Lehar Singh: ಬೆಂಗಳೂರಿನ ಈ ಮುಖ್ಯ ಸಮಸ್ಯೆಗಳ ಪರಿಹಾರಕ್ಕೆ ಡಿಸಿಎಂಗೆ ಬಿಜೆಪಿ ಸಂಸದ ಪತ್ರ
ಬೆಂಗಳೂರು, ನವೆಂಬರ್ 23: ರಾಜಧಾನಿ ಸಿಲಿಕಾನ್ ಸಿಟಿಯಲ್ಲಿನ ಸಂಚಾರ ದಟ್ಟಣೆ ಸಮಸ್ಯೆ, ರಸ್ತೆ ಅಗಲೀಕರಣದಂತಹ ಕಾಮಗಾರಿಗಳ ವಿಳಂಬ ಕುರಿತು ಬಿಜೆಪಿ ಸಂಸದರೊಬ್ಬರು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಈ ಮೂಲಕ ಸಾರ್ವಜನಿಕ ಸಮಸ್ಯೆಗಳ ಪರಿಹಾರಗಳ ಮೇಲೆ ಅವರು ಬೆಳಕು ಚೆಲ್ಲಿದ್ದಾರೆ.
ಬೆಂಗಳೂರಿನ ಹೃದಯಭಾಗದಲ್ಲಿನ ರಸ್ತೆಯ ಅಗಲೀಕರಣ, ನಿತ್ಯ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತು ಬಿಜೆಪಿ ಲೋಕಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ ಅವರು ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಪತ್ರವನ್ನು ಅವರು ಸಾಮಾಜಿಕ ಜಾಲತಾಣ X ನಲ್ಲಿ ಬುಧವಾರ ಪೋಸ್ಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಬಾಕಿ ಇರುವ ರಸ್ತೆ ಅಗಲೀಕರಣ ಕಾಮಗಾರಿಯನ್ನು ತ್ವರಿತಗೊಳಿಸಿ ಪ್ರಯಾಣಿಕರು ಹಾಗೂ ನಿವಾಸಿಗಳನ್ನು ಸಂಚಾರ ದಟ್ಟಣೆಯಿಂದ ಪಾರು ಮಾಡಬೇಕು. ಈ ಯೋಜನೆಗಳು ಬ್ರ್ಯಾಂಡ್ ಬೆಂಗಳೂರಿನ ಗುರಿಗೆ ಅನುಗುಣವಾಗಿವೆ. ನಗರದಲ್ಲಿನ ಮೇಖ್ರಿ ವೃತ್ತ ಹಾಗೂ ಕಾವೇರಿ ವೃತ್ತದ ಸುಂದರೀಕರಣಕ್ಕೆ ಸಂಸದರ ನಿಧಿಯಿಂದ ಅನುದಾನ ನೀಡುವುದಾಗಿ ಲೇಹರ್ ಸಿಂಗ್ ತಿಳಿಸಿದ್ದಾರೆ.
In my letter to Dy CM Shri @DKShivakumar, I have highlighted the plight of residents and commuters in Bengaluru, particularly in two crucial stretches - between Mekhri Circle to city and to Cantonment Station which suffer from daily traffic jams. 1/2@CMofKarnataka pic.twitter.com/MWXT3WqWGl
— Lahar Singh Siroya (@LaharSingh_MP) November 22, 2023
ಮೇಖ್ರಿ ವೃತ್ತ-ದಂಡು ನಿಲ್ದಾಣ ರಸ್ತೆ ಅಗಲೀಕರಣ
ಬೆಂಗಳೂರಿನ ಹೃದಯ ಭಾಗದಲ್ಲಿರುವ ಪ್ರಮುಖ ರಸ್ತೆಗಳಲ್ಲಿ ಅತೀವ ಟ್ರಾಫಿಕ್‌ನಿಂದ ಪ್ರಯಾಣಿಕರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಮತ್ತು ವಿಶೇಷವಾಗಿ ಮೇಖ್ರಿ ವೃತ್ತದಿಂದ ನಗರಕ್ಕೆ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಕ್ಕೆ ಪ್ರಯಾಣಿಸುವವರ ಅನುಕೂಲಕ್ಕಾಗಿ ರಸ್ತೆ ಅಗಲೀಕರಣ ಯೋಜನೆಗಳನ್ನು ತ್ವರಿತಗೊಳಿಸಲು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಪ್ರತಿದಿನ ಟ್ರಾಫಿಕ್ ಜಾಮ್‌ನಿಂದಾಗಿ ಸಮಸ್ಯೆಗೆ ಒಳಗಾಗಿರುವ ಪ್ರಯಾಣಿಕರ ಹಿತದೃಷ್ಟಿಯತ್ತ ಗಮನಹರಿಸಬೇಕು. ಹೆಬ್ಬಾಳ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಬರುವ ರಸ್ತೆ ವಿಸ್ತಾರವಾಗಿದೆ. ಆದರೆ ಮೇಖ್ರಿ ವೃತ್ತದ ಅಂಡರ್‌ಪಾಸ್ ದಾಟಿ ನಗರದ ಕಡೆಗೆ ಬರುವಾಗ 6 ಪಥಗಳಿದ್ದ ರಸ್ತೆ 4 ಪಥಗಳಾಗಿ ಕಿರಿದಾಗುತ್ತದೆ.
ಈ ಜಾಗದಲ್ಲಿ ಉಂಟಾಗುವ ಅಡಚಣೆಯು ನಿರಂತರ ಟ್ರಾಫಿಕ್ ಜಾಮ್‌ಗೆ ಕಾರಣವಾಗಿ ವಾಹನಗಳು ದೂರದವರೆಗೆ ಸರತಿಯಲ್ಲಿ ನಿಲ್ಲುವಂತಾಗಿದೆ ಎಂದು ಅವರು ವಿವರಿಸಿದ್ದಾರೆ.
ಕೋರ್ಟ್ ಅನುಮೋದನೆ ಇದ್ದರೂ ಕಾಮಗಾರಿ ವಿಳಂಬ
ಮೇಖ್ರಿ ವೃತ್ತದಿಂದ ಕಂಟೋನ್ಮೆಂಟ್ ನಿಲ್ದಾಣದವರೆಗೆ ಹೆಚ್ಚು ಸಂಚಾರ ದಟ್ಟಣೆ ಉಂಟಾಗಿ ಬಳ್ಳಾರಿ ರಸ್ತೆಯಲ್ಲಿ ಸಮಸ್ಯೆ ಬಿಗಡಾಯಿಸುತ್ತದೆ. ಈ ಭಾಗದಲ್ಲಿ ರಸ್ತೆ ಅಗಲೀಕರಣ ಯೋಜನೆಗಳಿಗೆ ಬಿಬಿಎಂಪಿಯಿಂದ ಪ್ರಸ್ತಾವನೆ ರೂಪಿಸಿದ್ದರೂ ಮತ್ತು ಸುಪ್ರೀಂ ಕೋರ್ಟ್‌ನಿಂದ ಅನುಮೋದನೆ ಪಡೆದಿದ್ದರೂ ಕಾಮಗಾರಿ ವಿಳಂಬವಾಗುತ್ತಿರುವ ಕುರಿತು ಅವರು ಸರ್ಕಾರದ ಗಮನ ಸೆಳೆದಿದ್ದಾರೆ.
ರಸ್ತೆ ಅಗಲೀಕರಣ ಕಾಮಗಾರಿಯು ಡಿಕೆ ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರಿನ ಗುರಿಗೆ ಪೂರಕವಾಗಿದೆ ಎಂದಿರುವ ಸಂಸದರು, ರಸ್ತೆ ಅಗಲೀಕರಣ ಕಾಮಗಾರಿ ಜೊತೆಗೆ ಮೇಖ್ರಿ ವೃತ್ತ ಹಾಗೂ ಕಾವೇರಿ ವೃತ್ತದ ಸುಂದರೀಕರಣ ಕಾಮಗಾರಿ ನಡೆದರೆ, ಅದಕ್ಕೆ ತಮ್ಮ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ನೀಡುವುದಾಗಿ ಹೇಳಿದರು.
ತ್ವರಿತ ಕ್ರಮಕ್ಕೆ ಸಂಸದರ ಕರೆ
ರಾಜ್ಯಸಭಾ ಸಂಸದರು ರಸ್ತೆ ವಿಸ್ತರಣೆ ಯೋಜನೆಗಳಿಗೆ ಸರ್ಕಾರ ಕೂಡಲೇ ಗಮನ ಹರಿಸುವಂತೆ ಕರೆ ನೀಡಿದ್ದಾರೆ. ಸಂಚಾರ ದಟ್ಟಣೆಯನ್ನು ನಿವಾರಿಸುವಲ್ಲಿ ಮತ್ತು ಬೆಂಗಳೂರಿನ ನಿವಾಸಿಗಳಿಗೆ ಸುಲಲಿತವಾದ ಪ್ರಯಾಣದ ಅನುಭವ ದೊರಕಿಸಿಕೊಡುವ ಬಗ್ಗೆ ಪತ್ರದಲ್ಲಿ ಮೂಲಕ ವಿನಂತಿಸಲಾಗಿದೆ.












Click it and Unblock the Notifications