Viral Video: ಡಿ.ಕೆ ಶಿವಕುಮಾರ್ ಅವರೇ ನೀವು ಯಜಮಾನರಲ್ಲ: ಉದ್ಯಮಿ ಮೋಹನ್‌ದಾಸ್ ಪೈ ಆಕ್ರೋಶ
ಬೆಂಗಳೂರು ಅಭಿವೃದ್ಧಿ ಹಾಗೂ ಮೂಲಸೌಕರ್ಯ ವಿಚಾರವಾಗಿ ಉದ್ಯಮಿಗಳೂ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ನಡುವೆ ಮುಸುಕಿನ ಗುದ್ದಾಟ ಮುಂದುವರಿದಿದೆ. ಇದೀಗ ಉದ್ಯಮಿ ಮೋಹನ್‌ದಾಸ್ ಪೈ ಅವರು ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ಆಕ್ರೋಶ ಹೊರ ಹಾಕಿದ್ದಾರೆ.
ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಈಚೆಗೆ ಬೆಂಗಳೂರು ಮೂಲಸೌಕರ್ಯದ ಬಗ್ಗೆ ಭಾರೀ ಟೀಕೆ ಮಾಡಿದ್ದರು. ಇದರೊಂದಿಗೆ ಸರಣಿ ಟ್ವೀಟ್‌ಗಳ ಮೂಲಕ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಸಹ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಕಿರಣ್ ಮಜುಂದಾರ್ ಶಾ ಹಾಗೂ ಡಿ.ಕೆ ಶಿವಕುಮಾರ್ ಅವರು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಉದ್ಯಮಿ ಮೋಹನ್‌ದಾಸ್ ಪೈ ಅವರು ಸಹ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರಾದರೂ, ಸೋಷಿಯಲ್ ಮೀಡಿಯಾದಲ್ಲಿ ವಿಮರ್ಶೆ ಮಾಡುವುದು ಮುಂದುವರಿಸಿದ್ದಾರೆ.

ಇದೀಗ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು, ಅಪಾರ್ಟ್ಮೆಂಟ್ ಮಾಲೀಕ ಕಿರಣ್ ಹೆಬ್ಬಾರ್ ಎಂಬಾತ ಪತ್ರ ಬರೆದು ನನಗೆ ಬೆದರಿಕೆ ಹಾಕಲು ಬರ್ತಿದ್ದಾನೆ. ಯಾವ ಗೊಡ್ಡು ಬೆದರಿಕೆಗಳಿಗೂ ನಾನು ಜಗ್ಗಲ್ಲ ಎಂದಿದ್ದಾರೆ. ಈ ಹೇಳಿಕೆಗೆ ಉದ್ಯಮಿ ಮೋಹನ್‌ದಾಸ್ ಪೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಉದ್ಯಮಿ ಮೋಹನ್‌ದಾಸ್ ಪೈ ಅವರು, ಇದು ತುಂಬಾ ತಪ್ಪು. ಹೌದು ನಾವು ಒಪ್ಪುತ್ತೇವೆ ನೀವು ನಮ್ಮ ಸಚಿವರು ನಿಜ. ಆದರೆ ನೀವು ನಮ್ಮ ಪ್ರತಿನಿಧಿ ಹೊರತು ನಮ್ಮ ಯಾಜಮಾನರಲ್ಲ. ನಮ್ಮದು ಪ್ರಜಾಪ್ರಭುತ್ವ ದೇಶ ಹಾಗೂ ಮಂತ್ರಿಗಳನ್ನು ಪ್ರಶ್ನಿಸುವ ಹಕ್ಕು ಜನಸಾಮಾನ್ಯರಿಗೆ ಇದೆ. ಸಾರ್ವಜನಿಕರೊಂದಿಗೆ ಈ ರೀತಿ ಮಾತನಾಡುವುದು ಹಾಗೂ ಭಯದ ವಾತಾವರಣವನ್ನು ಸೃಷ್ಟಿಸುವುದು ತುಂಬಾ ತಪ್ಪು ಎಂದಿದ್ದಾರೆ.
ಮುಂದುವರಿದು ಸಾರ್ವಜನಿಕರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯ ಮಾಡುವ ಅವಶ್ಯಕತೆ ಇದೆ. ಜನರಿಗೆ ಸಹಕರಿಸುವುದ ನಿಮಗೆ ಒಳ್ಳೆಯದು ಎಂದು ಮೋಹನ್ ದಾಸ್ ಪೈ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಕುರಿತು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳ ಪ್ರತಿನಿಧಿಗಳೊಂದಿಗೆ ಡಿಕೆ ಶಿವಕುಮಾರ್ ಸಂವಾದ ನಡೆಸಿದ್ದು, ನಿಮ್ಮ ಸೇವೆ ಮಾಡಿದರೆ ನಮಗೆ ಮತ ಹಾಕುತ್ತೀರಿ ಎನ್ನುವುದು ನಮ್ಮ ಆಸೆ. ಆದರೆ, ಇದೇ ವಿಷಯವನ್ನಿರಿಸಿಕೊಂಡು ನನಗೇ ಎಚ್ಚರಿಕೆ ಕೊಡಲು ಬಂದರೆ ಅದು ಕೆಲಸ ಮಾಡಲ್ಲ ಎಂದಿದ್ದರು. ಅಲ್ಲದೇ ಮುಂದುವರಿದು ಅದು ಯಾವನೇ ಆಗಿರಲಿ, ಸರ್ಕಾರಕ್ಕೆ ಎಚ್ಚರಿಕೆ ನೀಡಲು ಬರಲ್ಲ ಎಂದೂ ಹೇಳಿದ್ದರು.
ಕೆಲವರಿಗೆ ನಾನು ಯಾರಂತ ಗೊತ್ತಿಲ್ಲ: ಡಿ.ಕೆ ಶಿವಕುಮಾರ್!
ಇದೇ ವೇದಿಕೆಯಲ್ಲಿ ಡಿ.ಕೆ ಶಿವಕುಮಾರ್ ಅವರು, ಕೆಲವರಿಗೆ ನಾನು ಯಾರೆಂದು ತಿಳಿದಿಲ್ಲ ಅನಿಸುತ್ತೆ. ನಾನು ಈ ದೇಶದ ಪ್ರಧಾನಿ ಹಾಗೂ ಗೃಹ ಸಚಿವರಿಗೇ ಭಯಪಡದೆ ಜೈಲಿನಿಂದ ಬಂದಿದ್ದೇನೆ. ಅಪಾರ್ಟ್ಮೆಂಟ್ ಮಾಲೀಕ ಎಂದು ಕಿರಣ್ ಹೆಬ್ಬಾರ್ ಎಂಬಾತ ಪತ್ರ ಬರೆದು, ನಮಗೆ ಬೆದರಿಕೆ ಹಾಕುವುದಕ್ಕೆ ಬಂದಿದ್ದಾನೆ. ನಮ್ಮಲ್ಲಿ ಬಹುದೊಡ್ಡ ಮತದಾರರಿದ್ದಾರೆ.
ಇದು ಬೆಂಗಳೂರಿನ 1.30 ಕೋಟಿ ಮತದಾರರ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವಿದೆ. ಸರ್ಕಾರಗಳು ನಮ್ಮನ್ನು ನಿರ್ಲಕ್ಷಿಸಿದೆ ಎಂದಿದ್ದು. ಒಂದು ವೇಳೆ ಆಡಳಿತ ಪಕ್ಷ ನಮ್ಮ ಮನವಿ ನಿರ್ಲಕ್ಷಿಸಿದರೆ ಸದ್ಯದಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಬರುತ್ತಿದೆ ನೋಡಿಕೊಳ್ಳುತ್ತೇವೆ ಎಂದು ಪತ್ರದಲ್ಲಿ ಎಚ್ಚರಿಕೆ ಕೊಟ್ಟಿದ್ದಾನೆ. ಇದೆಲ್ಲಾ ನನ್ನ ಬಳಿ ನಡೆಯಲ್ಲ ಎಂದು ಹೇಳಿದ್ದಾರೆ.












Click it and Unblock the Notifications