ವಾಟಾಳ್ ನಾಗರಾಜ್‌ಗೆ ಜೀವ ಬೆದರಿಕೆ ಕರೆ
ಬೆಂಗಳೂರು, ಜ.19 : ಸದಾ ವಿಭಿನ್ನವಾಗಿ ಪ್ರತಿಭಟನೆ ಮಾಡುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮತ್ತು ಅವರ ಆಪ್ತರಿಗೆ ಪ್ರಾಣ ಬೆದರಿಕೆ ಕರೆ ಬಂದಿದೆ. ಈ ಕುರಿತು ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಾಟಾಳ್ ನಾಗರಾಜ್ ಅವರ ಆಪ್ತ ಎನ್.ವೆಂಕಟೇಶ್ ಅವರ ಮೊಬೈಲ್‌ಗೆ ಕರೆ ಮಾಡಿರುವ ಅಪರಿಚಿತ ವ್ಯಕ್ತಿ ಭಾನುವಾರ ರಾತ್ರಿ ಬೆದರಿಕೆ ಹಾಕಿದ್ದಾರೆ ಎಂದು ವೆಂಕಟೇಶ್ ಸೋಮವಾರ ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. [ಕತ್ತೆಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟ ವಾಟಾಳ್ ನಾಗರಾಜ್!]

ಭಾನುವಾರ ರಾತ್ರಿ 9.30ರ ಸುಮಾರಿಗೆ ವೆಂಕಟೇಶ್ ಅವರಿಗೆ ಕರೆ ಮಾಡಿದ್ದ ಅನಾಮಿಕ ವ್ಯಕ್ತಿ ವೆಂಕಟೇಶ್ ಮತ್ತು ವಾಟಾಳ್ ನಾಗರಾಜ್ ಅವರನ್ನು ಅವ್ಯಾಚ್ಯಾ ಶಬ್ದಗಳಿಂದ ನಿಂದಿಸಿದ್ದಾನೆ ಮತ್ತು ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. [ವಾಟಾಳ್ ನಾಗರಾಜ್‌ಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ]
'ವಾಟಾಳ್ ನಾಗರಾಜ್ ಹಾಗೂ ನಿನ್ನನ್ನು ಮುಗಿಸುತ್ತೇನೆ' ಎಂದು ಕರೆ ಮಾಡಿದ ವ್ಯಕ್ತಿ ಬೆದರಿಕೆ ಹಾಕಿದ್ದಾನೆ. ಸಂಬಂಧ ತನಿಖೆ ನಡೆಸಿ ಸೂಕ್ತ ರಕ್ಷಣೆ ನೀಡಬೇಕೆಂದು ವೆಂಕಟೇಶ್ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಹನುಮಂತನಗರ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯವೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಅಂದಹಾಗೆ ಯಾವಾಗಲೂ ವಿನೂತನವಾಗಿ ಪ್ರತಿಭಟನೆ ಮಾಡುವ ವಾಟಾಳ್ ಇದರ ವಿರುದ್ಧವೂ ಪ್ರತಿಭಟನೆ ಮಾಡ್ತಾರಾ? ಕಾದು ನೋಡಬೇಕು.












Click it and Unblock the Notifications