ಮೇ.4 ಆರ್ ಸಿಬಿ ಮ್ಯಾಚ್, ವಾಹನ ನಿಲುಗಡೆ ಎಲ್ಲೆಲ್ಲಿ?
ಬೆಂಗಳೂರು, ಮೇ 2: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ.4ರಂದು ನಡೆಯಲಿರುವ ಐಪಿಎಲ್ 6 ಟಿ20 ಕ್ರಿಕೆಟ್ ಪಂದ್ಯದ ಬಿಸಿ ಬೆಂಗಳೂರು ಪೊಲೀಸರಿಗೂ ತಟ್ಟಿದೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿರ್ಬಂಧ, ಬದಲಿ ಮಾರ್ಗ, ವಾಹನ ನಿಲುಗಡೆ ನಿಷೇಧ ಎಲ್ಲೆಲ್ಲಿ ಎಂಬುದರ ಬಗ್ಗೆ ಮಾಹಿತಿ ಪ್ರಕಟಿಸಿದ್ದಾರೆ.
ಮೇ.4 ರಂದು ಸಂಜೆ 8 ಗಂಟೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಡಲಿದೆ. ಭಾನುವಾರ ಮಧ್ಯಾಹ್ನ 2 ರಿಂದ ರಾತ್ರಿ 11.30 ರವರೆಗೆ ಸ್ಟೇಡಿಯಂ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳ ನಿಲುಗಡೆ ನಿಷೇಧಿಸಿ ಪೊಲೀಸ್ ಅಯುಕ್ತರು ಆದೇಶ ಹೊರಡಿಸಿದ್ದಾರೆ.
ಕ್ವೀನ್ಸ್ ರಸ್ತೆಯಲ್ಲಿ ಸಿ.ಟಿ.ಓ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ ರಸ್ತೆಯ ಎರಡೂ ಕಡೆ, ಎಂ.ಜಿ ರಸ್ತೆಯಲ್ಲಿ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ ರಸ್ತೆಯ ಎರಡೂ ಕಡೆ, ಲಿಂಕ್ ರಸ್ತೆಯಲ್ಲಿ ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆ ವರೆಗೆ, ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆಗಳಲ್ಲಿ ಕ್ರಿಕೆಟ್ ಮೈದಾನದ ಕಾಂಪೌಂಡಿಗೆ ಹೊಂದಿಕೊಂಡಂತೆ ರಸ್ತೆಯ ಎರಡೂ ಕಡೆ, ಸೆಂಟ್ರಲ್ ಸ್ಟ್ರೀಟ್ ರಸ್ತೆಯಲ್ಲಿ ರಸ್ತೆಯ ಎರಡೂ ಕಡೆ, ಕಬ್ಬನ್ ರಸ್ತೆಯಲ್ಲಿ - ಬಿ.ಆರ್.ವಿ ವೃತ್ತದಿಂದ ಡಿಕೆನ್ಸ್ ನ್ ರಸ್ತೆ ಜಂಕ್ಷನ್ ವರೆಗೆ ರಸ್ತೆಯ ಎರಡೂ ಕಡೆ, ಕಬ್ಬನ್ ರಸ್ತೆಯಲ್ಲಿ ಕಾಮರಾಜ ರಸ್ತೆ ಜಂಕ್ಷನ್‌ನಿಂದ ಡಿಕೆನ್ಸ್ ನ್ ರಸ್ತೆ ಜಂಕ್ಷನ್ ವರೆಗೆ ಬಿ.ಎಂ.ಟಿ.ಸಿ ಬಸ್ ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ತರಹದ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ.

ಪಾರ್ಕಿಂಗ್ ಕಡ್ಡಾಯವಾಗಿ ನಿಷೇಧ: ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ ಎಸ್.ಬಿ.ಐ ವೃತ್ತದಿಂದ ಆಶೀರ್ವಾದಂ ವೃತ್ತದ ವರೆಗೆ, ಮ್ಯೂಸಿಯಂ ರಸ್ತೆಯಲ್ಲಿ, ಎಂ.ಜಿ ರಸ್ತೆಯಿಂದ ಸೆಂಟ್ ಮಾರ್ಕ್ಸ್ ರಸ್ತೆ ವರೆಗೆ ಹಾಗೂ ರೆಸಿಡೆನ್ಸಿ ರಸ್ತೆವರೆಗೆ, ಕಸ್ತೂರಬಾ ರಸ್ತೆಯಲ್ಲಿ, ಕ್ವೀನ್ಸ್‌ವೃತ್ತದಿಂದ ಹಡ್ಸನ್ ವೃತ್ತದವರೆಗೆ ಹಾಗೂ ಮಲ್ಯರಸ್ತೆಯಲ್ಲಿ ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್ ವೃತ್ತದವರೆಗೆ, ಕಬ್ಬನ್‌ಪಾರ್ಕ್ ಒಳಭಾಗದ ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ ಪೌಂಟೇನ್ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಕ್ವೀನ್ಸ್ ವೃತ್ತದಿಂದ ಲ್ಯಾವೆಲ್ಲಿ ರಸ್ತೆಯಲ್ಲಿ ಗ್ರಾಂಟ್ ಜಂಕ್ಷನ್ ವರೆಗೆ ರಸ್ತೆಗಳಲ್ಲಿ, ಸಿದ್ದಲಿಂಗಯ್ಯ ವೃತ್ತದಿಂದ ವಿಠಲ್ ಮಲ್ಯ ರಸ್ತೆಯಲ್ಲಿ ಬಿಷಪ್ ಕಾಟನ್ ಬಾಲಕೀಯರ ಶಾಲೆಯವರೆಗೆ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಲ್ಲಿ ಪಾರ್ಕ್ ಮಾಡಿ: ಪಂದ್ಯ ವೀಕ್ಷಣೆ ಮಾಡಲು ಬರುವ ಸಾರ್ವಜನಿಕರ ವಾಹನಗಳನ್ನು ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ ಮತ್ತು ಕಂಠೀರವ ಕ್ರೀಡಾಂಗಣದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಯು.ಬಿ. ಸಿಟಿಯ ಪೇ ಅಂಡ್ ಪಾರ್ಕಿಂಗ್ ಸ್ಥಳದಲ್ಲಿ, ಗಣ್ಯ ವ್ಯಕ್ತಿಗಳ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಕೆ.ಎಸ್.ಸಿ.ಎ. ಸದಸ್ಯರ ವಾಹನಗಳನ್ನು ಸೆಂಟ್ ಮಾರ್ಕ್ಸ್ ಕ್ಯಾಥಡ್ರೆಲ್ ಚರ್ಚ್ ಆವರಣದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
ಬಿ.ಆರ್.ವಿ ಮೈದಾನದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ವಾಹನ ನಿಲುಗಡೆಗೆ ಸ್ಥಳಾವಕಾಶ ಕಡಿಮೆ ಇರುವುದರಿಂದ ಹಾಗೂ ಎಂ.ಜಿ ರಸ್ತೆ ಸಿಟಿಒ ವೃತ್ತದ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ದಟ್ಟಣೆ ತಪ್ಪಿಸಲು ಕ್ರಿಕೆಟ್ ವೀಕ್ಷಣೆಗೆ ಬರುವ ಪ್ರೇಕ್ಷಕರು ಸಾರ್ವಜನಿಕ ಸಾರಿಗೆ (ಬಿ.ಎಂ.ಟಿ.ಸಿ) ವಾಹನಗಳನ್ನು ಬಳಸಲು ಕೋರಿದೆ. ಪಂದ್ಯ ಮುಗಿದ ನಂತರ ಬಿ.ಎಂ.ಟಿ.ಸಿ ವತಿಯಿಂದ ನಗರದ ಎಲ್ಲಾ ಭಾಗಗಳಿಗೂ ಬಸ್ ವ್ಯವಸ್ಥೆ ಮಾಡಲಾಗಿದೆ. [ವಿವರ ಇಲ್ಲಿ ಓದಿ]
ವಿಶೇಷ ಕರ್ತವ್ಯಕ್ಕೆ ನಿಯೋಜನೆ ಮಾಡಿರುವ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ವಾಹನಗಳನ್ನು ಕಬ್ಬನ್ ಪಾರ್ಕ್ ಒಳಭಾಗದ ಕೆ.ಜಿ.ಐ.ಡಿ ಬಿಲ್ಡಿಂಗ್ ಮುಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಸ್ಟೇಡಿಯಂ ಒಳ-ಹೊರ ಹೋಗಲು ಅನುವು: ಗೇಟ್ ನಂ-1 ರಿಂದ ಗೇಟ್ ನಂ-9 ಕ್ವೀನ್ಸ್ ರಸ್ತೆಯಲ್ಲಿ ಪಾದಚಾರಿಗಳು / ವೀಕ್ಷಕರುಗಳಿಗೆ ಹೋಗಲು ಅವಕಾಶ ಕಲ್ಪಿಸಿದೆ.
ಗೇಟ್ ನಂ. 17 ರಿಂದ ಗೇಟ್ ನಂ. 21 ರವರೆಗೆ ಲಿಂಕ್ ರಸ್ತೆಯಲ್ಲಿದ್ದು ಅನಿಲ್ ಕುಂಬ್ಳೆ ವೃತ್ತದಿಂದ ಬರುವ ಪ್ರೇಕ್ಷಕರುಗಳು / ಪಾದಚಾರಿಗಳು ಹೋಗಬಹುದಾಗಿದೆ.












Click it and Unblock the Notifications