ರಾಜ್ಯದಲ್ಲಿ ಅನ್‌ಲಾಕ್ ಮಾಡಲು ತಾಂತ್ರಿಕ ಸಮಿತಿಯ ಸಲಹೆ ಏನು?
ಬೆಂಗಳೂರು, ಜೂನ್ 1: ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ಲಾಕ್‌ಡೌನ್ ಮುಂದುವರೆದಿದ್ದರೂ ಕೊರೊನಾ ಸೋಂಕು ಪ್ರಕರಣಗಳು ನಿರೀಕ್ಷಿಸಿದ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ.
ರಾಜ್ಯದಲ್ಲಿ ಜೂ.7ರವರೆಗೆ ಲಾಕ್‌ಡೌನ್ ಇದ್ದು, ತದನಂತರವೂ ಲಾಕ್‌ಡೌನ್ ಮುಂದುವರೆಸಲು ರಾಜ್ಯ ಸರ್ಕಾರಕ್ಕೆ ಕೊರೊನಾ ತಾಂತ್ರಿಕ ಸಮಿತಿ ಸಲಹೆ ನೀಡಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಶೇ.5ಕ್ಕಿಂತ ಕಡಿಮೆಯಾಗುವವರೆಗೆ ಲಾಕ್‌ಡೌನ್ ಮುಂದುವರಿಸಬೇಕು ಎಂದು ಕೊರೊನಾ ತಾಂತ್ರಿಕ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ತಾಂತ್ರಿಕ ಸಮಿತಿ ಅಧ್ಯಕ್ಷ ಡಾ.ಎಂ.ಕೆ ಸುದರ್ಶನ್ ನೇತೃತ್ವದಲ್ಲಿ ಸಭೆ ನಡೆಸಿದ್ದು, ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.5 ಮತ್ತು ಸಾವಿನ ದರ ಶೇ.1ರ ಮಿತಿಯೊಳಗೆ ಬರುವವರೆಗೆ ಲಾಕ್‌ಡೌನ್ ಮುಂದುವರೆಸುವುದು ಸೂಕ್ತ ಎಂದು ತಿಳಿಸಿದೆ.
ರಾಜ್ಯದಲ್ಲಿನ ಪಾಸಿಟಿವಿಟಿ ದರ ಶೇ.15 ಹಾಗೂ ಹೊಸ ಪ್ರಕರಣ 15 ಸಾವಿರಕ್ಕೂ ಹೆಚ್ಚಿವೆ. ಸಾವಿನ ಪ್ರಮಾಣ ಶೇ.2.50ರಲ್ಲಿದೆ. ರಾಜ್ಯದಲ್ಲಿ ಸೋಂಕಿನ ಪ್ರಮಾಣ 5 ಸಾವಿರಕ್ಕೆ ಇಳಿಯುವರೆಗೆ ಕಠಿಣ ನಿಯಮಗಳನ್ನು ಮುಂದುವರಿಸಬೇಕು ಎಂದು ಸಮಿತಿ ಸಲಹೆ ನೀಡಿದೆ.
ಈ ಬಗ್ಗೆ ವರದಿಯನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರಿಗೆ ಹಸ್ತಾಂತರಿಸಿದ್ದು, ವರದಿಯಲ್ಲಿನ ಅಂಶಗಳ ಬಗ್ಗೆ ಜೂನ್ 4 ಅಥವಾ 5 ರಂದು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಸರ್ಕಾರ ಸಭೆ ನಡೆಸಲಿದ್ದು, ಜೂ.7ರ ಬಳಿಕವೂ ಲಾಕ್‌ಡೌನ್ ಮುಂದುವರೆಸುವ ಬಗ್ಗೆ ಅಂತಿಮ ನಿರ್ಧಾರ ಮಾಡಲಿದೆ.