ಆಫೀಸ್ ಮೀಟಿಂಗ್ನಲ್ಲಿ ಯಾರು ಹೆಚ್ಚು ಟೆನ್ಶನ್ ಕೊಡ್ತಾರೆ? ಹಾರ್ಟ್ ಬೀಟ್ ಮೂಲಕ ಟ್ರ್ಯಾಕ್ ಮಾಡಿದ ಬೆಂಗಳೂರಿನ ಟೆಕ್ಕಿ
ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ಒತ್ತಡ ಎಂಬುದು ಪ್ರತಿಯೊಬ್ಬ ಉದ್ಯೋಗಿಯ ದಿನನಿತ್ಯದ ಬದುಕಿನ ಭಾಗವಾಗಿದೆ. ಅದರಲ್ಲೂ ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಪ್ರತಿದಿನದ ಮೀಟಿಂಗ್ಗಳು, ಟಾರ್ಗೆಟ್ಗಳು ವಿಪರೀತ ಟೆನ್ಶನ್ ನೀಡುತ್ತವೆ. ಕೆಲವೊಮ್ಮೆ ಕಚೇರಿಯ ಮೀಟಿಂಗ್ಗಳಲ್ಲಿ ಪಾಲ್ಗೊಂಡಾಗ ಟೆನ್ಶನ್ನಿಂದ ನಮ್ಮ ಹೃದಯಬಡಿತ ತಾನಾಗಿಯೇ ಹೆಚ್ಚಾಗುತ್ತದೆ. ಆದರೆ, ಆಫೀಸ್ನಲ್ಲಿ ನಮಗೆ ಅತಿ ಹೆಚ್ಚು ಟೆನ್ಶನ್ ಕೊಡುವ ಸಹೋದ್ಯೋಗಿ ಯಾರು ಎಂಬುದನ್ನು ನಿಖರವಾಗಿ ಪತ್ತೆಹಚ್ಚಲು ಸಾಧ್ಯವೇ? ಇದು ಖಂಡಿತಾ ಸಾಧ್ಯ ಎಂದು ಬೆಂಗಳೂರಿನ ಟೆಕ್ಕಿಯೊಬ್ಬರು ಸಾಬೀತುಪಡಿಸಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಬೆಂಗಳೂರು ಮೂಲದ ಸಾಫ್ಟ್ವೇರ್ ಎಂಜಿನಿಯರ್ ಪಂಕಜ್ ಎಂಬುವವರು ವಿಶಿಷ್ಟವಾದ ಟೂಲ್ ಒಂದನ್ನು ಅಭಿವೃದ್ಧಿಪಡಿಸಿದ್ದು, ಕಚೇರಿಯ ಮೀಟಿಂಗ್ಗಳಲ್ಲಿ ತಮಗೆ ಅತಿ ಹೆಚ್ಚು ಒತ್ತಡ ತರುವ ಸಹೋದ್ಯೋಗಿಗಳು ಯಾರು ಎಂಬುದನ್ನು ಪತ್ತೆಹಚ್ಚಿದ್ದಾರೆ. ಈ ಕುರಿತು ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಫಿಟ್ನೆಸ್ ಟ್ರ್ಯಾಕರ್ ಮತ್ತು ಕ್ಯಾಲೆಂಡರ್ ಲಿಂಕ್
ಪಂಕಜ್ ಅವರು ತಮ್ಮ ಸ್ಮಾರ್ಟ್ ಫಿಟ್ನೆಸ್ ಟ್ರ್ಯಾಕರ್ ಡೇಟಾವನ್ನು ತಮ್ಮ ಆಫೀಸ್ನ ವರ್ಕ್ ಕ್ಯಾಲೆಂಡರ್ಗೆ ಲಿಂಕ್ ಮಾಡಿದ್ದಾರೆ. ಮೀಟಿಂಗ್ ನಡೆಯುವಾಗ ಅವರ ಹೃದಯಬಡಿತದಲ್ಲಿ ಆಗುವ ಏರುಪೇರುಗಳನ್ನು ಮತ್ತು ಆ ಮೀಟಿಂಗ್ನಲ್ಲಿ ಭಾಗವಹಿಸಿರುವ ಸಹೋದ್ಯೋಗಿಗಳ ವಿವರಗಳನ್ನು ಮ್ಯಾಚ್ ಮಾಡಿ, ಯಾರು ತಮಗೆ ಹೆಚ್ಚು ಟೆನ್ಶನ್ ನೀಡುತ್ತಾರೆ ಎಂಬುದನ್ನು ಪತ್ತೆಹಚ್ಚಿದ್ದಾರೆ. "ನನಗೆ ಯಾವ ಸಹೋದ್ಯೋಗಿಯಿಂದ ಅತಿ ಹೆಚ್ಚು ಒತ್ತಡ ಉಂಟಾಗುತ್ತದೆ ಎಂಬುದನ್ನು ಹುಡುಕಲು, ನಾನು ನನ್ನ ವೂಪ್ ಟ್ರ್ಯಾಕರ್ ಅನ್ನು ವರ್ಕ್ ಕ್ಯಾಲೆಂಡರ್ಗೆ ಕನೆಕ್ಟ್ ಮಾಡಿದ್ದೇನೆ" ಎಂದು ಅವರು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಪಂಕಜ್ ಹೇಳುವಂತೆ, ಅವರು ಫಿಟ್ನೆಸ್ ಬ್ಯಾಂಡ್ನ ಡೇಟಾ ಸ್ಟ್ರೀಮ್ ಅನ್ನು ರಿವರ್ಸ್-ಎಂಜಿನಿಯರಿಂಗ್ ಮಾಡುವ ಮೂಲಕ ಪ್ರತಿ ನಿಮಿಷದ ಹೃದಯಬಡಿತದ ಮಾಹಿತಿಯನ್ನು ಕಲೆಹಾಕಿದ್ದಾರೆ. ಬಳಿಕ ಆ ಡೇಟಾವನ್ನು ತಮ್ಮ ಕ್ಯಾಲೆಂಡರ್ ಈವೆಂಟ್ಗಳು ಮತ್ತು ಮೀಟಿಂಗ್ನಲ್ಲಿರುವವರ ಜೊತೆ ಹೋಲಿಕೆ ಮಾಡಿದ್ದಾರೆ. ಈ ಡೇಟಾ ಆಧಾರದ ಮೇಲೆ, ತಮಗೆ ಟೆನ್ಶನ್ ಕೊಡುವ ಸಹೋದ್ಯೋಗಿಗಳ ಒಂದು ಲೀಡರ್ ಬೋರ್ಡ್ ಅನ್ನು ಅವರು ತಮಾಷೆಗಾಗಿ ಸಿದ್ಧಪಡಿಸಿದ್ದಾರೆ.
"ನನ್ನ ಬಳಿ ಈಗ ಲೀಡರ್ ಬೋರ್ಡ್ ಇದೆ, ನಾನು ಪ್ರತಿದಿನ ಅದರ ಬಗ್ಗೆಯೇ ಯೋಚಿಸುತ್ತಿರುತ್ತೇನೆ" ಎಂದು ಅವರು ಹೇಳಿದ್ದಾರೆ. ತಮ್ಮ ಪೋಸ್ಟ್ನಲ್ಲಿ ಕೈಗೆ ಕಟ್ಟಿರುವ ಫಿಟ್ನೆಸ್ ಟ್ರ್ಯಾಕರ್ ಫೋಟೋ ಹಾಗೂ ಸಹೋದ್ಯೋಗಿಗಳ ಹೆಸರುಗಳನ್ನು ಬ್ಲರ್ ಮಾಡಿರುವ ಲೀಡರ್ ಬೋರ್ಡ್ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.
ನೆಟ್ಟಿಗರಿಂದ ತಮಾಷೆಯ ಪ್ರತಿಕ್ರಿಯೆಗಳು
ಈ ವಿಶಿಷ್ಟವಾದ ಪ್ರಾಜೆಕ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಐಟಿ ಉದ್ಯೋಗಿಗಳ ಗಮನ ಸೆಳೆದಿದ್ದು, ಹಲವರು ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು, "ಪಂಕಜ್ ಅವರು ಈ ಸಿಸ್ಟಮ್ ಅನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡಬೇಕು. ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಮುನ್ನ, ಯಾರು ಹೆಚ್ಚು ಒತ್ತಡ ಸೃಷ್ಟಿಸುತ್ತಾರೆ ಎಂದು ಪತ್ತೆಹಚ್ಚಲು ಕಂಪನಿಗಳಿಗೆ ಇದು ಸಹಾಯ ಮಾಡುತ್ತದೆ" ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು, "ಸಾಂಪ್ರದಾಯಿಕ ಎಚ್ಆರ್ ರಿವ್ಯೂಗಳು ಇಂತಹ ಡೇಟಾ ಆಧಾರಿತ ವರದಿಗಳಿಗೆ ಸಾಟಿಯಾಗಲು ಸಾಧ್ಯವಿಲ್ಲ" ಎಂದಿದ್ದಾರೆ.
ಆದರೆ, ಕೇವಲ ಹೃದಯಬಡಿತದ ಡೇಟಾದಿಂದ ಮಾತ್ರ ಟೆನ್ಶನ್ ಕೊಡುವವರನ್ನು ಪತ್ತೆಹಚ್ಚಲು ಸಾಧ್ಯವೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಮೀಟಿಂಗ್ಗೂ ಮುನ್ನ ಮೆಟ್ಟಿಲು ಹತ್ತುವುದು, ಸಿಹಿ ತಿಂಡಿ ತಿನ್ನುವುದು, ದೈಹಿಕ ಚಟುವಟಿಕೆ ಅಥವಾ ಊಟದ ಸಮಯದಂತಹ ಬಾಹ್ಯ ಅಂಶಗಳು ಕೂಡ ಹೃದಯಬಡಿತ ಹೆಚ್ಚಾಗಲು ಕಾರಣವಾಗಬಹುದು ಎಂದು ಬಳಕೆದಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
i hooked my whoop to my work calendar to find which coworker gives me the most stress 🚨
— Pankaj (@the2ndfloorguy) June 10, 2026
thanks to fable, I reverse engineered whoop to pull per minute heart rate. nd matched spikes with cal events and attendees
I now have a leaderboard and I think about it daily.
few info… pic.twitter.com/x1jdkW8JdZ
ಪಂಕಜ್ ಅವರ ಈ ಟ್ರ್ಯಾಕರ್ ಕೇವಲ ತಮಾಷೆಯ ಪ್ರಾಜೆಕ್ಟ್ ಆಗಿದ್ದರೂ, ಸ್ಮಾರ್ಟ್ ಡಿವೈಸ್ಗಳ ಡೇಟಾವನ್ನು ಫಿಟ್ನೆಸ್ ಹೊರತಾಗಿ ಬೇರೆ ಯಾವೆಲ್ಲಾ ಸೃಜನಶೀಲ ಕೆಲಸಗಳಿಗೆ ಬಳಸಬಹುದು ಎಂಬುದರ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಆನ್ಲೈನ್ನಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಐಟಿ ಉದ್ಯೋಗಿಗಳಿಗೆ ತಮ್ಮ ಆಫೀಸ್ನ ಲೀಡರ್ ಬೋರ್ಡ್ ಹೇಗಿರಬಹುದು ಎಂಬುದನ್ನು ತಿಳಿಯುವ ಕುತೂಹಲ ಹೆಚ್ಚಾಗಿದೆ.












Click it and Unblock the Notifications