• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಾಲಿ ರೆಡ್ಡಿ ತಿಜೋರಿ ಬಗ್ಗೆ ಎಷ್ಟೆಲ್ಲ ಗುಮಾನಿ! ಬಾಯಿ ಕೊಟ್ಟು ಕೋಲಲ್ಲಿ ಬಡಿಸಿಕೊಂಡರೆ?

|

ಬೆಂಗಳೂರು, ನವೆಂಬರ್ 10 : ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಶ್ರೀಮಂತಿಕೆ, ವೈಭೋಗ, ಮಗಳ ಮದುವೆ ಸಂಭ್ರಮ, ಆಹಾ-ಓಹೋ ಎನಿಸುವಂಥ ಮೆರವಣಿಗೆ-ಉರವಣಿಗೆಗಳನ್ನೆಲ್ಲ ಕಂಡವರು ಈ ಮನುಷ್ಯನಿಗೆ ಇಪ್ಪತ್ತು ಕೋಟಿ ರುಪಾಯಿ ಅದ್ಯಾವ ಲೆಕ್ಕ ಅನಿಸುತ್ತಿರಬಹುದು. ಹೌದು, ಈಗ ಪ್ರಸ್ತಾವ ಮಾಡುತ್ತಿರುವುದು ಅದೇ ಚಿನ್ನದ ಗಟ್ಟಿ ಪ್ರಕರಣ.

ಸಿಸಿಬಿಯಿಂದ ಜನಾರ್ದನ ರೆಡ್ಡಿ ಬಂಧನ ಆಗುತ್ತದೆ. ಅದರಲ್ಲೂ ಇಪ್ಪತ್ತು ಕೋಟಿ ರುಪಾಯಿ ಹಣದ ವ್ಯವಹಾರ ಅದು ಎಂದಾಗ ನಾನಾ ಬಗೆಯಲ್ಲಿ ಅಭಿಪ್ರಾಯಗಳು ಬಂದವು. ಜಾರಿ ನಿರ್ದೇಶನಾಲಯದಲ್ಲಿನ ಕೇಸು ಬಿಡಿಸಿಕೊಳ್ಳಲು ಡೀಲ್ ಕುದುರಿಸುತ್ತೀನಿ ಎಂದು ಹಣ ಕೇಳಿದ್ದರಂತೆ ಜನಾರ್ದನ ರೆಡ್ಡಿ ಅನ್ನೋದು ಆರೋಪ.

ವಂಚನೆ ಕೇಸ್ : ಇಷ್ಟಕ್ಕೂ ಗಾಲಿ ಜನಾರ್ದನ ರೆಡ್ಡಿ ಬಂಧನದ ಅಗತ್ಯವೇನು?

ಹೌದು, ಒಂದು ವೇಳೆ ಇಡಿ ಅಧಿಕಾರಿಗಳನ್ನು ಡೀಲ್ ಮಾಡುವ 'ಧರ್ಮ ಕಾರ್ಯಕ್ಕೆ', ಅದೂ ಬೇರೆಯವರ ಸಲುವಾಗಿ ಈ ಕೆಲಸ ಮಾಡಿಕೊಡಲು ತಮ್ಮ ತಿಜೋರಿಯಿಂದ ಇಪ್ಪತ್ತು ಕೋಟಿ ಎತ್ತಿಕೊಡಲು ಸಾಧ್ಯವೆ ಜನಾರ್ದನ ರೆಡ್ಡಿಗೆ? ಲಂಚ ಕೊಡುವುದೇ ತಪ್ಪಲ್ಲವಾ ಎಂಬ ನೈತಿಕವಾದ ಪ್ರಶ್ನೆ ಕೇಳಿದರೆ ನೋ ಕಾಮೆಂಟ್ಸ್. ಅಥವಾ ಇಪ್ಪತ್ತು ಕೋಟಿ ರುಪಾಯಿಯಲ್ಲಿ ತಮಗೂ ಒಂದಷ್ಟು ಉಳಿಯುತ್ತದೆ ಎಂದುಕೊಂಡಿದ್ದರೆ ಅದು ರೆಡ್ಡಿಯ ಬ್ಯಾಡ್ ಟೈಮ್.

ಚಿನ್ನದ ಗಟ್ಟಿ ಕೇಸಿಗೆ ನಾನಾ ಆಯಾಮಗಳು ಇವೆ

ಚಿನ್ನದ ಗಟ್ಟಿ ಕೇಸಿಗೆ ನಾನಾ ಆಯಾಮಗಳು ಇವೆ

ಒಟ್ಟಿನಲ್ಲಿ ಇಡೀ ಪ್ರಕರಣಕ್ಕೆ ನಾನಾ ಕೊವೆಗಳಿವೆ. ಒಂದೋ, ಯಾರನ್ನೋ ಕೇಸಿನಿಂದ ಬಚಾವು ಮಾಡುವ ಸಲುವಾಗಿ ತಮ್ಮ ಹಿಂದಿನ ಅನುಭವ ಹಾಗೂ ಸಂಪರ್ಕ ಬಳಸಲು ರೆಡ್ಡಿ ಮುಂದಾಗಿರಬಹುದು. ಅಥವಾ ನಿಜಕ್ಕೂ ಆರ್ಥಿಕ ಸಮಸ್ಯೆಯಲ್ಲಿದ್ದು, ಒಂದಿಷ್ಟು ದುಡ್ಡು ಬರುವ ಹಾಗಿದ್ದರೆ ಬಂದುಬಿಡಲಿ ಅಂತಲೂ ಇರಬಹುದು. ಇನ್ನು ಈ ಪ್ರಕರಣದಲ್ಲಿ ರೆಡ್ಡಿಯನ್ನು ಸಿಕ್ಕಿಸಿ, ಲೋಕಸಭೆ ಚುನಾವಣೆ ತನಕ ಹೈರಾಣು ಮಾಡುವ ಹೊಂಚು ಅಥವಾ ಸಂಚು ಇರಬಹುದು. ರೆಡ್ಡಿಗಾರು ಬಗ್ಗೆ ಅಧಿಕಾರ ಕೇಂದ್ರದಲ್ಲಿರುವ ಬಹುತೇಕರಿಗೆ ಸಿಟ್ಟಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಬಳ್ಳಾರಿಗೆ ಹೋಗಲು ಕೋರ್ಟ್ ಅನುಮತಿ ಸಿಕ್ಕ ನಂತರ ಮೊದಲ ಬಾರಿಗೆ ತೆರಳಿದಾಗ, ಮೆರವಣಿಗೆಯಲ್ಲಿ ಸಾಗುವ ಹಾದಿಯಲ್ಲೇ ಜನಾ ರೆಡ್ಡಿ ಕಾಂಗ್ರೆಸ್ ಬಗ್ಗೆ ಬೆಂಕಿ ಉಗುಳಲು ಆರಂಭಿಸಿದ್ದರು. ಹಿಂದೆಯೇ ಶ್ರೀರಾಮುಲು ಸುಮ್ಮನಿರುವಂತೆ ಮಾಡಿದ್ದರು. ಆಗಲೇ ಹಲವರು, ಇದು ಸರಿಹೋಗುವ ಪೈಕಿಯಲ್ಲ ಅಂದುಕೊಂಡಿದ್ದರು.

ಒರಟು ಹೇಳಿಕೆಗಳ ಮೂಲಕ ಮತ್ತೆ ಸುದ್ದಿಗೆ ಬಂದರು

ಒರಟು ಹೇಳಿಕೆಗಳ ಮೂಲಕ ಮತ್ತೆ ಸುದ್ದಿಗೆ ಬಂದರು

ಆದರೆ, ಮಗಳ ಮದುವೆ ವಿಚಾರದಲ್ಲಿ ಒಂದಿಷ್ಟು ಬುದ್ಧಿವಂತಿಕೆಯಿಂದಲೇ ವರ್ತಿಸಿದ್ದರು ಜನಾರ್ದನ ರೆಡ್ಡಿ. ಆದರೆ ಕರ್ನಾಟಕ ವಿಧಾನಸಭಾ ಚುನಾವಣೆ ಹಾಗೂ ಈಚೆಗೆ ನಡೆದ ಐದು ಕ್ಷೇತ್ರಗಳ ಉಪಚುನಾವಣೆ (ಬಳ್ಳಾರಿ ಲೋಕಸಭಾ ಕ್ಷೇತ್ರವೂ ಒಳಗೊಂಡಿತ್ತು) ವೇಳೆ ಮತ್ತೆ ಸುದ್ದಿಗೆ ಬಂದರು; ಯಥಾಪ್ರಕಾರ ತಮ್ಮ ಒರಟು ಹೇಳಿಕೆಗಳ ಮೂಲಕ.

ಜೈಲಿಗೆ ಹೋಗಿಬಂದ ಮೇಲೆ ಮತ್ತಷ್ಟು ಕ್ರೂರತನ

ಜೈಲಿಗೆ ಹೋಗಿಬಂದ ಮೇಲೆ ಮತ್ತಷ್ಟು ಕ್ರೂರತನ

ಜನಾರ್ದನ ರೆಡ್ಡಿ ಅವರ ಮಾಜಿ ಸ್ನೇಹಿತರನ್ನು ಮಾತನಾಡಿಸಿದರೆ, ಆತನನ್ನು ನಂಬುವುದು ಸಾಧ್ಯವೇ ಇಲ್ಲ ಎನ್ನುತ್ತಾರೆ. ವೈಯಕ್ತಿಕ ದ್ವೇಷದಿಂದ ಹೀಗೆ ಹೇಳುತ್ತಿರಬಹುದಾ ಎಂದರೆ, ಆತನಿಗೆ ವಿಪರೀತ ಅಂದರೆ ವಿಪರೀತ ಹಣ ಬಂದ ಮೇಲೆ ಅದರ ನಿರ್ವಹಣೆ ಸಾಧ್ಯವಾಗಲಿಲ್ಲ. ಅದರ ಹೊರತಾದ 'ಭಾಷೆ' ಕೂಡ ಅರ್ಥವಾಗಲ್ಲ. ಜೈಲಿಗೆ ಹೋಗಿ ಬಂದ ಮೇಲೆ ಮತ್ತಷ್ಟು ಅಪಾಯಕಾರಿ ಹಾಗೂ ಕ್ರೂರತನ ಬಂದಿದೆ. ಆತನ ಬಗ್ಗೆ ಒಂದೇ ಒಂದು ಒಳ್ಳೆ ಮಾತು ಹೇಳುವುದು ಸಹ ಕಷ್ಟ ಎನ್ನುತ್ತಾರೆ.

ತಿರುಪತಿ ತಿಮ್ಮಪ್ಪನ ಆಣೆಗೂ ಈ ವ್ಯವಹಾರದ ಬಗ್ಗೆ ಗೊತ್ತಿಲ್ಲ

ತಿರುಪತಿ ತಿಮ್ಮಪ್ಪನ ಆಣೆಗೂ ಈ ವ್ಯವಹಾರದ ಬಗ್ಗೆ ಗೊತ್ತಿಲ್ಲ

ಆತನ ದುಡ್ಡೆಲ್ಲ ಈಗ ಹೊರ ತೆಗೆಯಲು ಸಾಧ್ಯವಿಲ್ಲದ ಸ್ಥಿತಿಯಲ್ಲಿವೆ. ಆತನಿಗೆ ಕೈ ಕಟ್ಟಿಹಾಕಿದಂತೆ ಆಗಿದೆ. ಆದರೆ ರಾಜಕೀಯ ಒತ್ತಡಗಳು ಹಾಗೂ ಆತನದೇ ಕಮಿಟ್ ಮೆಂಟ್ ಗಳು ಸುಧಾರಣೆಗೆ ಅವಕಾಶ ನೀಡಲು ಸಾಧ್ಯವೇ ಇಲ್ಲ. ಈಗಿನ ಪ್ರಕರಣದಿಂದ ಆತ ಬಹಳ ಸುಲಭವಾಗಿ ಹೊರಬರಬಹುದು. ಈ ಸಲ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮಾತ್ರವಲ್ಲ, ಕೇಂದ್ರದಿಂದಲೂ ಹದ ಹೊಡೆಯಲು ಹೀಗೆ ಮಾಡಲಾಗಿದೆ ಎನ್ನುವವರೂ ಇದ್ದಾರೆ. ಆದರೆ ಜನಾರ್ದನ ರೆಡ್ಡಿ ಮಾತ್ರ, ತಿರುಪತಿ ತಿಮ್ಮಪ್ಪನ ಆಣೆಗೂ ನನಗೆ ಹಾಗೂ ಈ ವ್ಯವಹಾರಕ್ಕೆ ಸಂಬಂಧ ಇಲ್ಲ ಎನ್ನುತ್ತಿದ್ದಾರೆ ಅಂತ ಮಾಧ್ಯಮಗಳು ಹೇಳುತ್ತಿವೆ. ರೆಡ್ಡಿಯನ್ನು ವಿಚಾರಿಸಲು ಇನ್ನೇನು ಬಾಕಿಯಿದೆ? ಸ್ವತಃ ರೆಡ್ಡಿ ಕೋಟಿ-ಕೋಟಿಯ ಕಿರೀಟ ಮಡಗಿದ ಶ್ರೀನಿವಾಸನ ಮೇಲೆ ಆಣೆ ಇಟ್ಟರೆ ಆಯಿತಲ್ಲ! ಇನ್ನೆರಡು ದಿನಕ್ಕೆ ಎಲ್ಲವೂ ತಣ್ಣಗಾಗುತ್ತದೆ, ರೆಡ್ಡಿಗಾರು ಮತ್ತೊಂದು ಸುತ್ತು ಪಾಠ ಕಲಿತಿರಬಹುದು ಎಂಬುದು ಸದ್ಯದ ಲೆಕ್ಕಾಚಾರ. ಇದನ್ನು ತಿರುಪತಿ ತಿಮ್ಮಪ್ಪನೇ ಬಲ್ಲ.

English summary
Here is the various dimension to allegation against former minister Janardana Reddy, which is related to money laundering and other cases, currently investigation going on by Bengaluru CCB.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X