ಸಿದ್ದರಾಮಯ್ಯ ನಕಲಿ ಸಹಿ ಮೂಲಕ 200 ಕೋಟಿ ಬಿಡುಗಡೆಗೆ ಪತ್ರ!
Recommended Video

ಬೆಂಗಳೂರು, ಜನವರಿ 27 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿ ಫೊರ್ಜರಿ ಮಾಡಿ 200 ಕೋಟಿ ರೂ. ಬಿಡಗಡೆ ಮಾಡಲು ಪತ್ರ ಬರೆದಿದ್ದವರು ಪೊಲೀಸರ ಅತಿಥಿಗಳಾಗಿದ್ದಾರೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಬಂಧಿತರನ್ನು ಗುರುನಾಥ್ ಮತ್ತು ಸಿದ್ದಾರೂಢ ಎಂದು ಗುರುತಿಸಲಾಗಿದೆ. ಗುರುನಾಥ್ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಸಿದ್ದಾರೂಢ ತಿಮ್ಮಾಪುರ ಗ್ರಾಮದ ಕುರುಬ ಸಮಾಜದ ಮುಖಂಡ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಈ ಇಬ್ಬರು ಆರೋಪಿಗಳು ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯಲ್ಲಿ ಕುರುಬ ಸಮುದಾಯದ ಸಮುದಾಯ ಭವನ ನಿರ್ಮಾಣ ಮಾಡಲು 200 ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದ್ದರು.

ಪತ್ರದ ಬಗ್ಗೆ ಅನುಮಾನಗೊಂಡ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಸಿದ್ದರೂಢ 2016ರಲ್ಲಿಯೇ ಭವನ ನಿರ್ಮಾಣಕ್ಕೆ ಅನುದಾನ ನೀಡಲು ಮನವಿ ಮಾಡಿದ್ದ ಎಂಬುದನ್ನು ಪತ್ತೆ ಹಚ್ಚಿದ್ದರು.
ಸದಾ ವಿಧಾನಸೌಧಕ್ಕೆ ಭೇಟಿ ನೀಡಿ ಈ ಬಗ್ಗೆ ವಿಚಾರಿಸುತ್ತಿದ್ದನು. ಅನುದಾನ ಬಿಡುಗಡೆಯಾಗದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಹೆಸರಿನಲ್ಲಿ ನಕಲಿ ಪತ್ರ ಬರೆದು, ಫೊರ್ಜರಿ ಸಹಿ ಮಾಡಿ ನೀಡಿದ್ದರು. ಮೊದಲು ಪೊಲೀಸರು 50 ಜನರ ವಿಚಾರಣೆ ನಡೆಸಿ ಅಂತಿಮವಾಗಿ ಇಬ್ಬರನ್ನು ಬಂಧಿಸಿದ್ದಾರೆ.
ಮೊದಲು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಕಬ್ಬನ್ ಪಾರ್ಕ್ ಠಾಣೆಗೆ ಪ್ರಕರಣವನ್ನು ವರ್ಗಾವಣೆ ಮಾಡಲಾಯಿತು. ಈಗ ಇಬ್ಬರು ಆರೋಪಿಗಳು ಪೊಲೀಸ್ ವಶದಲ್ಲಿದ್ದು, ತನಿಖೆ ಮುಂದುವರೆದಿದೆ.












Click it and Unblock the Notifications