ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿವಿಯಲ್ಲಿ ನಕಲಿ ಅಂಕಪಟ್ಟಿ ಜಾಲ

|
Google Oneindia Kannada News

ಬೆಂಗಳೂರು, ಏ. 22 : ಸದಾ ವಿವಾದಗಳಿಂದ ಸುದ್ದಿಯಾಗುವ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸದ್ಯ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಅಂಕಪಟ್ಟಿ ತಿದ್ದುತ್ತಿದ್ದ ದೊಡ್ಡ ಜಾಲವೊಂದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಸೋಮವಾರ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಅಂಕಪಟ್ಟಿ ತಿದ್ದುಪಡಿ ಮಾಡುತ್ತಿದ್ದ ಆರೋಪದ ಮೇಲೆ ವಿವಿಯ ಮೌಲ್ಯಮಾಪನ ವಿಭಾಗದ ಸಿಬ್ಬಂದಿ ಬಸವರಾಜು, ಗಂಗಾಧರಯ್ಯ ಹಾಗೂ ಮಧ್ಯವರ್ತಿ ಚಂದ್ರಶೇಖರ್ ಎಂಬುವರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

Bangalore University

ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂಬ ಶಂಕೆಯ ಮೇಲೆ ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಮತ್ತು ಕೆಜೆಪಿ ಮುಖಂಡ ಡಾ.ಕೆ.ಬಿ. ವೇದಮೂರ್ತಿ ಹಾಗೂ ಉಪನ್ಯಾಸಕ ಡಾ.ಕೊಟ್ರಯ್ಯ ಅವರನ್ನು ಸೋಮವಾರ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಕೊಟ್ರಯ್ಯ ಅವರನ್ನು ವಿಚಾರಣೆ ನಂತರ ಬಿಡುಗಡೆ ಮಾಡಿದ್ದರೆ, ವೇದಮೂರ್ತಿ ಅವರ ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ. [ಬೆಂ.ವಿವಿಯಲ್ಲಿ 4 ವರ್ಷದ ಪದವಿ ಕೋರ್ಸ್]

ಮೌಖಿಕ ದೂರು : ಅಂಕಪಟ್ಟಿ ತಿದ್ದುವ ಹಗರಣದಲ್ಲಿ ಹಲವಾರು ಸಿಬ್ಬಂದಿಗಳು ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಪದವಿ ಪರೀಕ್ಷೆಗೂ ಮುನ್ನ, ವಿದ್ಯಾರ್ಥಿಗಳಿಂದ ಪಾಸು ಮಾಡಿಸಿ ಕೊಡುವುದಾಗಿ ಮಧ್ಯವರ್ತಿಗಳು ಹಣ ಸಂಗ್ರಹಿಸಿರಬಹುದು ಎಂಬ ಮಾಹಿತಿಯೂ ಲಭ್ಯವಾಗಿದೆ. ವಿವಿ ಆಡಳಿತ ಮಂಡಳಿ ಈ ಕುರಿತು ಪೊಲೀಸರಿಗೆ ಮೌಖಿಕ ದೂರು ನೀಡಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ಸೋಮವಾರ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಸ್ವಯಂ ಪ್ರೇರಿತ ದೂರು : ಬೆಂಗಳೂರು ವಿವಿ ನೀಡಿದ ಮೌಖಿಕ ದೂರಿನ ಅನ್ವಯ ಹಲಸೂರು ಗೇಟ್ ಪೊಲೀಸರು, ಅಂಕಪಟ್ಟಿ ತಿದ್ದುಪಡಿ ಬಗ್ಗೆ ಏ.12 ರಂದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. 10 ದಿನಗಳ ಹಿಂದೆ ಬಸವರಾಜು, ಗಂಗಾಧರಯ್ಯ ಹಾಗೂ ಮಧ್ಯವರ್ತಿ ಅವರನ್ನು ಬಂಧಿಸಿ ವಿಚಾರಣೆಗೆ ನಡೆಸಿದ್ದರು ಎಂಬ ಅಂಶ ಸಹ ಬೆಳಕಿಗೆ ಬಂದಿದೆ.

ಇವರು ನೀಡಿದ ಮಾಹಿತಿ ಅನ್ವಯ ಸೋಮವಾರ ಪೊಲೀಸರು ವೇದಮೂರ್ತಿ ಮತ್ತು ಉಪನ್ಯಾಸಕ ಡಾ.ಕೊಟ್ರಯ್ಯ ಅವರನ್ನು ವಶಕ್ಕೆ ಪಡೆದು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ತನಿಖೆ ನಡೆಯುತ್ತಿರುವುದರಿಂದ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. [ಬೆಂಕಿ, ಗಾಳಿ, ಜಲ ರಕ್ಷಿತ ಅಂಕ ಪಟ್ಟಿ ಬೇಕೇ?]

ಕುಲಪತಿ ಹೇಳುವುದೇನು : ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ವಿವಿ ಕುಲಪತಿ ಪ್ರೊ.ಬಿ.ತಿಮ್ಮೇಗೌಡ, ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಅಂಕಪಟ್ಟಿ ತಿದ್ದುಪಡಿ ವಿಚಾರದ ಕುರಿತು ಆಂತರಿಕ ತನಿಖೆ ನಡೆಸಲು ಪ್ರತ್ಯೇಕ ಸಮಿತಿ ರಚಿಸಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು. ಏ.25 ರಂದು ನಡೆಯಲಿರುವ ಸಿಂಡಿಕೇಟ್ ಸಭೆಯಲ್ಲಿ ವಿಷಯದ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.

English summary
The Ulsoor Gate police have arrested two persons and are questioning a former syndicate member of Bangalore University for allegedly running a cash-for-marks scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X