Water Supply Cut: ಬೆಂಗಳೂರಿನಲ್ಲಿ ಎರಡು ದಿನ ಕಾವೇರಿ ನೀರು ಸರಬರಾಜು ವ್ಯತ್ಯಯ
ಬೆಂಗಳೂರು, ಜೂನ್. 03: ಸಿಲಿಕಾನ್ ಸಿಟಿ ಬೆಂಗಳೂರು ಇಷ್ಟು ದಿನ ನೀರಿನ ಬಿಕ್ಕಟ್ಟಿನಿಂದ ಸುದ್ದಿಯಲ್ಲಿತ್ತು. ಈಗ ಮಳೆ ಅನಾಹುತಗಳಿಂದ ಸುದ್ದಿಯಾಗುತ್ತಿದೆ. ಇದರ ನಡುವೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BSWWB) ಬೆಂಗಳೂರಿನಲ್ಲಿ ಕಾವೇರಿ ನೀರು ಸರಬರಾಜು ವ್ಯತ್ಯಯವಾಗುವ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಜೂನ್ 6 ಮತ್ತು ಜೂನ್ 7, 2024 ರಂದು ನಗರದ ಹಲವಾರು ಭಾಗಗಳಲ್ಲಿ 24 ಗಂಟೆಗಳ ಕಾವೇರಿ ನೀರು ಸರಬರಾಜು ಕಡಿತವನ್ನು ಘೋಷಿಸಿದೆ. ಕಾವೇರಿ ನೀರು ಸರಬರಾಜು ಘಟಕಗಳನ್ನು ಸ್ಥಗಿತಗೊಳಿಸುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ನೀರು ಸರಬರಾಜು ವ್ಯತ್ಯಯಕ್ಕೆ ಮುಖ್ಯ ಕಾರಣವೆಂದರೆ ಕಾವೇರಿ 5ನೇ ಹಂತದ ಯೋಜನೆಯಲ್ಲಿ ಕೆಲಸ ಆರಂಭವಾಗಿದೆ ಈ ಕಾರಣಕ್ಕಾಗಿ, ಮಂಡಳಿಯು ತನ್ನ ಎಲ್ಲಾ ಪಂಪಿಂಗ್ ಸ್ಟೇಷನ್‌ಗಳನ್ನು ಜೂನ್ 6 ರಂದು ಮುಚ್ಚಲಿದೆ. ಈ ಬಗ್ಗೆ ನೀರು ಕೊರತೆ ಅನುಭವಿಸಲಿರುವ ಪ್ರದೇಶಗಳಿಗೆ ಮಾಹಿತಿ ನೀಡಲಾಗಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೇಳಿರುವುದೇನು?
ಕಾವೇರಿ ನೀರು ಸರಬರಾಜು 5ನೇ ಹಂತದ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ. ದಿನಾಂಕ: 06-06-2024ರಂದು ಕಾವೇರಿ ನೀರು ಸರಬರಾಜು ಘಟಕಗಳನ್ನು ಸ್ಥಗಿತಗೊಳಿಸುತ್ತಿರುವುದರಿಂದ, ದಿನಾಂಕ: 06-06-2024 ಮತ್ತು ದಿನಾಂಕ: 07-06-2024 ರಂದು ಬೆಂಗಳೂರು ನಗರಕ್ಕೆ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾವೇರಿ 5ನೇ ಹಂತದ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ, ದಿನಾಂಕ: 04-06-2024 ರಂದು ಕಾವೇರಿ ನೀರು ಸರಬರಾಜು ಘಟಕಗಳನ್ನು ಸ್ಥಗಿತಗೊಳಿಸಲಾಗುವುದೆಂದು ಈ ಹಿಂದೆ ಪ್ರಕಟಿಸಲಾಗಿತ್ತು. ಇದರಿಂದ, ದಿನಾಂಕ: 04-06-2024 ಮತ್ತು 05-06-2024 ರಂದು ಬೆಂಗಳೂರು ನಗರಕ್ಕೆ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುವುದೆಂದು ದಿನಾಂಕ: 29-05-2024 ರಂದು ಪತ್ರಿಕಾ ಪ್ರಕಟಣೆಯನ್ನು ನೀಡಲಾಗಿತ್ತು.
ಆದರೆ, ಕಾವೇರಿ ನೀರು ಸರಬರಾಜು ಘಟಕಗಳನ್ನು ಸ್ಥಗಿತಗೊಳಿಸುವ ದಿನಾಂಕ: 04-06- 2024ನ್ನು ಕಾರಣಾಂತರಗಳಿಂದ ದಿನಾಂಕ 06-06-2024ಕ್ಕೆ ಮುಂದೂಡಲಾಗಿದೆ. ಅಂದು, ಕಾವೇರಿ 1, 2 ಮತ್ತು 3ನೇ ಹಂತಗಳ ನೀರು ಸರಬರಾಜು ಘಟಕಗಳನ್ನು 12 ಘಂಟೆಗಳ ಕಾಲ (ಬೆಳಗ್ಗೆ 06-00 ರಿಂದ ಸಂಜೆ 06-00 ರವರೆಗೆ) ಹಾಗೂ ಕಾವೇರಿ 4ನೇ ಹಂತ, 1ನೇ ಮತ್ತು 2ನೇ ಘಟ್ಟಗಳ ನೀರು ಸರಬರಾಜು ಘಟಕಗಳನ್ನು 04 ಗಂಟೆಗಳ ಕಾಲ (ಬೆಳಗ್ಗೆ 10-00 ರಿಂದ ಮಧ್ಯಾಹ್ನ 02-00 ರವರೆಗೆ) ಸ್ಥಗಿತಗೊಳಿಸಲು ತೀರ್ಮಾನಿಸಲಾಗಿರುತ್ತದೆ.
ಆದುದರಿಂದ, ನೀರು ಸ್ಥಗಿತಗೊಳಿಸುವ ದಿನಾಂಕ: 06-06-2024 ಮತ್ತು ನಂತರದ ದಿನಾಂಕ: 07-06-2024 ರಂದು ಎರಡು ದಿನಗಳು ಬೆಂಗಳೂರು ನಗರಕ್ಕೆ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಪ್ರದೇಶದಲ್ಲಿರುವ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಹಾಗೂ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಕೋರಲಾಗಿದೆ.












Click it and Unblock the Notifications