ್ಕಲಿಗರ ಮತಗಳು ಇರುವ ಕಾರಣ, ಇರುವ 2 ಲಕ್ಷ 20 ಸಾವಿರ ವೋಟ್ ಪೈಕಿ ಒಕ್ಕಲಿಗರ ಮತಗಳೇ ಗೇಮ್ ಡಿಸೈಡರ್. ಆದರೆ ಕಾಂಗ್ರೆಸ್ & ಬಿಜೆಪಿ ಒಕ್ಕಲಿಗ ಅಭ್ಯರ್ಥಿ ಕಣದಲ್ಲಿ ಇಳಿಸಿ ಹೊಸ ಗೇಮ್ ಶುರು ಮಾಡಿದೆ. ಮತ್ತೊಂದ್ಕಡೆ ಬಿಜೆಪಿ ನಾಯಕರ ವಿರುದ್ಧ ಡಿಕೆ ಬ್ರದರ್ಸ್ ಬಂಡೆಯಂತೆ ತೊಡೆತಟ್ಟಿ ನಿಂತಿದ್ದಾರೆ. ಹೀಗಾಗಿ ಕನಕಪುರ ರಣಕಣ ರಂಗೇರಿದೆ.

ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ?

ಕನಕಪುರ ಎಂದರೆ ಒಂದೋ ಜೆಡಿಎಸ್ ಅಥವಾ ಮತ್ತೊಂದು ಕಾಂಗ್ರೆಸ್ ಎಂಬ ಮಟ್ಟಿಗೆ ಜನ ಅಲ್ಲಿ ಫಿಕ್ಸ್ ಆಗಿದ್ಧಾರೆ. 2 ದಶಕ ಅಂದ್ರೆ 20 ವರ್ಷದಿಂದ ಕಾಂಗ್ರೆಸ್ ಭದ್ರಕೋಟೆ ಆಗಿರುವ ಕನಕಪುರದಲ್ಲಿ BJP ಪ್ರಯೋಗಕ್ಕೆ ಕೈಹಾಕಿದೆ. ಹೀಗಾಗಿ ದಿಲ್ಲಿಯಿಂದ ಹಳ್ಳಿ ತನಕ ಬಿಜೆಪಿ ವರಿಷ್ಠರು ಕನಕಪುರ ಕೋಟೆ ಗೆಲ್ಲಲು ತಂತ್ರ ರೂಪಿಸಿದ್ದರು. ಅದ್ರಲ್ಲೂ ಬಿ.ಎಲ್. ಸಂತೋಷ್ ಕನಕಪುರದಲ್ಲಿ ಗೆದ್ದೇ ಗೆಲ್ಲಬೇಕು ಅಂತಾ ಟಾಸ್ಕ್ ಕೊಟ್ಟಿದ್ದರು. ಆದರೆ ಹಿಂದೆ ಇಲ್ಲಿ ಬಿಜೆಪಿ ಅಭ್ಯರ್ಥಿಗಳ ಸ್ಪರ್ಧೆ ಹೆಸರಿಗೆ ಮಾತ್ರ ಸೀಮಿತ ಎಂಬಂತೆ ಇತ್ತು. ಈಗಲಾದರೂ ಟ್ರೆಂಡ್ ಚೇಂಜ್ ಆಗುತ್ತಾ? ಎಂಬುದೇ ಕುತೂಹಲ.

ಕನಕಪುರ ಕ್ಷೇತ್ರದಲ್ಲೇ ಅಶೋಕ್ ಠಿಕಾಣಿ!

ಆರ್.ಅಶೋಕ್ ದಿಲ್ಲಿಯ ವರಿಷ್ಠರ ಮಾತಿಗೆ ಅದೆಷ್ಟು ಬೆಲೆ ಕೊಟ್ಟಿದ್ದರು ಎಂದರೆ, ತಮ್ಮ ತವರು ಪದ್ಮನಾಭ ಕ್ಷೇತ್ರದ ಕಡೆ ಅಷ್ಟಾಗಿ ಗಮನ ಹರಿಸದೆ ಸಂಪೂರ್ಣವಾಗಿ ಕನಕಪುರ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದರು. ಇಷ್ಟೇ ಅಲ್ಲ, ಕನಕಪುರದ ಪ್ರತಿ ಗಲ್ಲಿ ಸುತ್ತಿ ಮತ ಕೇಳಿದ್ದಾರೆ. ಹಾಗೇ ಭರ್ಜರಿ ರೋಡ್ ಶೋ ಹಾಗೂ ಪ್ರಚಾರ ಸಭೆ ನಡೆಸಿ ಗಮನ ಸೆಳೆದಿದ್ದರು. ಕಾಂಗ್ರೆಸ್ ಕೂಡ ಬಿಜೆಪಿಗೆ ಠಕ್ಕರ್ ಕೊಡುವ ರೀತಿ ಪ್ರಚಾರ ಸಭೆ ನಡೆಸಿತ್ತು. ಆದ್ರೆ ಕನಕಪುರದ ಮತದಾರ ಪ್ರಭು ಯಾರಿಗೆ ಮನಸೋತ ಎಂಬುದು ಯಕ್ಷಪ್ರಶ್ನೆ!

ವರ್ಕೌಟ್ ಆಗುತ್ತಾ ಬಿಜೆಪಿ ರಣತಂತ್ರ?

ಇಷ್ಟೆಲ್ಲಾ ಅಳೆದು ತೂಗಿ ಲೆಕ್ಕಾಚಾರ ಹಾಕಿರುವ ಬಿಜೆಪಿ ರಣತಂತ್ರ ಕನಕಪುರದಲ್ಲಿ ವರ್ಕೌಟ್ ಆಗುತ್ತಾ? ಎಂಬ ಅನುಮಾನ ಕಾಡುವುದು ಪಕ್ಕಾ. ಅದು ವರ್ಕೌಟ್ ಆಗುತ್ತೋ, ಬಿಡುತ್ತೋ, ಆದರೆ ಭವಿಷ್ಯದಲ್ಲಿ ಈ ಲೆಕ್ಕಾಚಾರ ಉಪಯೋಗಕ್ಕೆ ಬರಬಹುದು. ಹೀಗಾಗಿಯೇ ದಿಲ್ಲಿಯಿಂದ ಬಂದ ನಾಯಕರು ರಣತಂತ್ರ ರೂಪಿಸಿರುವ ಕ್ಷೇತ್ರಗಳ ಸುತ್ತಲೂ ಹೆಚ್ಚಿನ ಗಮನ ಕೇಂದ್ರೀಕರಿಸಿ ಪ್ರಚಾರ ನಡೆಸಿದ್ದರು. ಹೀಗಾಗಿ ನಾಳೆ ಪ್ರಕಟವಾಗಲಿರುವ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. ಅದ್ರಲ್ಲೂ ಕನಕಪುರದಲ್ಲಿ ಬಿಜೆಪಿಯ ಕಮಲ ಅರಳುತ್ತಾ? ಕಾದು ನೋಡ್ಬೇಕು.

ಒಟ್ನಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಏನೇ ಇದ್ದರೂ ಮತದಾರ ಪ್ರಭು ಯಾವ ನಿಲುವು ಕೈಗೊಳ್ಳಲಿದ್ದಾನೆ ಎಂಬ ಅಂಶದ ಮೇಲೆ ಎಲ್ಲಾ ನಿರ್ಧಾರ ಆಗಲಿದೆ. ನಾಳೆ ಅಂದರೆ ಮೇ 13ರಂದು ಫಲಿತಾಂಶ ಕೂಡ ಪ್ರಕಟವಾಗಲಿದೆ. ಕನಕಪುರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೂಡಿರುವ ರಣತಂತ್ರಗಳು ಎಷ್ಟರಮಟ್ಟಿಗೆ ವರ್ಕೌಟ್ ಆಗಲಿದೆ? ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+