ಸಾರಿಗೆ ನೌಕರರ ಹೋರಾಟದಲ್ಲಿ ರೈತ ಮುಖಂಡನಿಗೆ ಏನು ಕೆಲಸ ? : ಸವದಿ ಪ್ರಶ್ನೆ
ಬೆಂಗಳೂರು, ಡಿಸೆಂಬರ್ 12: ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಮುಕ್ತ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ನನ್ನ ಮನೆ ಬಾಗಿಲು ಮುಕ್ತವಾಗಿ ತೆರೆದಿದೆ. ಯಾವಾಗ ಬೇಕಾದರೂ ಹೋರಾಟಗಾರರು ಬಂದು ಚರ್ಚೆ ಮಾಡಬಹುದು.ಆದರೆ ಸಾರಿಗೆ ನೌಕರರ ಹೋರಾಟದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಗೆ ಏನು ಕೆಲಸ ? ಅವರು ಯಾಕೆ ಸಾರಿಗೆ ನೌಕರರ ಹೋರಾಟದಲ್ಲಿ ಪಾಲ್ಗೊಂಡಿದ್ದಾರೋ ಗೊತ್ತಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಮುಷ್ಕರ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಜಯಮಹಲ್ ನಲ್ಲಿರುವ ನನ್ನ ಮನೆಗೆ ಯಾವಾಗ ಬೇಕಾದರೂ ಬರಬಹುದು. ಕೂತು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಮನವಿ ಮಾಡಿದ್ದಾರೆ.
ರೈತ ಮುಖಂಡನಿಗೆ ಏನು ಕೆಲಸ: ಇದು ಸಾರಿಗೆ ನೌಕರರ ಮುಷ್ಕರ. ಆದರೆ ರೈತ ಮುಖಂಡರಿಗೆ ಸಾರಿಗೆ ನೌಕರರಿಗೆ ಏನು ಸಂಬಂಧ ? ಕೋಡಿಹಳ್ಳಿ ಚಂದ್ರಶೇಖರ್ ಯಾಕೆ ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಇತ್ತೀಚೆಗೆ ಭಾರತ್ ಬಂದ್ ಕರೆ ನೀಡಿದ್ದ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ನೌಕರರ ಹೋರಾಟದ ಜತೆ ಕೈ ಜೋಡಿಸಿದ್ದರು. ಹೋರಾಟದ ವಿಚಾರವಾಗಿ ಕೋಡಿಹಳ್ಳಿ ಚಂದ್ರ ಶೇಖರ್ ಅವರನ್ನು ಬಂಧಿಸಿದ ಬಳಿಕ ಸಾರಿಗೆ ನೌಕರರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ರೈತ ಮುಖಂಡರು ಸಾರಿಗೆ ನೌಕರರ ಹೋರಾಟದಲ್ಲಿ ಪಾಲ್ಗೊಂಡಿರುವುದನ್ನು ಸವದಿ ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.

ನಾಳೆಗೆ ಎಲ್ಲಾ ಸಿದ್ಧತೆ : ರಾಜ್ಯದಲ್ಲಿ ಪರ್ಯಾಯ ಸಂಚಾರ ವ್ಯವಸ್ಥೆ ಮಾಡುತ್ತೇವೆ. ಖಾಸಗಿ ಬಸ್ ಗಳ ಮೂಲಕ ಸಾರಿಗೆ ಪ್ರಾರಂಭ ಮಾಡುತ್ತೇವೆ. ಈಗಾಗಲೇ ಅನೇಕ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರ ಬಂದೋ ಬಸ್ತ್ ಮೂಲಕ ಚಾಲಕ ನಿರ್ವಾಹಕರಿಗೆ ರಕ್ಷಣೆ ನೀಡಿ ಮತ್ತಷ್ಟು ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತೇವೆ. ನಾನು ಬೆಸ್ಕಾಂ ಮಂತ್ರಿಯಾಗಿದ್ದ ವೇಳೆ ಶೇ. 26 ರಷ್ಟು ವೇತನ ಹೆಚ್ಚಳ ಮಾಡಿದ್ದೇನೆ. ಅವರೆಲ್ಲರೂ ಈಗ ಸುಗಮವಾಗಿದ್ದಾರೆ. ಅದೇ ರೀತಿ ಸಾರಿಗೆ ನೌಕರರ ಸಮಸ್ಯೆ ಪರಿಹರಿಸಲಾಗುವುದು ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.

ಮಂತ್ರಿಗಳಿಗೆ ಮನವಿ: ರಾಜ್ಯದಲ್ಲಿ ಬೇರೆ ಮಂತ್ರಿಗಳು ಇದ್ದಾರೆ. ಅವರು ಏನು ಮಾಡುತ್ತಾರೆ ಅಂತ ನನಗೆ ಗೊತ್ತಿಲ್ಲ. ಪ್ರತಿಭಟನೆಗೆ ಸಂಬಂಧಿಸಿದಂತೆ ಉಳಿದ ಮಂತ್ರಿಗಳು ಯೂನಿಯನ್ ಗಳನ್ನು ಕರೆಸಿ ಸಂಧಾನ ಮಾಡಲಿ. ನಾನು ಎಲ್ಲಿಗೆ ಹೋಗಿಲ್ಲ. ಸಾರಿಗೆ ನೌಕರರಿಗೆ ನ್ಯಾಯ ಕೊಡಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಕೈ ಮುಗಿದು ಕೇಳುತ್ತೇನೆ. ಎಲ್ಲಾ ಶಾಸಕರು ಮತ್ತು ಮಂತ್ರಿಗಳು ನೌಕರರ ಸಮಸ್ಯೆ ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಸವದಿ ಮನವಿ ಮಾಡಿದರು. ಇದೇ ವೇಳೆ ಬಿಎಂಟಿಸಿ ವ್ಯವಸ್ಥಾಪ ನಿರ್ದೇಶಕರಾದ ಶಿಖಾ ಅವರು ಸವದಿ ಅವರ ಮನೆಗೆ ಬಂದು ನಾಳಿನ ಆಗು ಹೋಗುಗಳ ಬಗ್ಗೆ ಮಾತುಕತೆ ನಡೆಸಿದರು.












Click it and Unblock the Notifications