ಈಶ್ವರಪ್ಪ ಪಿಎ ಅಪಹರಣ ಯತ್ನ ಕೇಸ್ : ಆರೋಪಿಗೆ ಗುಂಡೇಟು, ಬಂಧನ
ಬೆಂಗಳೂರು, ಫೆಬ್ರವರಿ 28 : ಸುಪಾರಿ ಕಿಲ್ಲರ್, ಕೆ.ಎಸ್.ಈಶ್ವರಪ್ಪ ಪಿಎ ಅಪಹರಣ ಯತ್ನ ಪ್ರಕರಣದ ಆರೋಪಿಯ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಬಾಣಸವಾಡಿ ಪೊಲೀಸರು ಆರೋಪಿ ದಿನೇಶ್‌ನನ್ನು ಬಂಧಿಸಿದ್ದಾರೆ.
ಬಾಣಸವಾಡಿ ಪೊಲೀಸ್ ಠಾಣೆಯ ಎಸಿಪಿ ಮಹದೇವಪ್ಪ ಆರೋಪಿ ದಿನೇಶ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಹೆಣ್ಣೂರಿನ ರೈಲ್ವೆ ಬ್ರಿಡ್ಜ್ ಬಳಿ ಗುರುವಾರ ತಡರಾತ್ರಿ ಆರೋಪಿ ಮೇಲೆ ಗುಂಡಿನ ದಾಳಿ ನಡೆಸಿ ಬಂಧಿಸಲಾಗಿದೆ.
ದಕ್ಷಿಣ ಭಾರತದ ಕುಖ್ಯಾತ ಸುಪಾರಿ ಕಿಲ್ಲರ್ ದಿನೇಶ್ ವಿರುದ್ಧ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿಯೂ ಹಲವು ಕೊಲೆ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ನಡೆದ ಪಳನಿ ಕೊಲೆ ಪ್ರಕರಣದಲ್ಲಿಯೂ ಆರೋಪಿಯಾಗಿದ್ದ.

ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕರಾಗಿದ್ದ ವಿನಯ್ ಅಪಹರಣ ಪ್ರಕರಣದಲ್ಲಿಯೂ ದಿನೇಶ್ ಆರೋಪಿಯಾಗಿದ್ದ. ಕಳೆದ ಎರಡೂವರೆ ವರ್ಷಗಳಿಂದ ಪೊಲೀಸರು ದಿನೇಶ್‌ಗಾಗಿ ಹುಡುಕಾಟ ನಡೆಸುತ್ತಿದ್ದರು.
ಹೆಣ್ಣೂರಿನ ರೈಲ್ವೆ ಸೇತುವೆ ಬಳಿ ದಿನೇಶ್ ಇರುವ ಖಚಿತ ಮಾಹಿತಿ ಪಡೆದ ಪೊಲೀಸರು ಬಂಧಿಸಲು ತೆರಳಿದ್ದರು. ಶರಣಾಗುವಂತೆ ಸೂಚನೆ ನೀಡಿದಾಗ ಮುಖ್ಯ ಪೇದೆ ಧರ್ಮ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ದಿನೇಶ್ ಮುಂದಾದ.
ಆಗ ಆತ್ಮ ರಕ್ಷಣೆಯಾಗಿ ದಿನೇಶ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ವಿನಯ್ ಅಪಹರಣ ಪ್ರಕರಣದಲ್ಲಿಯೂ ದಿನೇಶ್ ವಿಚಾರಣೆಯನ್ನು ಪೊಲೀಸರು ನಡೆಸುವ ಸಾಧ್ಯತೆ ಇದೆ.












Click it and Unblock the Notifications