ಬೆಂಗಳೂರಿಗೆ ಪ್ರತಿ ತಿಂಗಳು 1.6 ಟಿಎಂಸಿ ಕಾವೇರಿ ನೀರು ಮೀಸಲಿಡಿ
ಬೆಂಗಳೂರು, ಸೆಪ್ಟೆಂಬರ್ 14; ಉದ್ಯಾನ ನಗರಿ ಬೆಂಗಳೂರಿಗೆ ನೀರು ಪೂರೈಕೆ ಮಾಡುವ ಜವಾಬ್ದಾರಿ ಹೊತ್ತಿರುವ ಜಲಮಂಡಳಿ ಕಾವೇರಿ ನೀರಾವರಿ ನಿಗಮಕ್ಕೆ ಪತ್ರವೊಂದನ್ನು ಬರೆದಿದೆ. ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟು ಕೆಆರ್‌ಎಸ್ ಜಲಾಶಯ ಬರಿದಾಗುತ್ತಿರುವ ಹೊತ್ತಿನಲ್ಲಿಯೇ ಈ ಪತ್ರವನ್ನು ಬರೆದು ಬೆಂಗಳೂರು ನಗರದ ನೀರಿಗಾಗಿ ಬೇಡಿಕೆ ಇಡಲಾಗಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಬರೆದಿದೆ. ನಗರಕ್ಕೆ ನೀರು ಪೂರೈಕೆ ಮಾಡಲು ಪ್ರತಿ ತಿಂಗಳು 1.6 ಟಿಎಂಟಿಸಿ ಅಡಿ ನೀರು ಮೀಸಲಿಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದೆ. ಕಾವೇರಿ 1, 2, 3 ಮತ್ತು 4ನೇ ಹಂತದ ಯೋಜನೆಗಳ ಮೂಲಕ ಬಿಬಿಎಂಪಿ ವ್ಯಾಪ್ತಿಗೆ ಜಲಮಂಡಳಿ ನೀರು ಪೂರೈಕೆ ಮಾಡುತ್ತದೆ.

ಮಂಡ್ಯದ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಜಲಾಶಯದ ನೀರು ಬೆಂಗಳೂರಿಗೆ ಆಧಾರವಾಗಿದೆ. ಡ್ಯಾಂನ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ 49.45 ಟಿಎಂಸಿ ಅಡಿ ಆಗಿದೆ. ಆದರೆ ಈ ಬಾರಿ ಡ್ಯಾಂ ಭರ್ತಿಯಾಗದ ಕಾರಣ ಪ್ರಸ್ತುತ ಡ್ಯಾಂನಲ್ಲಿ 21.09 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಪತ್ರ; ಕೊಡಗು ಭಾಗದಲ್ಲಿ ಮಳೆಯ ಕೊರತೆ ಉಂಟಾಗಿ ಕೆಆರ್‌ಎಸ್ ಜಲಾಶಯ ಭರ್ತಿಯಾಗಿಲ್ಲ. ಆದರೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಸೂಚನೆಯಂತೆ ಕರ್ನಾಟಕ ಸರ್ಕಾರ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಹರಿಸುತ್ತಿದೆ. ಬುಧವಾರ ಸರ್ವಪಕ್ಷಗಳ ಸಭೆಯಲ್ಲಿ ನೀರು ಹರಿಸುವುದನ್ನು ನಿಲ್ಲಿಸುತ್ತೇವೆ ಎಂದು ಸರ್ಕಾರ ತೀರ್ಮಾನ ಕೈಗೊಂಡಿದೆ.
ಮಳೆ ಕೊರತೆಯ ಕಾರಣ, ಡ್ಯಾಂ ಖಾಲಿಯಾಗುವ ಕಾರಣ ಬೆಂಗಳೂರು ನಗರಕ್ಕೆ ಮುಂದಿನ ದಿನಗಳಲ್ಲಿ ನೀರು ಪೂರೈಕೆಯಲ್ಲಿ ತೊಂದರೆ ಉಂಟಾಗುವ ನಿರೀಕ್ಷೆ ಇದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ಜಲಮಂಡಳಿ ಕಾವೇರಿ ನೀರಾವರಿ ನಿಗಮಕ್ಕೆ ಪತ್ರವನ್ನು ಬರೆದಿದೆ.
ಅಧಿಕಾರಿಗಳ ಪ್ರಕಾರ ಬೆಂಗಳೂರು ಜಲಮಂಡಳಿ ಶಿವ ಅಣೆಕಟ್ಟೆಯಿಂದ 1,450 ಎಂಎಲ್‌ಡಿ ನೀರು ಪಡೆಯುತ್ತಿದೆ. ಜಲಾಶಯಕ್ಕೆ 700 ಕ್ಯುಸೆಕ್ ನೀರು ಹರಿದರೆ ಮಾತ್ರ ಇದನ್ನು ಪಡೆಯಲು ಸಾಧ್ಯ. ಜನವರಿಂದ ನಗರಕ್ಕೆ ಪ್ರತಿ ತಿಂಗಳು 2.42 ಟಿಎಂಸಿ ನೀರು ಬೇಕಾಗುತ್ತದೆ.
ನಗರದ ಜನರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಕಾವೇರಿ ನೀರಾವರಿ ನಿಗಮಕ್ಕೆ ಪತ್ರವನ್ನು ಬರೆಯಲಾಗಿದೆ. ಪತ್ರದಲ್ಲಿ ಹೆಚ್ಚುವರಿಯಾಗಿ 110 ಹಳ್ಳಿಗಳ ಬೇಡಿಕೆಯನ್ನು ಸಹ ಪರಿಗಣಿಸಿ ವಿವರಣೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು ಜನರ ಮೌನ; ಉದ್ಯಾನ ನಗರಿ ಬೆಂಗಳೂರಿನ ಜನರು ಕಾವೇರಿ ನೀರಿನ ಮೇಲೆ ಅವಲಿಂಬಿತರು. ಆದರೆ ಕಾವೇರಿ ವಿಚಾರದಲ್ಲಿ ಉದ್ಯಾನ ನಗರಿಯ ಜನರು ಮೌನವಾಗಿರುತ್ತಾರೆ ಎಂಬುದು ಸದಾ ಕೇಳಿ ಬರುವ ಆರೋಪವಾಗಿದೆ. ಈಗ ಕೆಆರ್‌ಎಸ್ ಖಾಲಿಯಾಗುತ್ತಿರುವ ಹೊತ್ತಿನಲ್ಲಿಯೇ ಮತ್ತೆ ಇದೇ ಮಾತು ಕೇಳಿ ಬಂದಿದೆ.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಸಹ ಈ ಕುರಿತು ಟ್ವೀಟ್ ಮಾಡಿದ್ದಾರೆ, 'ನಮ್ಮ ರೈತರಿಗೇ ನೀರಿಲ್ಲದಿದ್ದರೂ, ಅವರು ಬೆಳೆಯನ್ನೇ ಬೆಳೆಯದಿದ್ದರೂ ನೀರು ಬಿಡಲು ಸರಕಾರ ಒಪ್ಪಿದೆ. ಈ ವಿಷಯದಲ್ಲಿ ರಾಜ್ಯ ಸರಕಾರ ಪೂರ್ಣ ವಿಫಲವಾಗಿದೆ. ರೈತರ ತಾಳ್ಮೆಯನ್ನೂ ದುರುಪಯೋಗ ಮಾಡಿಕೊಂಡಿದೆ. ಸುಪ್ರೀಂಕೋರ್ಟ್ ಏನು ಹೇಳುತ್ತದೋ ಅಲ್ಲಿಯವರೆಗೆ ಕಾಯಬೇಕಿತ್ತು. ಪ್ರಾಧಿಕಾರ, ಸಮಿತಿ ಹೇಳಿದವೆಂದು ನೀರು ಬಿಟ್ಟಿದ್ದು ತಪ್ಪು' ಎಂದು ಹೇಳಿದ್ದಾರೆ.
'ರೈತರ ಬಗ್ಗೆ ಕಾಳಜಿ, ಬೆಂಗಳೂರಿನ ಜನರ ಕುಡಿಯುವ ನೀರಿನ ಬಗ್ಗೆ ಆತಂಕ ಇದ್ದಿದ್ದರೆ ಸರಕಾರ ನೀರು ಹರಿಸುತ್ತಿರಲಿಲ್ಲ. ಬೆಂಗಳೂರಿಗರ ಮೌನ ನನಗೆ ಅಚ್ಚರಿ ತಂದಿದೆ. ನೆರೆ ರಾಜ್ಯಗಳಿಂದ ವಲಸೆ ಬಂದು ನಮ್ಮ ನೆಲ, ಜಲ, ಆರ್ಥಿಕತೆಯ ಆಸರೆಯಲ್ಲಿ ನೆಮ್ಮದಿಯಾಗಿರುವವರು ಕೂಡ ಕಾವೇರಿ ಬಗ್ಗೆ ದನಿ ಎತ್ತಬೇಕು. ಇವರಾರಿಗೂ ಕಾವೇರಿ ನೀರಿನ ಚಿಂತೆಯೇ ಇಲ್ಲ' ಎಂದು ಟ್ವೀಟ್‌ನಲ್ಲಿ ತಿಳಿಸಿದ್ದರು.












Click it and Unblock the Notifications