ಕಾಂಗ್ರೆಸ್ ಕಾರ್ಪೋರೇಟರ್ ವಿಚಾರಣೆ ಬಗ್ಗೆ ಸಚಿವ ಡಾ.ಸುಧಾಕರ್ ಟ್ವೀಟ್
ಬೆಂಗಳೂರು, ಆಗಸ್ಟ್.18: ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಮತ್ತು ದೇವರ ಜೀವನಹಳ್ಳಿ(ಡಿ.ಜೆ.ಹಳ್ಳಿ)ಯಲ್ಲಿ ನಡೆದ ದಾಂಧಲೆ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿ ನಾಯಕರು ಮತ್ತು ಸಚಿವರು ಮೇಲಿಂದ ಮೇಲೆ ಆರೋಪಿಸುತ್ತಿದ್ದಾರೆ.
Recommended Video
ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಮಂಗಳವಾರ ಬಿಬಿಎಂಪಿಯ ಕಾಂಗ್ರೆಸ್ ಕಾರ್ಪೋರೇಟರ್ ಸಂಪತ್ ರಾಜ್ ಮತ್ತು ಜಾಕೀರ್ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದರು.
ಕಾಂಗ್ರೆಸ್ ಕಾರ್ಪೋರೇಟರ್ ಗಳ ವಿಚಾರಣೆ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡಿದ್ದಾರೆ. "ತನುವಿನ ಕೋಪ ತನ್ನ ಹಿರಿಯತನದ ಕೇಡು, ಮನದ ಕೋಪ ತನ್ನ ಅರಿವಿನ ಕೇಡು, ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು ಕೂಡಲಸಂಗಮದೇವಾ". ಬೆಂಗಳೂರು ಗಲಭೆ ಕಾರಣ ಯಾರು? ಎಂಬ ಸತ್ಯದ ಹೊರ ಬರುತ್ತಿದೆ. ಕಾಂಗ್ರೆಸ್ ಕಾರ್ಪೋರೇಟರ್ ಗಳಾದ ಸಂಪತ್‌ರಾಜ್, ಜಾಕೀರ್ ಅವರು ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ" ಎಂದು ಸಚಿವ ಡಾ. ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಅಖಂಡ ಶ್ರೀನಿವಾಸಮೂರ್ತಿಯವರಿಗೆ ನ್ಯಾಯ ಸಿಗುವುದೇ:
"ಕನಿಷ್ಠಪಕ್ಷ ಸತ್ಯಗಳನ್ನು ಗಟ್ಟಿಯಾಗಿ ಹೇಳುವ ಧೈರ್ಯ ಇಲ್ಲದ ಕಾಂಗ್ರೆಸ್ ನಾಯಕರಿಗೆ ಅದೇ ಪಕ್ಷದ ದಲಿತ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರಿಗೆ ಕಾಂಗ್ರೆಸ್ ನಾಯಕರಿಂದ ನ್ಯಾಯ ಸಿಗಲು ಸಾಧ್ಯವೇ? ಈ ಜಗತ್ತಿನಲ್ಲಿ ಚಿರಕಾಲ ಉಳಿಯುವಂಥದ್ದು ನಯ-ವಿನಯವೇ ಹೊರತು ಮೃಗೀಯತೆಯೂ ಅಲ್ಲ ದೇಹಬಲವೂ ಅಲ್ಲ. ಸತ್ಯಕ್ಕೆ ಸಾವಿಲ್ಲ" ಎಂದು ಸಚಿವ ಡಾ.ಕೆ.ಸುಧಾಕರ್ ಕಾಂಗ್ರೆಸ್ ನಾಯಕರನ್ನು ಟ್ವಿಟರ್ ನಲ್ಲಿ ತಿವಿದಿದ್ದಾರೆ.
ಕಳೆದ ಆಗಸ್ಟ್.11ರ ತಡರಾತ್ರಿ ಕಾವಲ್ ಬೈರಸಂದ್ರದಲ್ಲಿರುವ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಿವಾಸದ ಮೇಲೆ ದಾಳಿ ನಡೆಸಿದ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿತ್ತು. ಮನೆ ಎದುರಿನ ವಾಹನಗಳಿಗೆ ಬೆಂಕಿ ಹಚ್ಚಿತ್ತು. ಈ ವೇಳೆ ಸುತ್ತಮುತ್ತಲಿನ ಮನೆಗಳ ಮೇಲೂ ಕಲ್ಲು, ದೊಣ್ಣೆಗಳಿಂದ ದಾಳಿ ನಡೆಸಿ ಒಡೆದು ಹಾಕಿತ್ತು. ಮನೆಯಲ್ಲಿದ್ದ ಚಿನ್ನ-ಬೆಳ್ಳಿ ಸೇರಿದಂತೆ ಮೌಲ್ಯಯುತ ವಸ್ತುಗಳನ್ನು ಕದ್ದು ತೆಗೆದುಕೊಂಡು ಹೋಗಿರುವ ಬಗ್ಗೆಯೂ ಆರೋಪ ಮಾಡಲಾಗಿತ್ತು.












Click it and Unblock the Notifications