ವಿಬ್‌ಗಯಾರ್: ಮುಂದುವರೆದ ಪ್ರತಿಭಟನೆ - ಲಾಠಿಚಾರ್ಜ್
ಬೆಂಗಳೂರು, ಜು. 21: ಬೆಂಗಳೂರಿನ ಹೊರವಲಯದ ಮಾರತ್ ಹಳ್ಳಿಯ ವಿಬ್‌ಗಯಾರ್ ಶಾಲೆಯ 1ನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶಾಲೆಯ ಮುಂದೆ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಶಾಲೆಯ ಆಡಳಿತ ಮಂಡಳಿಯವರು ಬೇಡಿಕೆಗೆ ಸ್ಪಂದಿಸಿ ಹೊರ ಬಾರದ್ದಕ್ಕೆ ರೊಚ್ಚಿಗೆದ್ದ ಕಾರ್ಯಕರ್ತರು ಶಾಲೆಯ ಮುಂಭಾಗದ ಗೇಟ್ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ ತಳ್ಳಿ ಒಳ ನುಗ್ಗಲು ಯತ್ನಿಸಿದರು. ಪೊಲೀಸರು ಈ ಸಂದರ್ಭದಲ್ಲಿ ಲಘು ಲಾಠಿ ಪ್ರಹಾರ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಶಾಲೆಯ ಆಡಳಿತಾಧಿಕಾರಿ ಮುನೀರ್ ಪ್ರತಿಭಟನಕಾರರ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ ಬಳಿಕ ಎಬಿವಿಪಿ ಕಾರ್ಯಕರ್ತರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.[ಶಾಲೆ ರೇಪ್ ಕೇಸ್, ಆರೋಪಿ ವಿರುದ್ಧ ಗೂಂಡಾ ಕಾಯ್ದೆ]
ಮಂಗಳವಾರ ಆಡಳಿತ ಮಂಡಳಿ ಜೊತೆ ಸಭೆ: ಸೋಮವಾರ ವಿಕಾಸಸೌಧದಲ್ಲಿ ವಿಬ್‌ಗಯಾರ್ ಶಾಲೆಯ ಪೋಷಕರ ಜೊತೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಶಾಲೆಯ ಸಮಸ್ಯೆಗಳನ್ನು ಎಳೆಎಳೆಯಾಗಿ ಹೇಳಿ ಸರ್ಕಾರ ಪ್ರತಿನಿಧಿಯೊಬ್ಬರನ್ನು ಶಾಲೆಗೆ ನೇಮಿಸುವಂತೆ ಮನವಿ ಮಾಡಿದರು. ಶಾಲೆಯಲ್ಲಿ 3500ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಅತ್ಯಾಚಾರ ಪ್ರಕರಣದಿಂದಾಗಿ ನಮಗೆಲ್ಲಾ ಆತಂಕವಾಗಿದೆ ಎಂದು ಪೋಷಕರು ಸಚಿವರ ಮುಂದೆ ಹೇಳಿ ಕಣ್ಣೀರಿಟ್ಟರು. ಸಭೆ ಬಳಿಕ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಸರ್ಕಾರದ ಪ್ರತಿನಿಧಿ ನೇಮಕದ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸುತ್ತೇನೆ. ಮಂಗಳವಾರ ಆಡಳಿತ ಮಂಡಳಿಯವರ ಜೊತೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವರು ಭರವಸೆ ನೀಡಿದರು.
ಪ್ರತಿಭಟನೆಯ ಮತ್ತಷ್ಟು ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಎಬಿವಿಪಿ ಬೇಡಿಕೆಗಳೇನು?
*ಶಾಲೆಯ ಎಲ್ಲಾ ಕೊಠಡಿಗಳಿಗೆ/ ವ್ಯಾನ್‌ಗಳಿಗೆ ಸಿಸಿಕ್ಯಾಮೆರಾ ಅಳವಡಿಸಬೇಕು
*ಶಾಲೆಯ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕು.
ಶಾಲೆಯಲ್ಲಿ ಮಹಿಳಾ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು.
*ಎಲ್ಲಾ ವ್ಯಾನ್‌ಗಳಲ್ಲಿ ಮಹಿಳಾ ಸಿಬ್ಬಂದಿಗಳಿರಬೇಕು.
ಬಂಧಿತ ಮುಸ್ತಫಾನ ವಿರುದ್ಧ ಶಾಲೆಯ ವತಿಯಿಂದ ದೂರು ನೀಡಿ, ಅವನನ್ನು ಶಾಲೆಯಿಂದ ಉಚ್ಚಾಟಿಸಬೇಕು.

ಎಬಿವಿಪಿ ಬೇಡಿಕೆಗಳನ್ನು ಈಡೇರಿಸುತ್ತೇವೆ:
*ಶಾಲೆಯ ಎಲ್ಲಾ ಕೊಠಡಿಗಳಲ್ಲಿ ಸಿಸಿಟಿವಿ ಅಳವಡಿಸುತ್ತೇವೆ.
*ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ.
*ಮಹಿಳಾ ಸಿಬ್ಬಂದಿಗಳ ಸಂಖ್ಯೆ ಯನ್ನು ಹೆಚ್ಚಿಸುತ್ತೇವೆ.
*ಇನ್ನು ಮುಂದೆ ಈ ರೀತಿ ಪ್ರಕರಣ ನಡೆಯದಂತೆ ಕ್ರಮ ಕೈಗೊಳ್ಳುತ್ತೇವೆ.
* ಮುಸ್ತಫಾ ಈಗಾಗಲೇ ಪೊಲೀಸ್ ವಶದಲ್ಲಿದ್ದಾನೆ. ಆತನ ವಿರುದ್ಧ ಇನ್ನು ಎರಡು ದಿನಗಳ ಒಳಗೆ ಶಾಲೆಯ ಆಡಳಿತ ಮಂಡಳಿ ಕ್ರಮ ಕೈಗೊಳ್ಳಲಿದೆ.

ವಿಬ್‌ಗಯಾರ್ ನಿರ್ಧಾರಕ್ಕೆ ಸ್ವಾಗತ:
ಸೋಮವಾರ ಮತ್ತು ಮಂಗಳವಾರದ ಬೆಳವಣಿಗೆ ನೋಡಿಕೊಂಡು ಮುಂದಿನ ನಿರ್ಧಾರವನ್ನು ಎಬಿವಿಪಿ ಕೈಗೊಳ್ಳಲಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ವಿಬ್‌ಗಯಾರ್ ಶಾಲೆಯ ಆಡಳಿತಾಧಿಕಾರಿ ಹೇಳಿದ್ದಾರೆ. ಎರಡು ದಿನಗಳಲ್ಲಿ ಶಾಲೆ ಕ್ರಮಗಳನ್ನು ಕೈಗೊಳ್ಳದಿದ್ದರೆ ಮತ್ತೆ ಎಬಿವಿಪಿ ಪ್ರತಿಭಟನೆ ನಡೆಸಲಿದೆ.
ನಬಿದಾಆಫ್, ಪೂರ್ವ ಬೆಂಗಳೂರು ಎಬಿವಿಪಿ ಮುಖಂಡ
|
ಪೊಲೀಸರಿಂದ ಲಾಠಿಚಾರ್ಜ್:
ಪ್ರತಿಭಟನೆ ವೇಳೆ ಶಾಲೆಯ ಗೇಟ್ ಬಳಿ ಹಾಕಲಾಗಿದ್ದ ಬ್ಯಾರಿಕೇಡ್‌ನ್ನು ತೆಗೆದು ಆವರಣ ಪ್ರವೇಶಿಸಲು ಮುಂದಾದ ವಿದ್ಯಾರ್ಥಿಗಳಿಗೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ನೂರಾರು ವಿದ್ಯಾರ್ಥಿಗಳಿಂದ ಪ್ರತಿಭಟನೆ:
ಎಬಿವಿಪಿಯ ನೂರಕ್ಕೂ ಅಧಿಕ ಸಂಖ್ಯೆ ಕಾರ್ಯಕರ್ತರು ಸೋಮವಾರದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಶಾಲೆಗೆ ಪೊಲೀಸ್ ರಕ್ಷಣೆ:
ರೇಪ್ ಪ್ರಕರಣದಿಂದಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿರುವ ವಿಬ್‌ಗಯಾರ್ ಶಾಲೆಯ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ನೂರಾರು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.












Click it and Unblock the Notifications