Industry: ಕರ್ನಾಟಕದಲ್ಲಿ ವಾಹನ ಬಿಡಿಭಾಗಗಳ ತಯಾರಿಕೆ ಘಟಕ ಸ್ಥಾಪನೆ: ಎಂಬಿ ಪಾಟೀಲ್
ಬೆಂಗಳೂರು, ಜೂನ್ 27: ಜಪಾನ್ ಪ್ರವಾಸದಲ್ಲಿರುವ ಕರ್ನಾಟಕದ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಇಲ್ಲಿನ ಅವೊಯಮಾ ಸೈಸಕುಷೊ ಕಂಪನಿಯ ಅಧ್ಯಕ್ಷ ಯುಕಿಯೋಷಿ ಅವೊಯಮಾ ಅವರೊಂದಿಗೆ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದರು. ಇದರ ಭಾಗವಾಗಿ ಕರ್ನಾಟಕದ ಪ್ರಮುಖ ಜಿಲ್ಲೆಯಲ್ಲಿ ಪ್ರಮುಖ ಕೈಗಾರಿಕೆಯೊಂದು ತಲೆ ಎತ್ತಲಿದೆ.
ಒಪ್ಪಂದದ ಪ್ರಕಾರ, ತುಮಕೂರಿನ ಬಳಿ ಇರುವ ಜಪಾನ್ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ₹210 ಕೋಟಿ ವೆಚ್ಚದಲ್ಲಿ ವಾಹನ ಬಿಡಿಭಾಗಗಳನ್ನು ತಯಾರಿಸುವ ಘಟಕವನ್ನು ಸ್ಥಾಪನೆ ಆಗಲಿದೆ. ಈ ಕುರಿತು ಕರ್ನಾಟಕ ಕೈಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಕೈಗಾರಿಕಾ ಸಲಕರಣೆಗಳನ್ನು ತಯಾರಿಸುವ ಜಪಾನಿನ ಅವೊಯಮಾ ಸೈಸಕುಷೊ ಕಂಪನಿಯು ಸಹಿ ಹಾಕಿದವು.

ಘಟಕ ಸ್ಥಾಪನೆಗೆ 20 ಎಕರೆ ಭೂಮಿ
ಟೊಯೊಟಾ ಕಂಪನಿಯ ವಾಹನ ಬಿಡಿಭಾಗಗಳನ್ನು ತಯಾರಿಸುವ ಅವೊಯಮಾ, ತುಮಕೂರಿನ ಜಪಾನ್ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ಈ ಘಟಕ ಸ್ಥಾಪಿಸಲು 20 ಎಕರೆ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಸಚಿವ ಎಂಬಿ ಪಾಟೀಲ್ ಕಚೇರಿಯು ಮಾಹಿತಿ ನೀಡಿದೆ.
ಇದೇ ವೇಳೆ ಸಚಿವರ ನೇತೃತ್ವದ ಕರ್ನಾಟಕ ನಿಯೋಗವು ವಾಹನ ತಯಾರಿಕಾ ಬಹುರಾಷ್ಟ್ರೀಯ ದೈತ್ಯ ಕಂಪನಿ ಟೊಯೊಟೊದ ಮುಖ್ಯಸ್ಥರನ್ನು ಭೇಟಿಯಾಗಿ ಚರ್ಚೆ ನಡೆಸಿತು. ಕಂಪನಿಯ ಪ್ರಾಜೆಕ್ಟ್ ಜನರಲ್ ಮ್ಯಾನೇಜರ್ ಟಕಾವೊ ಐಬಾ, ಟೊಯೊಟಾ ಕಿರ್ಲೋಸ್ಕರ್ ಮೋಟರ್‌ನ ಹಿರಿಯ ಉಪಾಧ್ಯಕ್ಷ ಸುದೀಪ್ ಎಸ್. ದಳವಿ ಅವರು ಸಮಾಲೋಚನೆಯಲ್ಲಿ ಭಾಗಿಯಾಗಿದ್ದರು. ರಾಜ್ಯದಲ್ಲಿನ ಟೊಯೊಟಾದ ಭವಿಷ್ಯದ ಹೂಡಿಕೆ ಅವಕಾಶಗಳ ಕುರಿತು ಅರಿವು ಮೂಡಿಸಲಾಯಿತು.
ಉದ್ಯಮಿ ಸ್ನೇಹಿ ವಾತಾವರಣ ನಿರ್ಮಿಸಲು ನೆರವು
ಜಾಗತಿಕ ಹೂಡಿಕೆದಾರರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಮತ್ತು ರಾಜ್ಯದ ಕೈಗಾರಿಕಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಬದ್ಧತೆಯನ್ನು ಕರ್ನಾಟಕ ಸರ್ಕಾರ ಹೊಂದಿದೆ. ಟೊಯೊಟಾ ಮತ್ತು ಅವೊಯಮಾ ಕಂಪನಿಗಳ ಜೊತೆಗಿನ ನಡೆಸಿದ ಸಮಾಲೋಚನೆಗಳಂತೆ ಸರ್ಕಾರ ಈ ಕಂಪನಿಗಳ ಉದ್ಯಮ ಸ್ನೇಹಿ ಸೌಲಭ್ಯ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಹೊಸ ಶುದ್ಧ ಇಂಧನ ಸಂಚಾರ ನೀತಿ ಹಾಗೂ ಗೌರಿಬಿದನೂರು, ಧಾರವಾಡದಲ್ಲಿ ವಾಹನ ತಯಾರಿಕಾ ಉದ್ಯಮದ ನೆರವಿಗಾಗಿ ಎರಡು ದೊಡ್ಡ ಕೈಗಾರಿಕಾ ಸಮೂಹಗಳನ್ನು ಸ್ಥಾಪಿಸಲಾಗುತ್ತಿದೆ. ಈ ವಿಚಾರವನ್ನು ಜಪಾನ್ ಕಂಪನಿಗಳ ಗಮನಕ್ಕೆ ತರಲಾಯಿತು.
ರಾಜ್ಯ ಕೈಗಾರಿಕೆ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಟೊಯೊಟಾಕ್ಕೆ ಅಗತ್ಯ ಇರುವ ಎಲ್ಲ ಬಗೆಯ ನೆರವನ್ನು ರಾಜ್ಯ ಸರ್ಕಾರದಿಂದ ಒದಗಿಸಲಿದೆ ಎಂದು ಬಂಡವಾಳ ಹೂಡಿಕೆಗೆ ಉತ್ತೇಜಿಸಲಾಯಿತು.
ಸಚಿವರ ನೇತೃತ್ವದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಉಪಸ್ಥಿತರಿದ್ದರು.












Click it and Unblock the Notifications