Voter ID SIR: ನೋಟಿಸ್ ಪಡೆದವರು ಪೂರಕ ದಾಖಲೆ ನೀಡಿ ಹೆಸರು ಖಚಿತಪಡಿಸಿಕೊಳ್ಳಬೇಕು: ಜಿಬಿಎ ಸೂಚನೆ
Voter ID SIR: ನೋಟಿಸ್ ಪಡೆದವರು ಪೂರಕ ದಾಖಲೆ ನೀಡಿ ಹೆಸರು ಖಚಿತಪಡಿಸಿಕೊಳ್ಳಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿದೆ.
ಬೆಂಗಳೂರು ದಕ್ಷಿಣ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಹಿನ್ನೆಲೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಅರಿವು ಮೂಡಿಸಲು, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳಾದ ಕೆ. ಎನ್. ರಮೇಶ್ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 20ರ ಭಾನುವಾರ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಆವರಣದಲ್ಲಿ ವಿಶೇಷ ಜಾಗೃತಿ ಅಭಿಯಾನ ನಡೆಸಲಾಯಿತು.

ನೋಟಿಸ್ ಪಡೆದವರು ಪೂರಕ ದಾಖಲೆ ನೀಡಿ ಹೆಸರು ಖಚಿತಪಡಿಸಿಕೊಳ್ಳಿ
ವಿಚಾರಣಾ ನೋಟಿಸ್ ಪಡೆದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಮತಗಟ್ಟೆ ಅಥವಾ ಚುನಾವಣಾ ನೋಂದಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಭಾರತೀಯ ಪೌರತ್ವ, ವಯಸ್ಸು ಹಾಗೂ ನಿವಾಸದ ಪೂರಕ ದಾಖಲೆಗಳನ್ನು ಒದಗಿಸಿ ಹೆಸರುಗಳನ್ನು ಸುಲಭವಾಗಿ ಖಚಿತಪಡಿಸಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಡೊಳ್ಳುಕುಣಿತದ ಮೂಲಕ ಸಾರ್ವಜನಿಕರಲ್ಲಿ ಅರಿವು
ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಸುತ್ತಮುತ್ತಲಿನ ಜನನಿಬಿಡ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಡೊಳ್ಳುಕುಣಿತ ಕಲಾತಂಡಗಳ ಸಮೇತ ಜಾಥಾ ನಡೆಸಿ ಸಾರ್ವಜನಿಕರ ಗಮನ ಸೆಳೆಯಲಾಯಿತು. ಈ ವೇಳೆ ಮತದಾನವು ಸಂವಿಧಾನಬದ್ಧ ಹಕ್ಕಾಗಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕಲಾಪ್ರದರ್ಶನದ ಮೂಲಕ ವ್ಯಾಪಕ ಜಾಗೃತಿ ಮೂಡಿಸಲಾಯಿತು.
ಸೆಪ್ಟೆಂಬರ್ 19 ಹಾಗೂ 20 ರಂದು ರಜಾ ದಿನಗಳಲ್ಲೂ ಸಿಬ್ಬಂದಿ ಕೆಲಸ
ಅರ್ಹ ಮತದಾರರ ಸೇರ್ಪಡೆಗೆ ಪೂರಕವಾಗಿ ಸೆಪ್ಟೆಂಬರ್ 19 ಮತ್ತು 20 ರಂದು ಎಲ್ಲ ಮತಗಟ್ಟೆಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಿಗೆ ಯಾವುದೇ ಅಡಚಣೆಯಾಗದಂತೆ ನೆರವಾಗಲು ಸರ್ಕಾರಿ ರಜಾ ದಿನಗಳಲ್ಲೂ ನಮ್ಮ ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಮತ್ತು ಸಿಬ್ಬಂದಿ ಮತಗಟ್ಟೆಗಳಲ್ಲಿ ಬೆಳಗ್ಗಿನಿಂದಲೇ ಕುಳಿತು ಸಾರ್ವಜನಿಕರ ಸಂದೇಹಗಳನ್ನು ನಿವಾರಿಸಿ ಸಹಾಯ ಮಾಡುತ್ತಿದ್ದಾರೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದರು.
ಕರಡು ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ನಮೂನೆ-6 ಅರ್ಜಿಯನ್ನು ಸಲ್ಲಿಸಿ
ಈಗಾಗಲೇ ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದು ಕಂಡುಬಂದಲ್ಲಿ, ಅರ್ಹ ನಾಗರಿಕರು ನಮೂನೆ-6 (Form-6) ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಿ ತಕ್ಷಣವೇ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ. ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗಬಾರದು ಎಂಬುದು ಚುನಾವಣಾ ಆಯೋಗದ ದೃಢ ಸಂಕಲ್ಪವಾಗಿದೆ.
ಕರಡು ಮತದಾರರ ಪಟ್ಟಿ ಮತ್ತು ವಿಚಾರಣೆ ಅಂಕಿ-ಅಂಶಗಳ ವಿವರ
ದಕ್ಷಿಣ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಆಗಸ್ಟ್ 24 ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 10,86,756 ಮತದಾರರಿದ್ದಾರೆ. ಈ ಪೈಕಿ ವಿವರಗಳಲ್ಲಿ ವ್ಯತ್ಯಾಸವಿರುವ ಹಾಗೂ ಮಾಹಿತಿ ಅಪೂರ್ಣವಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 4,18,109 ನೋಟಿಸ್‌ಗಳನ್ನು ಜನರೇಟ್ ಮಾಡಲಾಗಿದೆ. ಇವುಗಳಲ್ಲಿ ಈಗಾಗಲೇ 98,720 (ಶೇ. 23.61 ರಷ್ಟು) ನೋಟಿಸ್‌ಗಳ ವಿಚಾರಣೆ (Hearing) ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಉಳಿದ ವಿಚಾರಣೆಗಳನ್ನು ಮುಂಬರುವ ಒಂದು ಅಥವಾ ಎರಡು ವಾರಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಕರೆ
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಪ್ರಕಟವಾಗದ ಮತದಾರರು ಈ ವಿಶೇಷ ಅಭಿಯಾನವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕೂಡಲೇ ಮತಗಟ್ಟೆಗಳಿಗೆ ಭೇಟಿ ನೀಡಿ ಕರಡು ಪಟ್ಟಿಯನ್ನು ಪರಿಶೀಲಿಸಿ, ಅರ್ಹರಿದ್ದಲ್ಲಿ ಅಗತ್ಯ ನಮೂನೆ-6 ಮತ್ತು ದಾಖಲೆಗಳನ್ನು ನೀಡಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಮನವಿ ಮಾಡಿದ್ದಾರೆ.


Click it and Unblock the Notifications
