ಬೆಂಗಳೂರಲ್ಲಿ ಲೋಕಸಭೆ ಚುನಾವಣೆಯಲ್ಲಿ ಮತ ಕಳ್ಳತನ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದೇನು ?
2024ನೇ ಸಾಲಿನ ಲೋಕಸಭೆ ಚುನಾವಣೆಯಲ್ಲಿ ಭಾರೀ ಅವ್ಯವಹಾರವಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗಂಭೀರ ಆರೋಪ ಮಾಡಿದ್ದು. ಇದೇ ಮೊದಲ ಬಾರಿಗೆ ಸಾಕ್ಷಿಗಳನ್ನೂ ನೀಡಿದ್ದಾರೆ. ದೇಶದಲ್ಲಿ ಅಂದಾಜು 20ರಿಂದ 25 ಲೋಕಸಭಾ ಕ್ಷೇತ್ರಗಳಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನು ಬೆಂಗಳೂರಿನ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು ಕಳ್ಳ ಮತದಾನವಾಗಿದೆ ಎಂದು ರಾಹುಲ್ ಗಾಂಧಿ ಅವರು ಆರೋಪಿಸಿದ್ದು ಕೆಲವೊಂದು ಪ್ರಮುಖ ಸಾಕ್ಷಿಗಳನ್ನೂ ನೀಡಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಮಹಾರಾಷ್ಟ್ರದಲ್ಲಿ 5 ವರ್ಷಗಳಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾದ ಮತದಾರರ ಸಂಖ್ಯೆಗಿಂತ ಹೆಚ್ಚು ಕೇವಲ 5 ತಿಂಗಳಲ್ಲಿ ಸೇರ್ಪಡೆಯಾಗಿದ್ದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಸ್ಥಳೀಯ ಜನಸಂಖ್ಯೆಗಿಂತ ಮತದಾರರ ಪಟ್ಟಿಯಲ್ಲಿ ಹೆಚ್ಚು ಮತದಾರರಿದ್ದಾರೆ. ಸಂಜೆ 5 ಗಂಟೆಯ ನಂತರ ದಿಢೀರ್ ಮತದಾನ ಪ್ರಮಾಣ ಹೆಚ್ಚಳವಾಗಿದೆ. ಲೋಕಸಭೆಯಲ್ಲಿ ಅತಿ ಹೆಚ್ಚು ಮತಪಡೆದಿದ್ದ ನಮ್ಮ ಮೈತ್ರಿ, ಕೆಲವೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡಿದ್ದವು. ನಮಗೆ ಆಗಲೇ ಇಲ್ಲಿ ಘೋರ ತಪ್ಪು ನಡೆಯುತ್ತಿದೆ ಎಂಬ ಅರಿವಾಯಿತು ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

ಇನ್ನು ಮತದಾರರ ಪಟ್ಟಿ ಜನರಿಗೆ ಸೇರಿದ್ದು. ಆದರೂ ಚುನಾವಣಾ ಆಯೋಗ ಯಾಂತ್ರಿಕ ಪರಿಶೀಲನಗೆ ಅನುಕೂಲವಾಗುವಂತೆ ಡಿಜಿಟಲ್ ಮಾದರಿಯಲ್ಲಿ ಮತದಾರರ ಪಟ್ಟಿ ಹಾಗೂ ಸಿಸಿಟಿವಿ ಮಾಹಿತಿ ನೀಡಲು ನಿರಾಕರಿಸಿದೆ. ಆ ಮೂಲಕ ಪಾರದರ್ಶಕತೆಯನ್ನು ದಮನ ಮಾಡಿದೆ. ಸಂಜೆ 5.30ರ ನಂತರ ಮತಗಟ್ಟೆಗಳಲ್ಲಿ ಮತದಾರರ ಸಾಲು ಇಲ್ಲದಿದ್ದರೂ ಮತದಾನ ಪ್ರಮಾಣ ಹೆಚ್ಚಳವಾಗಿದೆ. ಹೀಗಾಗಿ ಇಲ್ಲಿ ಏನನ್ನೋ ಮುಚ್ಚಿಡಲಾಗುತ್ತಿದೆ ಎಂದು ನಮಗೆ ತಿಳಿಯಿತು. ಚುನಾವಣಾ ಆಯೋಗ ಪರಿಶೀಲನೆಯನ್ನು ಮಾತ್ರವಷ್ಟೇ ಅಲ್ಲ ಸಾಕ್ಷಿಗಳನ್ನೂ ನಾಶ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಅವರು ಗಂಭೀರವಾದ ಆರೋಪವನ್ನು ಮಾಡಿದ್ದಾರೆ.
ಅಲ್ಲದೇ ಒಬ್ಬ ವ್ಯಕ್ತಿಗೆ ಒಂದು ಮತದಾನ ಎಂಬುದೇ ಸಂವಿಧಾನದ ಅಡಿಪಾಯ. ಆದರೆ, ಚುನಾವಣೆಯ ಸಮಗ್ರತೆಯ ಮೇಲಿನ ಅನುಮಾನ, ಆಡಳಿತ ವಿರೋಧಿ ಅಲೆಯಿಂದ ಬಿಜೆಪಿಗೆ ವಿನಾಯಿತಿ, ಅನಿರೀಕ್ಷಿತ ಗೆಲುವಿನ ಅಂತರ, ಅಸ್ಪಷ್ಟವಾದ ಮತದಾನ, ಮಾಧ್ಯಮಗಳ ಗಲಾಟೆ, ಪ್ರಶ್ನೆ ಮೂಡಿಸುವಂತಹ ಚುನಾವಣಾ ವೇಳಾಪಟ್ಟಿ ಹಾಗೂ ತಿರುಚಲಾದ ಮತದಾರರ ಪಟ್ಟಿಗಳು ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿವೆ ಎಂದೂ ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ಹೇಳಿದ ಐದು ಪ್ರಮುಖ ವಿಷಯಗಳು
1. ಮೊದಲ ಬಾರಿಗೆ ಮತ ಚಲಾಯಿಸಿದವರ ಪಟ್ಟಿಯಲ್ಲಿ 90ರ ವೃದ್ಧ - ವೃದ್ಧೆಯರು!
2. ಅಧಿಕೃತ ವಿಳಾಸವೇ ಇಲ್ಲದ 40 ಸಾವಿರ ಮತದಾರರಿಂದ ಮತ ಚಲಾವಣೆ
3. ಒಂದೇ ಕ್ಷೇತ್ರದ 2-4 ಮತಗಟ್ಟೆಗಳಲ್ಲಿ ಮತ ಚಲಾಯಿಸಿರುವ ಸಾವಿರಾರು ನಕಲಿ ಮತದಾರರು!
4. ಮಹದೇವಪುರದಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳ್ಳತನ ನಡೆದಿದೆ.
5. ಮಹದೇವಪುರ ಕ್ಷೇತ್ರದ ಮತಗಳ್ಳತನ ಬಯಲಿಗೆಳೆಯಲು 30-40 ಮಂದಿ ಹಗಲಿರುಳು 6 ತಿಂಗಳು ಶ್ರಮಿಸಿದ್ದಾರೆ.












Click it and Unblock the Notifications