Revanth Reddy: ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ಕನ್ನಡಿಗರ ಪತ್ರ
ಬೆಂಗಳೂರು, ಜೂನ್. 08 : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿ 187 ಕೋಟಿ ರೂಪಾಯಿ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ. ಈಗಾಗಲೇ ಸರ್ಕಾರ ಎಸ್‌ಐಟಿ ರಚಿಸಿದೆ.
ಇದರ ಬೆನ್ನಲ್ಲೇ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಕನ್ನಡಿಗರ ಮನವಿ ಎಂದು ಜಾತ್ಯಾತೀತ ಜನತಾದಳ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ಇದರಲ್ಲಿ ಕನ್ನಡಿಗರ ಸೇರಬೇಕಾಗಿದ್ದ ಸುಮಾರು 187 ಕೋಟಿ ರೂಪಾಯಿ ಹಣವನ್ನು ಹಿಂತಿರುಗಿಸಿ ಎಂದಿದೆ.

ಜೆಡಿಎಸ್ ಹಂಚಿಕೊಂಡಿರುವ ಪತ್ರದಲ್ಲೇನಿದೆ?
"ಕರ್ನಾಟಕದ ವಾಲ್ಮೀಕಿ ಸಮುದಾಯಕ್ಕೆ ಸೇರಬೇಕಾಗಿದ್ದ ಸುಮಾರು 187 ಕೋಟಿ ರೂಪಾಯಿ ಹಣವನ್ನು ನಿಮ್ಮ ನಾಯಕ ರಾಹುಲ್ ಗಾಂಧಿ ಅವರ ಅಣತಿಯಂತೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ, ಸಚಿವ ನಾಗೇಂದ್ರ ಅವರ ಮೂಲಕ ತೆಲಂಗಾಣದ ಕಾಂಗ್ರೆಸ್ ಚುನಾವಣಾ ಖರ್ಚಿಗೆ ಸಾಗಿಸಿದ್ದಾರೆ".
"ನಿಮ್ಮಲ್ಲಿ ಕನ್ನಡಿಗರು ಕೇಳಿಕೊಳ್ಳುವುದೇನೆಂದರೆ ನಮ್ಮ ರಾಜ್ಯಕ್ಕೆ ಸೇರಬೇಕಾಗಿದ್ದ ಹಣವನ್ನು ದಯಮಾಡಿ ಹಿಂತಿರುಗಿಸಿ ಕೊಡಿ. ಈ ಹಣ ವಾಲ್ಮೀಕಿ ಸಮುದಾಯದ ಏಳಿಗೆಗಾಗಿ ಬಳಕೆ ಆಗಬೇಕಿತ್ತು ಈ ನೀಚ ಸರ್ಕಾರ ಉಂಡು ಹೋದ ಕೊಂಡು ಹೋದ ಎಂಬಂತೆ ತಮ್ಮ ಸ್ವಾರ್ಥಕ್ಕಾಗಿ ಇಲ್ಲಿ ಲೂಟಿ ಹೊಡೆದದ್ದಲ್ಲದೆ, ಮಿಕ್ಕ ಹಣವನ್ನೂ ಬೇರೆ ಬೇರೆ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಖರ್ಚಿಗೆ ಸಾಗಿಸಿದ್ದಾರೆ".
"ಗುಂಡಿಗೆ ಹೋದ ಹೆಣ, ಕಾಂಗ್ರೆಸ್ ನುಂಗಿದ ಹಣ ಎಂದಿಗೂ ವಾಪಸ್ ಬರುವುದಿಲ್ಲ ಎಂಬುದು ನಮಗೆ ತಿಳಿದಿದೆ ಆದ್ರೆ ಕೊನೆ ಪ್ರಯತ್ನವಾಗಿ ನಿಮ್ಮಲ್ಲಿ ಈ ಮನವಿ ಮಾಡುತ್ತಿದ್ದೇವೆ, ಹಣ ಹಿಂತಿರುಗಿಸಿ ವಿಶ್ವಾಸ ಉಳಿಸಿಕೊಳ್ಳಿ- ಇಂತಿ ಕನ್ನಡಿಗರು" ಎಂದು ಪತ್ರದಲ್ಲಿ ಬರೆಯಲಾಗಿದೆ.












Click it and Unblock the Notifications