ಮನೆಯಿಂದ ಚಿನ್ನದುಂಗುರ ಮಿಸ್ಸಿಂಗ್ : ಕ್ಲೀನಿಂಗ್ ಮಾಡಲು ಬಂದ Urban Company ಮೇಲೆ ಆರೋಪ, ಕಂಪನಿ ಹೇಳಿದ್ದೇನು?
ಇತ್ತೀಚಿನ ದಿನಗಳಲ್ಲಿ ಎಲ್ಲವೂ ಆನ್ ಲೈನಿನಲ್ಲಿಯೇ ಆಗುತ್ತದೆ. ಮನೆಗೆ ದಿನಸಿ ಬೇಕಾ? ಮನೆಕೆಲಸಕ್ಕೆ ಜನ ಬೇಕಾ ಎಲ್ಲವೂ ಆನ್ ಲೈನಿನಲ್ಲಿ ಸಿಗುತ್ತದೆ. ಹಾಗೆಯೇ ಮನೆ ಕ್ಲೀನಿಂಗ್ ಮಾಡುವುದಕ್ಕೂ ಒಂದು ಅಪ್ಲಿಕೇಶನ್ ಇದೆ. ಅದುವೇ ಅರ್ಬನ್ ಕಂಪನಿ. ಈ app ಮೂಲಕ ಮನೆ ಕ್ಲೀನ್ ಮಾಡುವ ಆಯ್ಕೆಯನ್ನು ಆರಿಸಿಕೊಂಡರೆ ಜನ ಬಂದು ಮನೆಯನ್ನು ಚಕಾಚಕ್ ಆಗಿ ಕ್ಲೀನ್ ಮಾಡಿ ಹೋಗುತ್ತಾರೆ.
Urban Club ಮನೆ ಕ್ಲೀನ್ ಸರ್ವಿಸ್ :
ಈಗ ತುಂಬಾ ಮನೆಗಳಲ್ಲಿ ಕ್ಲೀನಿಂಗ್ ಸರ್ವಿಸ್ ಮೂಲಕವೇ ಮನೆ ಕ್ಲೀನ್ ಮಾಡುವುದೇ ಹೆಚ್ಚು. ಇವರು ಒಮ್ಮೆ ಬಂದರೆ ಮನೆಯನ್ನು ಹೊಸದರಂತೆ ಮಾಡಿ ಹೋಗ್ತಾರೆ. ಆದರೆ ಈ ಸಮಯದಲ್ಲಿ ಮನೆಯಲ್ಲಿರುವ ಯಾವುದಾದರೂ ಬೆಲೆಬಾಳುವ ವಸ್ತು ಕಾಣೆಯಾದರೆ ಅದಕ್ಕೆ ಯಾರು ಹೊಣೆ? ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಅರ್ಬನ್ ಕಂಪನಿಯ ಕ್ಲೀನಿಂಗ್ ಸರ್ವಿಸ್ ಬಗ್ಗೆ ಇದೇ ರೀತಿಯ ಆರೋಪ ಮಾಡಿದ್ದಾರೆ.

ಚಿನ್ನದ ಉಂಗುರ ಮಿಸ್ಸಿಂಗ್ :
ಮನೆಯನ್ನು ಕ್ಲೀನ್ ಮಾಡುವಾಗ ತನ್ನ ಪತ್ನಿಯ ಚಿನ್ನದ ಉಂಗುರ ಕಾಣೆಯಾಗಿದೆ ಎನ್ನುವುದು ಅವರ ಆರೋಪ. ಬಂಗಾರದ ಬೆಲೆ ಆಕಾಶದೆತ್ತರಕ್ಕೆ ಹೋಗುತ್ತಿರುವಾಗ ಮನೆಯಲ್ಲಿದ್ದ ಚಿನ್ನ ಇಲ್ಲ ಎಂದಾದರೆ ತಡೆದುಕೊಳ್ಳುವುದಾದರೂ ಹೇಗೆ? ಅದು ಬೇರೆ ಅವರ ಮದುವೆಯ ಉಂಗುರ. ಈ ಘಟನೆಯ ನಂತರ ಇದೀಗ ಕಂಪನಿಯ ಗ್ರಾಹಕ ಸೇವೆ ಮತ್ತು ಆನ್ ಲೈನ್ ಬುಕ್ಕಿಂಗ್ ಸೇವೆಯ ಬಗ್ಗೆ ಚರ್ಚೆ ಶುರುವಾಗಿದೆ.
ಅರ್ಬನ್ ಕಂಪನಿ ವಿರುದ್ದ ಆರೋಪ :
ಬೆಂಗಳೂರಿನ ಶುಭಂ ಮಜುಂದಾರ್ ಲಿಂಕ್ಡ್ ಇನ್ ನಲ್ಲಿ ತಮ್ಮ ಅನುಭವವನ್ನು ಶೇರ್ ಮಾಡಿದ್ದಾರೆ. ಅವರ ಪ್ರಕಾರ, ಅವರು ಅರ್ಬನ್ ಕಂಪನಿಯ ಇನ್ಸ್ಟಾಹೆಲ್ಪ್ ಸೇವೆಯಡಿ ಮನೆ ಕ್ಲೀನಿಂಗ್ ಗಾಗಿ ಗೋಲ್ಡ್ ಎಕ್ಸ್ಪರ್ಟ್ ಕ್ಯಾಟಗರಿಯನ್ನು ಬುಕ್ ಮಾಡಿದ್ದರು. ನಂತರ ಕಂಪನಿಯಿಂದ ಬಂದ ಜನ ಮನೆಯನ್ನು ಕ್ಲೀನ್ ಮಾಡಿದ್ದಾರೆ. ಇದೇ ಸಮಯದಲ್ಲಿ, ಅವರ ಹೆಂಡತಿಯ ಮದುವೆಯ ಉಂಗುರ ಮಿಸ್ ಆಗಿದೆ. ಮನೆಗೆ ಹೊರಗಿನಿಂದ ಬಂದವರೆಂದರೆ ಈ ಕ್ಲೀನಿಂಗ್ ಸರ್ವಿಸ್ ನವರು ಮಾತ್ರ. ಹಾಗಾಗಿ ಉಂಗುರ ಕಾಣೆಯಾಗಿರುವುದರ ಹಿಂದೆ ಅವರದ್ದೇ ಕೈಯಿದೆ ಎನ್ನುವುದು ಮನೆಯವ ವಾದ.
ಕಂಪನಿಯಿಂದ ಸಿಗಲಿಲ್ಲ ನೆರವು :
ಉಂಗುರ ಇಲ್ಲ ಎಂದು ಅವರು ಸುಮ್ಮನೆ ಕೂರಲಿಲ್ಲ. ತಕ್ಷಣ ಅಪ್ಲಿಕೇಶನ್ (application) ಮೂಲಕ ಉಂಗುರ ಕಣ್ಮರೆಯಾದ ಬಗ್ಗೆ ಕಂಪನಿಗೆ ಮಾಹಿತಿ ನೀಡಿದ್ದಾರೆ. ಕಂಪನಿಯ ಕಸ್ಟಮರ್ ಕೇರ್ ನವರು ಈ ಬಗ್ಗೆ ತನಿಖೆ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೆ ಇದಕ್ಕಾಗಿ ನಾಲ್ಕರಿಂದ ಐದು ದಿನಗಳ ಅವಕಾಶ ತೆಗೆದುಕೊಂಡಿದ್ದಾರೆ. ಆದರೆ ಇದರಿಂದ ಏನೂ ಪ್ರಯೋಜನವಾಗಿಲ್ಲ. ಕೂಡಲೇ ಮಜುಂದಾರ್ ಗ್ರಿವಾನ್ಸ್ ಆಫೀಸರ್ ಅನ್ನು ಸಂಪರ್ಕಿಸಿದ್ದಾರೆ. ಅಲ್ಲಿಂದಲೂ ನಿರೀಕ್ಷಿತ ಸಹಾಯ ಸಿಗಲಿಲ್ಲ. ಬದಲಿಗೆ ಪೊಲೀಸರಗೆ ದೂರು ನೀಡುವಂತೆ ಸೂಚಿಸಲಾಯಿತು. ಅಷ್ಟರಲ್ಲಾಗಲೇ ಮಜುಂದಾರ್ ಪೊಲೀಸರಿಗೆ ದೂರು ಕೊಟ್ಟಾಗಿತ್ತು.
100 ಕಿ.ಮೀ ದೂರದಲ್ಲಿಉಂಗುರ ಪತ್ತೆ :
ಈ ಇಡೀ ಪ್ರಕರಣದಲ್ಲಿ ಅತ್ಯಂತ ಆಶ್ಚರ್ಯಕರ ವಿಷಯ ಎಂದರೆ ಕಳೆದು ಹೋಗಿದ್ದ ಉಂಗುರ ಸಿಗುತ್ತದೆ. ಆದರೆ ಬೆಂಗಳೂರಿನಿಂದ ( bengaluru) 100 ಕಿ.ಮೀ ದೂರದಲ್ಲಿರುವ ಸ್ಥಳದಿಂದ ಈ ಉಂಗುರವನ್ನು ಪೊಲೀಸರು ವಶಪಡಿಸಿಕೊಳ್ಳುತ್ತಾರೆ. ಇದಕ್ಕಾಗಿ ಅಲ್ಲಿಗೆ ಹೋಗಲು ಪೊಲೀಸರು ಇಂಟರ್ಸಿಟಿ ಉಬರ್ ಕೂಡಾ ಬುಕ್ ಮಾಡಬೇಕಾಗಿತ್ತು.
ಕ್ಷಮೆ ಕೇಳಿದ ಅರ್ಬನ್ ಕಂಪನಿ :
ಇದೆಲ್ಲದರ ಮಧ್ಯೆ, ಕಂಪನಿ ತನ್ನ ಸರ್ವಿಸ್ ಹೇಗಿದೆ ಎಂದು ರೇಟ್ ಮಾಡುವುದಕ್ಕೆ ಹೇಳಿದೆ. ಈ ಮೆಸೇಜಿನ ಸ್ಕ್ರೀನ್ ಶಾಟನ್ನು ಕೂಡಾ ಮಜುಂದಾರ್ ಶೇರ್ ಮಾಡಿದ್ದಾರೆ. ಇದು ಅವರ ಕೋಪ ಮತ್ತೂ ನೆತ್ತಿಗೇರುವಂತೆ ಮಾಡಿದೆ. ಇಷ್ಟೆಲ್ಲಾ ಆದ ಮೇಲೆ ಅರ್ಬನ್ ಕಂಪನಿಯು ಸಾರ್ವಜನಿಕವಾಗಿ ಕ್ಷಮೆ ಕೇಳಿದೆ. ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಪ್ರೈವೇಟ್ ಮೆಸೇಜಿನಲ್ಲಿ ಶೇರ್ ಮಾಡುವಂತೆ ಹೇಳಿದೆ. ಇದರಿಂದ ಈ ವಿಷಯದ ಬಗ್ಗೆ ತನಿಖೆ ನಡೆಸಬಹುದು ಎಂದು ಹೇಳಿದೆ. ಇದಕ್ಕೆ ಉತ್ತರಿಸಿದ ಮಜುಂದಾರ್ ಅವರು ಈಗಾಗಲೇ ದೂರು ದಾಖಲಾಗಿರುವಾಗ ಮತ್ತೆ ಮಾಹಿತಿ ಏಕೆ ಪಡೆಯಲಾಗುತ್ತಿದೆ ಎಂದು ಪ್ರಶ್ನಿಸಿದರು.
ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ :
ಈ ಘಟನೆಯ ನಂತರ, ಕೆಲವರು ಕಂಪನಿಯ ಕಸ್ಟಮರ್ ಕೇರ್ ಸರ್ವಿಸನ್ನು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿಡುವಂತೆ ಗ್ರಾಹಕರಿಗೆ ಸಲಹೆ ನೀಡಿದ್ದಾರೆ. ಸದ್ಯಕ್ಕಂತೂ ಈ ವಿಷಯ ಎಲ್ಲಾ ಕಡೆ ಚರ್ಚೆ ಆಗುತ್ತಿದೆ.


Click it and Unblock the Notifications
