BLR Airport: ಟರ್ಮಿನಲ್-2 ನಲ್ಲಿ ಬೃಹತ್ ಆತ್ಯಾಕರ್ಷಕ 'ವರ್ಟಿಕಲ್ ಗಾರ್ಡನ್', ವಿಶೇಷತೆಗಳೇನು!
ಬೆಂಗಳೂರು, ನವೆಂಬರ್ 08: ಹತ್ತಾರು ವಿಶೇಷತೆಗಳಿಂದ ದೇಶದ ಜನರ ಗಮನ ಸೆಳೆದಿದ್ದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಮತ್ತೊಂದು ವಿಷಯಕ್ಕೆ ಸುದ್ದಿಯಾಗಿದೆ. ಈ ಟರ್ಮಿನಲ್ 2 ನಲ್ಲಿ 'ಟೈಗರ್ ವಿಂಗ್ಸ್' ಶೀರ್ಷಿಕೆಯ "ವರ್ಟಿಕಲ್ ಗಾರ್ಡನ್" ಅನ್ನು ಅನಾವರಣಗೊಳಿಸಲಾಗಿದೆ.
ದೇವನಹಳ್ಳಿಯ ಬೆಂಗಳೂರು ವಿಮಾನ ನಿಲ್ದಾಣ (BLR Airport) ಟರ್ಮಿನಲ್ 2 ನಲ್ಲಿ ಫ್ರೆಂಚ್ ದೇಶದ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಕೇಂದ್ರದೊಂದಿಗೆ ಗುರುತಿಸಿಕೊಂಡಿರುವ ವಿಶ್ವದರ್ಜೆಯ ಸಸ್ಯಶಾಸ್ತ್ರಜ್ಞ ಪ್ಯಾಟ್ರಿಕ್ ಬ್ಲಾಂಕ್ ಅವರ ಸಹಕಾರದಲ್ಲಿ ಇದನ್ನು ಅತ್ಯಂತ ಸುಂದರವಾಗಿ ವರ್ಟಿಕಲ್ ಗಾರ್ಡನ್ ವಿನ್ಯಾಸಗೊಳಿಸಿ ಲೋಕಾರ್ಪಣೆಗೊಳಿಸಲಾಗಿದೆ.

ದೇಶದ ಮೊದಲ ವರ್ಟಿಕಲ್ ಗಾರ್ಡ್ ವಿಶೇಷತೆಗಳೇನು?
ಪ್ಯಾಟ್ರಿಕ್ ಬ್ಲಾಂಕ್ ಅವರು ಭಾರತದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ವರ್ಟಿಕಲ್ ಗಾರ್ಡನ್ ನಿರ್ಮಿಸಿದ್ದು ಇದೇ ಮೊದಲು ಎಂದು ಸ್ವತಃ ಅವರೇ ಹೇಳಿದ್ದಾರೆ. ಅದು ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ ನಿರ್ಮಿಸಿರುವುದು ಇನ್ನೊಂದು ವಿಶೇಷ. ಟರ್ಮಿನಲ್ 2 (T2) ನಲ್ಲಿ ನಿರ್ಮಿಸಿರುವ ಈ ವರ್ಟಿಕಲ್ ಗಾರ್ಡನ್ 30 ಅಡಿ ಎತ್ತರ ಹಾಗೂ 160 ಅಡಿ ಅಗಲದ 2 ಗೋಡೆಗಳಿವೆ. (ಪ್ರತಿ ಗೊಡೆ 80 ಅಡಿ ಅಗಲವಿದೆ) ಅದರಲ್ಲಿ ವರ್ಟಿಕಲ್ ಗಾರ್ಡನ್ ವಿನ್ಯಾಸ ಮಾಡಲಾಗಿದೆ.
ಮೂಲಭೂತ ಸೌಕರ್ಯಗಳೊಂದಿಗೆ ಪ್ರಕೃತಿಯನ್ನು ಸೆರೆ ಹಿಡಿದಂತ ಸುಂದರ ದೃಶ್ಯಾವಳಿಂದ ಈ ಗೋಡೆ ಉದ್ಯಾನ ಕಂಗೊಳಿಸಲಿದೆ. ಈ ಮೂಲಕ ಟರ್ಮಿನಲ್ 2 ಮತ್ತಷ್ಟು ಆಕರ್ಷಕಗೊಂಡಿದೆ.
153 ವಿವಿಧ ಜಾತಿಗಳ ಸಸ್ಯಗಳು
'ಟೈಗರ್ ವಿಂಗ್ಸ್' ನ ಈ ವರ್ಟಿಕಲ್ ಗಾರ್ಡನ್ ನಲ್ಲಿ ಒಟ್ಟು ಬರೋಬ್ಬರಿ 153 ವಿವಿಧ ಜಾತಿಗಳ ಸಸ್ಯಗಳನ್ನು ಕಾಣಬಹುದು. ಒಟ್ಟಾರೆ ಇಲ್ಲಿ 15,000 ಕ್ಕೂ ಹೆಚ್ಚು ಸಸ್ಯಗಳನ್ನು ನಿರ್ಮಿಸಲಾಗಿದೆ. ಪ್ಯಾಟ್ರಿಕ್ ಬ್ಲಾಂಕ್ ಅವರು ಕರ್ನಾಟಕ ಸೇರಿದಂತೆ ಸುತ್ತಮುತ್ತಲಿನ ಪಶ್ಚಿಮ ಘಟ್ಟಗಳ ಕಾಡುಗಳಿಗೆ ತೆರಳಿ, ಅಪರೂಪದ ಆಯ್ದ ಸಸ್ಯ ಪ್ರಭೇದಗಳನ್ನು ಸಂಗ್ರಹಿಸಸಿ, ಈ ಗೋಡೆ ಉದ್ಯಾನ ನಿರ್ಮಿಸಿದ್ದಾರೆ.

ಮಣ್ಣಿಲ್ಲದೇ ಉದ್ಯಾನ ನಿರ್ಮಾಣ
ಅಚ್ಚರಿ ಅನ್ನಿಸಿದರೂ ಇದು ಸತ್ಯ. ಇವರು ಒಂದೇ ಒಂದು ಹಿಡಿ ಮಣ್ಣು ಇಲ್ಲದೇ ಉದ್ಯಾನವನ್ನು ನಿರ್ಮಿಸಿದ್ದಾರೆ. ಅದಕ್ಕಾಗಿಯೇ ಅವರು ಜರ್ಮನಿಯಿಂದ ಹೊಸ ತಂತ್ರಜ್ಞಾನ (ಟೆಕ್ನಾಲಜಿ) ಆಮದು ಮಾಡಿಕೊಂಡಿದ್ದಾರೆ. ಮತ್ತೊಂದು ವಿಶೇಷವೆಂದರೆ, ನಮ್ಮ 'ರಾಷ್ಟ್ರೀಯ ಪ್ರಾಣಿ ಹುಲಿಯ ಶಕ್ತಿ ಮತ್ತು ಅದರ ಗಾಂಭೀರ್ಯತೆ' ಪ್ರತಿಬಿಂಬಿಸುವಂತೆ ಈ ಗೋಡೆ ಉದ್ಯಾನ ಇದಾಗಿದೆ. ಈ ಕಾರಣದಿಂದಲೇ ಇದಕ್ಕೆ 'ಟೈಗರ್ ವಿಂಗ್ಸ್' ಎಂದು ಹೆಸರಿಡಲಾಗಿದೆ.
'ಟೈಗರ್ ವಿಂಗ್ಸ್' ಸಂಕ್ಷಿಪ್ತ ಮಾಹಿತಿ ಇಲ್ಲಿದೆ
* ಭಾರತದಲ್ಲಿ ಪ್ಯಾಟ್ರಿಕ್ ಬ್ಲಾಂಕ್ ಅವರ ಅತಿದೊಡ್ಡ ಗೋಡೆ ಉದ್ಯಾನ ಇದೇ ಪ್ರಥಮ
* 4000 ಚದರ ಅಡಿಗಳಲ್ಲಿ ನಿರ್ಮಾಣ.
* 15000 ಸಸ್ಯಗಳಿಂದ ನಿರ್ಮಾಣ
* 150ಕ್ಕೂ ಹೆಚ್ಚು ಜಾತಿ ಸಸ್ಯಗಳು ಇವೆ
* ವಿದೇಶಿ ತಂತ್ರಜ್ಞಾನ ಬಳಕೆ
ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್ ಮಾತನಾಡಿ, "ಬೆಂಗಳೂರಿನಲ್ಲಿ ಸುಸ್ಥಿರತೆ, ಕಲಾತ್ಮಕತೆ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಹೊಸ ದೃಷ್ಟಿಕೋನವನ್ನು ತರಲು ಬಯಸಿದ್ದೇವೆ. ಬಿಎಲ್‌ಆರ್ ವಿಮಾನ ನಿಲ್ದಾಣದಲ್ಲಿ ಪ್ಯಾಟ್ರಿಕ್‌ನ ಅವರ ಹೊಸ ವಿಧಾನದಿಂದ ಪ್ರಕೃತಿಯ ಮಡಿಲಿನಲ್ಲಿ ಸಸ್ಯಗಳನ್ನು ಬೆಳೆಯುವಂತೆಯೇ ಬೆಳೆಯಲು ಅನುವು ಮಾಡಿಕೊಟ್ಟಿದೆ ಎಂದರು.
ಟರ್ಮಿನಲ್ 2 ನಾಲ್ಕು ಮೂಲ ತತ್ವಗಳಿಂದ ನಿರ್ಮಿಸಲ್ಪಟ್ಟಿದೆ, ಉದ್ಯಾನವದಲ್ಲಿ ಟರ್ಮಿನಲ್, ತಂತ್ರಜ್ಞಾನ, ಕಲೆ ಮತ್ತು ಸುಸ್ಥಿರತೆ ಈ ನಾಲ್ಕು ತತ್ವಗಳ ಮೂಲಕ ಬೆಂಗಳೂರಿನ ನೈಜ ಸೌಂದರ್ಯ ಪ್ರತಿಬಿಂಬಕವಾಗಿದೆ ಎಂದು ಅವರು ಹೇಳಿದರು.
ಹೆಸರಾಂತ ಸಸ್ಯಶಾಸ್ತ್ರಜ್ಞ ಪ್ಯಾಟ್ರಿಕ್ ಬ್ಲಾಂಕ್ ಮಾತನಾಡಿ, "ಟೈಗರ್ ವಿಂಗ್ಸ್" ಪ್ರಕೃತಿ ಮತ್ತು ವಾಸ್ತುಶಿಲ್ಪದ ನಡುವಿನ ಅತ್ಯುತ್ತಮ ಸಂಬಂಧ ಸಾಕಾರಗೊಂಡಿದೆ. ವಿಶೇಷವಾದ ಭಾವನೆಯನ್ನು ಬಳಸಿಕೊಳ್ಳುವ ಮೂಲಕ, ಪ್ರಕೃತಿಯ ಮಡಿಲಿನಲ್ಲಿ ಸಸ್ಯಗಳು ಬೆಳೆಯುವ ವಾತಾವರಣ ನಿರ್ಮಿಸಲಾಗಿದೆ. ಈ ಯೋಜನೆಯು ಕೇವಲ ವಿಮಾನ ನಿಲ್ದಾಣದ ದೃಶ್ಯವನ್ನು ಇನ್ನಷ್ಟು ವರ್ಧಿಸುತ್ತದೆ. ಅಷ್ಟೇ ಅಲ್ಲದೆ, ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಅನುಭವವನ್ನು ಇನ್ನಷ್ಟು ಉಲ್ಲಾಸಗೊಳಿಸಲಿದೆ ಎಂದು ಅವರು ತಿಳಿಸಿದರು.












Click it and Unblock the Notifications