ನ.7ರಂದು ರಾಜ್ಯದ 550ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪುನೀತ್ ಶ್ರದ್ಧಾಂಜಲಿ ಕಾರ್ಯಕ್ರಮ
ಬೆಂಗಳೂರು, ನವೆಂಬರ್ 6: ಕನ್ನಡ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನದಿಂದ ಇಡೀ ಭಾರತ ಚಿತ್ರರಂಗ ಕಂಬನಿ ಮಿಡಿದಿತ್ತು. ಚಿತ್ರರಂಗದ ವತಿಯಿಂದ ಪುನೀತ್ ರಾಜ್‌ಕುಮಾರ್‌ಗೆ ನಮನ ಸಲ್ಲಿಸುವ ಹಲವು ಕಾರ್ಯಕ್ರಮಗಳೂ ನಡೆದಿವೆ.
ಇದೇ ಮಾದರಿಯಲ್ಲಿ ಸ್ಯಾಂಡಲ್‌ವುಡ್ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಲು ಚಿತ್ರ ಪ್ರದರ್ಶಕರ ವಲಯ ಸಿದ್ಧತೆ ನಡೆಸಿದೆ. ಈ ಬಗ್ಗೆ ಮಾತನಾಡಿರುವ ಪ್ರದರ್ಶಕರ ವಲಯದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್, ಪುನೀತ್‌ಗೆ ರಾಜ್ಯದ 550ಕ್ಕೂ ಅಧಿಕ ಚಿತ್ರಮಂದಿರಗಳು ನಮನ ಸಲ್ಲಿಸಲಿವೆ. ನಾಳೆ (ನವೆಂಬರ್ 7) ಸಂಜೆ 6ಕ್ಕೆ ರಾಜ್ಯದ ಚಿತ್ರಮಂದಿರಗಳಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಗೀತಾಂಜಲಿ, ಪುಷ್ಪಾಂಜಲಿ, ದೀಪಾಂಜಲಿ ಮೂಲಕ ಚಿತ್ರ ಪ್ರದರ್ಶಕರಿಂದ ಪುನೀತ್‌ಗೆ ನಮನ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ರಚಿಸಿದ ಹಾಡಿನ ಮೂಲಕ ಗೀತಾಂಜಲಿ, ನಟ ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಹಾಗೂ ಚಿತ್ರಮಂದಿರಗಳಲ್ಲಿ ಮೊಂಬತ್ತಿ ಹಚ್ಚಿ ಪುನೀತ್‌ಗೆ ದೀಪಾಂಜಲಿ ನಡೆಸಲಾಗುವುದು. ನಂತರ ಮೌನಾಚರಣೆ ಮೂಲಕ ಪುನೀತ್ ರಾಜ್‌ಕುಮಾರ್‌ಗೆ ನಮನ ಸಲ್ಲಿಸಲಾಗುವುದು. ಈ ಮೂಲಕ ಥಿಯೇಟರ್ ಸಿಬ್ಬಂದಿ, ಅಭಿಮಾನಿಗಳು ನೆಚ್ಚಿನ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನವೆಂಬರ್ 16ರಂದು ಪುನೀತ ನಮನ ಕಾರ್ಯಕ್ರಮ
ಇದೇ ನವೆಂಬರ್ 16ರಂದು ನಡೆಯುವ 'ಪುನೀತ ನಮನ' ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಲಾಗುತ್ತಿದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಾ. ರಾಜಕುಮಾರ್ ಕುಟುಂಬದ ಜತೆ ಚರ್ಚೆ ಮಾಡಿ ಕಾರ್ಯಕ್ರಮ ಮಾಡಲಾಗುತ್ತಿದ್ದು, ಚಿತ್ರೋದ್ಯಮದ ಗಣ್ಯರು, ಕಲಾವಿದರು ಭಾಗಿಯಾಗಲಿದ್ದಾರೆ ಎಂದರು.
ನ.16ರ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ವಿ.ನಾಗೇಂದ್ರ ಪ್ರಸಾದ್‌ರಿಂದ 5 ನಿಮಿಷದ ಹಾಡು ತಯಾರಾಗಲಿದ್ದು, ಪುನೀತ್ ನಡೆದು ಬಂದ ಹಾದಿಯ ಚಿತ್ರಣ ಇರುತ್ತದೆ. 2000 ಜನರು ಕ್ಯಾಂಡಲ್ ಹಚ್ಚಿ ಶ್ರದ್ಧಾಂಜಲಿ ಕೋರಲು ಯೋಜಿಸಲಾಗಿದೆ ಎಂದು ಜಯರಾಜ್ ಹೇಳಿದ್ದಾರೆ.
ಪುನೀತ ನಮನ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಖ್ಯಾತನಾಮರು ಭಾಗಿಯಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ. ''ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ- ನಟಿಯರು ಆಗಮಿಸಲಿದ್ದಾರೆ. ಕಮಲ್ ಹಾಸನ್, ಧನುಷ್ ಸೇರಿ ಹಲವರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು. ಮಧ್ಯಾಹ್ನ 3 ಘಂಟೆಯಿಂದ ಕಾರ್ಯಕ್ರಮ ಆರಂಭ ಆಗಲಿದ್ದು, ಸ್ಯಾಕ್ಸೋಪೋನ್ ಮೂಲಕ ಕಾರ್ಯಕ್ರಮ ಆರಂಭ ಆಗುತ್ತದೆ ಎಂದು ಜಯರಾಜ್ ಮಾಹಿತಿ ನೀಡಿದ್ದಾರೆ.

11ನೇ ದಿನದ ಕಾರ್ಯ; ಪುನೀತ್ ನಿವಾಸದಲ್ಲಿ ಕುಟುಂಬಸ್ಥರಿಂದ ಚರ್ಚೆ
ನ.8ರ ಸೋಮವಾರ ನಟ ಪುನೀತ್ ರಾಜ್‌ಕುಮಾರ್‌ರವರ 11ನೇ ದಿನ ಕಾರ್ಯ ಹಿನ್ನಲೆಯಲ್ಲಿ ಅದರ ತಯಾರಿಯ ಕುರಿತು ಪುನೀತ್ ನಿವಾಸದಲ್ಲಿ ಶಿವರಾಜ್‌ಕುಮಾರ್, ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ಕುಟುಂಬಸ್ಥರು ಚರ್ಚೆ ನಡೆಸಿದ್ದಾರೆ.
ಕಾರ್ಯಕ್ರಮಕ್ಕೆ ಗಣ್ಯರ ಆಹ್ವಾನ ಕುರಿತು ಚರ್ಚೆ ನಡೆಸಲಾಗಿದ್ದು, 2 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸುವ ಸಾಧ್ಯತೆ ಇದೆ. ರಾಜಕೀಯ ಗಣ್ಯರು, ಪ್ರಮುಖ ನಟರು, ಆತ್ಮೀಯರು ಹಾಗೂ ಹತ್ತಿರದ ಸಂಬಂಧಿಗಳಿಗೆ ಮಾತ್ರ ಆಹ್ವಾನ ನೀಡುವ ಸಾಧ್ಯತೆ ಇದೆ. ಹೀಗಾಗಿ ಕಾರ್ಯದ ತಯಾರಿ ಬಗ್ಗೆ ಕುಟುಂಬದವರ ಜೊತೆ ಶಿವರಾಜ್ ಕುಮಾರ್ ಚರ್ಚೆ ನಡೆಸಿದ್ದಾರೆ.
ಇದರೊಂದಿಗೆ ಬಿಗಿ ಬಂದೋಬಸ್ತ್, ಸಂಚಾರ ವ್ಯವಸ್ಥೆ ಬಗ್ಗೆ ಪೊಲೀಸರಿಂದ ಸಿದ್ಧತೆ ನಡೆಸಲಾಗುತ್ತಿದ್ದು, ವಾಹನಗಳ ಎಂಟ್ರಿ ಹಾಗೂ ಎಕ್ಸಿಟ್‌ಗೆ ಬ್ಯಾರಿಕೇಡ್ ಹಾಕುವ ಬಗ್ಗೆ ತಯಾರಿ ಮಾಡಲಾಗುತ್ತಿದ್ದು, ಸದಾಶಿವ ನಗರ ಸಂಚಾರಿ ಪೊಲೀಸರಿಂದ ಸಿದ್ಧತೆ ನಡೆಯುತ್ತಿದೆ.