Voter data theft: ಎನ್‌ಜಿಒ ವಿರುದ್ಧ ದೂರು ದಾಖಲಿಸಿದ ಬಿಬಿಎಂಪಿ
ಬೆಂಗಳೂರು, ನವೆಂಬರ್ 18: ಮತದಾರರ ಮಾಹಿತಿ ಸಂಗ್ರಹಿಸಲು ವಿಧಿಸಿದ್ದ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಮಾಹಿತಿ ಸಂಗ್ರಹಿಸಿದ್ದ ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ದಿ ಸಂಸ್ಥೆ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್ ಪೋಲೀಸ್ ಠಾಣೆ ಮತ್ತು ಕಾಡುಗೋಡಿ ಪೋಲೀಸ್ ಠಾಣೆಗಳಲ್ಲಿ ಬಿಬಿಎಂಪಿ ದೂರು ದಾಖಲಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಈ ಸರ್ಕಾರೇತರ ಸಂಸ್ಥೆ ಮತದಾರರ ಮಾಹಿತಿಯನ್ನು ಸಂಗ್ರಹಿಸಿತ್ತು. ಈ ಸಂಬಂಧ ಸಂಸ್ಥೆ ವಿರುದ್ಧ ದೂರು ನೀಡಲಾಗಿದೆ. ಜೊತೆಗೆ ಮತದಾರರ ವೈಯಕ್ತಿಕ ಮಾಹಿತಿ ಕಳ್ಳತನ ದೂರಿನ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ವಿಚಾರಣೆ ನಡೆಸಿ ವರದಿ ನೀಡಲು ಅಪರ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2023ರ ಕಾರ್ಯ ಚಟುವಟಿಕೆಗಳ ಕುರಿತು ನಗರದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ನಡೆಸಲು ಉದ್ದೇಶಿಸಲಾಗಿತ್ತು. ಈ ಕೆಲಸವನ್ನು ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿಯು ಚಿಲುಮೆ ಶೈಕ್ಷಣಿಕ ಸಾಂಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಷರತ್ತುಬದ್ಧ ಅನುಮತಿಯನ್ನು ನೀಡಲಾಗಿತ್ತು.

ಸದರಿ ಸಂಸ್ಥೆಯ ವಿರುದ್ಧ ಮತದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿರುವ ಬಗ್ಗೆ ದೂರು ಬಂದಿದ್ದರ ಹಿನ್ನಲೆಯಲ್ಲಿ ಷರತ್ತು ಉಲ್ಲಂಘಿಸಿರುವುದನ್ನು ಪರಿಗಣಿಸಿ ಸಂಸ್ಥೆಗೆ ನೀಡಲಾಗಿದ್ದ ಅನುಮತಿಯನ್ನು ರದ್ದುಪಡಿಸಲಾಗಿದೆ.
ಮಾಹಿತಿ ಸಂಗ್ರಹಣೆ ಕುರಿತು ಅನುಮಾನ ಬಂದಿದ್ದರ ಹಿನ್ನಲೆಯಲ್ಲಿ ಸದರಿ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಕಾಡುಗೋಡಿ ಪೋಲೀಸ್ ಠಾಣೆ ಮತ್ತು ಹಲಸೂರುಗೇಟ್ ಪೋಲೀಸ್ ಠಾಣೆಗಳಲ್ಲಿ ದೂರನ್ನು ಸಹ ದಾಖಲಿಸಲಾಗಿದೆ.
ಇದರ ಜೊತೆಗೆ ಎಲ್ಲಾ 4 ಜನ ಅಪರ ಜಿಲ್ಲಾ ಚುನಾವಣಾಧಿಕಾರಿಗಳಿಗೂ ಮತ್ತೊಮ್ಮೆ ಕೂಲಂಕುಷವಾಗಿ ಪರಿಶೀಲಿಸಿ ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ ಬಿಬಿಎಂಪಿ ಮಾಹಿತಿ ನೀಡಿದೆ.












Click it and Unblock the Notifications