ಪೊಲೀಸರು ಮುಷ್ಕರ ಮಾಡಿದ್ರೆ ಠಾಣೆಗಳನ್ನು ರೌಡಿಗಳಿಗೆ ವಹಿಸುತ್ತೀರಾ ಸವದಿಯವರೇ?
ಬೆಂಗಳೂರು, ಏಪ್ರಿಲ್ 17: ಪ್ರಯಾಣಿಕರ ಹಿತ ರಕ್ಷಣೆ ನೆಪದಲ್ಲಿ ಸರ್ಕಾರಿ ಬಸ್ ನಿಲ್ದಾಣಗಳ ಪ್ರವೇಶಕ್ಕೆ ಖಾಸಗಿ ಬಸ್‌ಗಳಿಗೆ ಸರ್ಕಾರ ಅವಕಾಶ ನೀಡಿತು. ಸಾರಿಗೆ ಇಲಾಖೆಯ ಅವೈಜ್ಞಾನಿಕ ಈ ತೀರ್ಮಾನ ಇದೀಗ ಸಾರಿಗೆ ಇಲಾಖೆಗೆ ಮುಳುವಾಗಿ ಪರಿಣಮಿಸಿದೆ.
ಸರ್ಕಾರಿ ಬಸ್ ನಿಲ್ದಾಣಗಳಿಗೆ ಪ್ರವೇಶ ಮಾಡುವ ಸರ್ಕಾರಿ ಬಸ್‌ಗಳಿಗೆ ಖಾಸಗಿ ಬಸ್ ಮಾಲೀಕರೇ ಅಡ್ಡಿ ಪಡಿಸುತ್ತಿದ್ದಾರೆ. ಡಿಪೋ ಅಧಿಕಾರಿಗಳು ಕೂಡ ಖಾಸಗಿ ಬಸ್ ಮಾಲೀಕರಿಗೆ ಮಣೆ ಹಾಕುತ್ತಿದ್ದಾರೆ. ಹೋರಾಟ ಪಕ್ಕಕ್ಕಿಟ್ಟು ಬಸ್ ಚಾಲನೆಗೆ ಬರುತ್ತಿರುವ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರು ನಿಲ್ದಾಣದ ಬದಿ ಬಸ್ ನಿಲ್ಲಿಸುವ ಸ್ಥಿತಿ ನಿರ್ಮಾಣವಾಗಿದೆ.
ಭವಿಷ್ಯದಲ್ಲಿ ಪೊಲೀಸರು ಇದೇ ರೀತಿ ಬೀದಿಗೆ ಇಳಿದು ಹೋರಾಟಕ್ಕೆ ಮಾಡಿದರೆ, ಪೊಲೀಸ್ ಠಾಣೆಗಳನ್ನು ಖಾಸಗಿಯವರಿಗೆ ವಹಿಸಿದರೇ ಪರಿಸ್ಥಿತಿ ಏನಾಗಬಹುದು ಊಹಿಸಿ. ಮುಷ್ಕರ ನಿರತ ಸಾರಿಗೆ ನೌಕರರ ಮೇಲಿನ ಸಿಟ್ಟಿನಿಂದ ಸಾರಿಗೆ ಇಲಾಖೆ ತೆಗೆದುಕೊಂಡಿರುವ ತೀರ್ಮಾನ ಇದೀಗ ಸಾರಿಗೆ ಇಲಾಖೆಗೆ ಮುಳುವಾಗಿದೆ. ಸಾರ್ವಜನಿಕ ಸೇವೆ ಕೊಡುವ ಉದ್ದೇಶದಿಂದ ಕೆಲವು ಚಾಲಕರು ಮತ್ತು ನಿರ್ವಾಹಕರು ಮುಷ್ಕರ ಬಿಟ್ಟು ಕೆಲಸಕ್ಕೆ ಹಾಜರಾಗುತ್ತಿದ್ದಾರೆ.
ಆದರೆ ಬಿಎಂಟಿಸಿ ಬಸ್‌ಗಳನ್ನು ಅವರದ್ದೇ ನಿಲ್ದಾಣಗಳಲ್ಲಿ ನಿಲ್ಲಿಸುವಂತಿಲ್ಲ. ಶನಿವಾರ ಬೆಳಗ್ಗೆ ಬಿಎಂಟಿಸಿ ಬಸ್‌ಗಳನ್ನು ಮೆಜೆಸ್ಟಿಕ್ ನಿಲ್ದಾಣಕ್ಕೆ ಪ್ರವೇಶಿಸಲು ಅವಕಾಶ ಕೊಟ್ಟಿಲ್ಲ. ಖಾಸಗಿ ಬಸ್ ಏಜೆಂಟರೇ ಬಿಎಂಟಿಸಿ ಬಸ್‌ಗಳ ಪ್ರವೇಶಕ್ಕೆ ಅಡ್ಡಿ ಪಡಿಸಿದ್ದಾರೆ. ಇನ್ನು ಡಿಪೋ ಅಧಿಕಾರಿಗಳು ಕೂಡ ಖಾಸಗಿಯವರ ತಾಳಕ್ಕೆ ತಕ್ಕಂತೆ ಕುಣಿಯತೊಡಗಿದ್ದಾರೆ. ಇದು ಸೇವೆಗೆ ಮರಳಿದ ಬಿಎಂಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.

ಸಾರಿಗೆ ನೌಕರರ ಬೇಡಿಕೆ ಈಡೇರಿಸಬೇಕು, ಅದಕ್ಕಾಗಿ ಹೋರಾಟವೂ ಅಗತ್ಯ. ಆದರೆ ಅನಿರ್ದಿಷ್ಟಾವಧಿ ಮುಷ್ಕರದಿಂದ ಕೋವಿಡ್ ಸಂಕಷ್ಟ ಕಾಲದಲ್ಲಿ ಜನ ಸಾಮಾನ್ಯರು ಕಂಗಾಲಾಗಿದ್ದಾರೆ. ಜನರ ಸೇವೆ ತುರ್ತು ಅಗತ್ಯ. ಹೀಗಾಗಿಯೇ ಮುಷ್ಕರಕ್ಕೆ ಮಹತ್ವ ನೀಡದೇ ಸೇವೆಗೆ ಮರಳಿದ್ದೇವೆ.
ಆದರೆ, ಮೂರೇ ದಿನಗಳಲ್ಲಿ ಬೆಂಗಳೂರಿನ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಖಾಸಗಿಯವರ ದಬ್ಬಾಳಿಕೆ ಶುರುವಾಗಿದೆ. ಬೆಳಗ್ಗೆ ಕೆಂಪೇಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್ ನಿಲ್ದಾಣ)ದಲ್ಲಿ ಬಿಎಂಟಿಸಿ ಬಸ್‌ಗಳ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಖಾಸಗಿ ಬಸ್ ಏಜೆಂಟರು ಹಲ್ಲೆ ಮಾಡಲು ಬರುತ್ತಾರೆ. ಸರ್ಕಾರ ನಮಗೆ ಅವಕಾಶ ಕೊಟ್ಟಿದೆ.
''ಸರ್ಕಾರ ಆದೇಶ ಮಾಡುವವರೆಗೂ ನೀವು ಬರಬೇಡಿ ಎಂದು ಧಮ್ಕಿ ಹಾಕುತ್ತಾರೆ. ಬಸ್ ನಿಲ್ದಾಣದಲ್ಲಿರುವ ಡಿಪೋ ಅಧಿಕಾರಿಗಳು ಕೂಡ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಸಂಸ್ಥೆಗೆ ಈ ರೀತಿಯ ದುರ್ಗತಿ ಬರಬಾರದಿತ್ತು. ಖಾಸಗಿಯವರಿಗೆ ಈ ಪರಿಯ ಮಣೆ ಹಾಕಿದ ಇಲಾಖೆಯ ನಿರ್ಧಾರ ಸರಿಯಲ್ಲ'' ಎಂದು ಬಿಎಂಟಿಸಿ ನಿರ್ವಾಹಕರೊಬ್ಬರು ಒನ್ಇಂಡಿಯಾ ಕನ್ನಡ ಜತೆ ಬೇಸರ ತೋಡಿಕೊಂಡರು.

ಸಾಲು ಸಾಲು ಬಸ್ ಗಳು: ಮೆಜೆಸ್ಟಿಕ್‌ನಲ್ಲಿ ಖಾಸಗಿಯವರ ಉಪಟಳ ತಾಳಲಾರದೇ ಬಿಎಂಟಿಸಿ ಬಸ್‌ಗಳು ಹೊರಗೆ ನಿಂತಿದ್ದವು. ಖಾಸಗಿ ಬಸ್‌ಗಳು ನಿಲ್ದಾಣದ ಒಳಗೆ ಪ್ರವೇಶ ಮಾಡುತ್ತಿದ್ದವು. ಪ್ರಯಾಣಿಕರಿಂದ ಸುಲಿಗೆ ಮಾಡಲು ಇಳಿದಿರುವ ಖಾಸಗಿ ಬಸ್‌ಗಳಿಂದ ಜನ ಸಾಮಾನ್ಯರು ಕೂಡ ರೋಸಿ ಹೋಗಿದ್ದಾರೆ. ಇದನ್ನು ನೋಡಿ ಸುಮ್ಮನಿರುವ ಅಧಿಕಾರಿಗಳು ಯಾಕೆ ಮೌನ ಮುರಿಯುತ್ತಿಲ್ಲ? ಖಾಸಗಿಯವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಅಧಿಕಾರಿಗಳು ಸುಮ್ಮನಿದ್ದಾರೆಯೇ ಎಂಬ ಪ್ರಶ್ನೆ ಎಡೆ ಮಾಡಿಕೊಟ್ಟಿದೆ.

11 ನೇ ದಿನಕ್ಕೆ ಕಾಲಿಟ್ಟ ಮುಷ್ಕರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಕೈಗೊಂಡಿರುವ ಮುಷ್ಕರ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದಿದ್ದ ಸಾರಿಗೆ ನೌಕರರು ಶನಿವಾರದಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್‌ಗಳು ಜನರಿಂದ ಸುಲಿಗೆಗೆ ನಿಂತಂತೆ ಕಾಣುತ್ತಿವೆ.












Click it and Unblock the Notifications