ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು; ವೇಳಾಪಟ್ಟಿ
ಬೆಂಗಳೂರು, ಜುಲೈ 24; ಶಿರಾಡಿ ಘಾಟ್ ಬಂದ್ ಆದ ಬಳಿಕ ಬೆಂಗಳೂರು-ಮಂಗಳೂರು ನಡುವಿನ ಪ್ರಯಾಣಕ್ಕೆ ತೊಂದರೆ ಉಂಟಾಗಿದೆ. ಈ ಹಿನ್ನಲೆಯಲ್ಲಿ ಉಭಯ ನಗರಗಳ ನಡುವೆ ಹೆಚ್ಚುವರಿ ರೈಲನ್ನು ಓಡಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದರು.
ರೈಲ್ವೆ ಇಲಾಖೆ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಜುಲೈ 26 ರಿಂದ ಆಗಸ್ಟ್ 30ರ ತನಕ ವಾರದಲ್ಲಿ ಮೂರು ದಿನ ವಿಶೇಷ ರೈಲುಗಳು ಸಂಚಾರ ನಡೆಸಲಿವೆ. ಇದರಿಂದಾಗಿ ಕರಾವಳಿ-ಬೆಂಗಳೂರು ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮತ್ತು ಮಂಗಳೂರು ಸೆಂಟ್ರಲ್ ವಿಮಾನ ನಿಲ್ದಾಣಗಳ ನಡುವೆ ಈ ವಿಶೇಷ ರೈಲು ಸಂಚಾರ ನಡೆಸಲಿದೆ. ಸುಮಾರು ಒಂದು ತಿಂಗಳ ಕಾಲ ರೈಲು ಸಂಚಾರ ನಡೆಸಲಿದ್ದು, ಬಳಿಕ ಅದನ್ನು ಮುಂದುವರೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.

ವೇಳಾಪಟ್ಟಿ; ಬೆಂಗಳೂರು-ಮಂಗಳೂರು ನಡುವೆ 06547/ 06548 ಸಂಖ್ಯೆಯ ರೈಲುಗಳು ಸಂಚಾರ ನಡೆಸಲಿವೆ. ವಾರದಲ್ಲಿ ಮೂರು ದಿನಗಳ ಕಾಲ ಈ ವಿಶೇಷ ರೈಲುಗಳು ಸಂಚಾರ ನಡೆಸಲಿವೆ ಎಂದು ರೈಲ್ವೆ ಇಲಾಖೆ ಹೇಳಿದೆ.
ರೈಲು ಸಂಖ್ಯೆ 06547 ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಭಾನುವಾರ, ಮಂಗಳವಾರ ಮತ್ತು ಗುರುವಾರ ಸಂಚಾರ ನಡೆಸಲಿದೆ.
ಮಂಗಳೂರು ಜಂಕ್ಷನ್‌ನಿಂದ ಸೋಮವಾರ, ಬುಧವಾರ ಮತ್ತು ಶುಕ್ರವಾರ 06548 ಸಂಖ್ಯೆಯ ರೈಲು ಸಂಚಾರ ನಡೆಸಲಿದೆ.
ಸಂಸದರು ಮನವಿ ಮಾಡಿದ್ದರು; ಕಳೆದ ವಾರ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ, ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ರೈಲುಗಳನ್ನು ಓಡಿಸಬೇಕು ಎಂದು ಮನವಿ ಮಾಡಿದ್ದರು.
ಸಂಸದರು ನೀಡಿದ ಮನವಿಗೆ ರೈಲ್ವೆ ಸಚಿವರು ಸ್ಪಂದಿಸಿದ್ದರು. "ನನ್ನ ಮನವಿಗೆ ಸ್ಪಂದಿಸಿದ ರೈಲ್ವೆ ಸಚಿವರು, ಈ ಕುರಿತು ಕ್ರಮ ಕೈಗೊಳ್ಳುತ್ತೇವೆ" ಎಂದು ಭರವಸೆ ನೀಡಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದರು.
ಭಾರೀ ಮಳೆಯ ಕಾರಣ ದೋಣಿಗಲ್‌ನಲ್ಲಿ ಭೂ ಕುಸಿತ ಉಂಟಾಗಿತ್ತು. ಆದ್ದರಿಂದ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ಸಂಪಾಜೆ ಮತ್ತು ಚಾರ್ಮಾಡಿ ಘಾಟ್‌ಗಳ ಮೇಲೆ ಒತ್ತಡ ಹೆಚ್ಚಾಗಿದೆ.
ಶಿರಾಡಿ ಘಾಟ್ ಮಂಗಳೂರು-ಬೆಂಗಳೂರು ಸಂಪರ್ಕಿಸುವ ಮುಖ್ಯ ರಸ್ತೆಯಾಗಿದೆ. ಈಗ ಅನಿರ್ಧಿಷ್ಟಾವಧಿಗೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.
ಈ ಮಾರ್ಗದಲ್ಲಿ ಕೆಲವು ಷರತ್ತುಗಳೊಂದಿಗೆ ಕಾರು, ಜೀಪು, ಚಿಕ್ಕ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಶಿರಾಡಿ ಬಂದ್ ಆದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕಿಸುವ ಚಾರ್ಮಾಡಿ ಘಾಟ್, ಆಗುಂಬೆ ಘಾಟ್, ಬಿಸಿಲೆ ಘಾಟ್, ಸಂಪಾಜೆ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ. ಇದರಿಂದಾಗಿ ಹೆಚ್ಚುವರಿ ರೈಲುಗಳ ಸಂಚಾರ ಆರಂಭಿಸಬೇಕು ಎಂದು ಮನವಿ ಮಾಡಲಾಗಿತ್ತು.
ಲಘು ವಾಹನಗಳು ಸಂಚಾರಿಸಬಹುದು; ಶಿರಾಡಿ ಘಾಟ್ ಮೂಲಕ ಲಘು ವಾಹನಗಳು ಮಂಗಳೂರು-ಬೆಂಗಳೂರು ಸಂಚಾರ ನಡೆಸಲು ಅವಕಾಶ ನೀಡಲಾಗಿದೆ. ಕಾರು, ಟೆಂಪೋ, ಮಿನಿ ವ್ಯಾನ್, ದ್ವಿಚಕ್ರ ವಾಹನ ಮತ್ತು ಆಂಬ್ಯುಲೆನ್ಸ್‌ಗಳಿಗೆ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್ ಶಿರಾಡಿ ಘಾಟ್ ರಸ್ತೆ ಅಭಿವೃದ್ಧಿ ಬಗ್ಗೆ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಶೀಘ್ರವೇ ರಸ್ತೆ ದುರಸ್ತಿ ಕೈಗೊಳ್ಳಲಾಗುತ್ತದೆ. ಸುಮಾರು ಒಂದೂವರೆ ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದರು.











Click it and Unblock the Notifications