ಟೈಗರ್ ಗಳ "ಅಕ್ರಮ ಗಳಿಕೆ"ಗೆ ಮತ್ತೆ ಅವಕಾಶ ಕೊಟ್ಟರೇ ಸಂಚಾರ ಪೊಲೀಸ್?
ಬೆಂಗಳೂರು, ಸೆ. 10 : ಟೋಯಿಂಗ್ ವಾಹನಗಳ "ಅಕ್ರಮ ಗಳಿಕೆ" ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗೃಹ ಸಚಿವರ ಕಟ್ಟಪ್ಪಣೆಗೆ ಮೂರು ಕಾಸಿನ ಬೆಲೆ ಇಲ್ಲ. ಗೃಹ ಸಚಿವರ ಆದೇಶದಂತೆ ಟೋಯಿಂಗ್ ವಾಹನಗಳ ಅಕ್ರಮಕ್ಕೆ ಕಡಿವಾಣ ಹಾಕಲು ಸಂಚಾರ ವಿಭಾಗದ ಡಿಸಿಪಿಗಳು ಆರಂಭಿಸಿದ್ದ 'ದಿಢೀರ್ ದಾಳಿ' ಎರಡೇ ದಿನಕ್ಕೆ ಸ್ಥಗಿತಗೊಂಡಿದೆ. 'ಅಕ್ರಮ ಗಳಿಕೆಗೆ' ಅವಕಾಶ ಕೊಡದಿದ್ದರೆ ಟೋಯಿಂಗ್ ಮಾಡಲ್ಲ ಎಂದು ಟೋಯಿಂಗ್ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಟೈಗರ್ ವಾಹನ ಮಾಲೀಕರ ಬಂದ್‌ಗೆ ಸಂಚಾರ ಪೊಲೀಸರೇ ಹೆದರಿದ್ದಾರೆ. ಮಾತ್ರವಲ್ಲ ಎರಡೇ ದಿನಕ್ಕೆ ಟೈಗರ್ ವಾಹನಗಳು ಟೋಯಿಂಗ್ ಕಾರ್ಯಾಚರಣೆಗೆ ಇಳಿದಿವೆ.
ಗಣೇಶ ಹಬ್ಬದ ದಿನವೂ ರಾಜಧಾನಿ ಬೆಂಗಳೂರಿನಲ್ಲಿ 100 ಟೋಯಿಂಗ್ ವಾಹನ ಕಾರ್ಯಾಚರಣೆಗೆ ಇಳಿದಿವೆ. ಗೃಹ ಸಚಿವರ ಆದೇಶ ಹಾಗೂ ಡಿಸಿಪಿಗಳ ದಿಢೀರ್ ಭೇಟಿಯ ಹಿನ್ನೆಲೆಯಲ್ಲಿ ಟೈಗರ್ ವಾಹನಗಳ ಕಾರ್ಯ ನಿಂತು ಹೋಗಿತ್ತು. ಟೈಗರ್ ವಾಹನ ಮಾಲೀಕರು ಪರೋಕ್ಷವಾಗಿ ಮುಷ್ಕರ ಆರಂಭಿಸಿದ್ದೇ, ಜಂಟಿ ಪೊಲೀಸ್ ಆಯುಕ್ತರು ಸೆಪ್ಟೆಂಬರ್ ಮಾಹೆಯಲ್ಲಿ ಟೋಯಿಂಗ್ ವಾಹನಗಳಿಗೆ ಸಂಚಾರ ಠಾಣೆಗಳನ್ನು ಮಂಜೂರಾತಿ ಮಾಡಿ ಆದೇಶಿಸಿದ್ದಾರೆ. ಈ ಆದೇಶ ಪಟ್ಟಿ ಕೈ ಸೆರಿದ್ದೇ ತಡ ನೂರು ಟೈಗರ್ ವಾಹನಗಳು ಮತ್ತೆ ಕಾರ್ಯಾಚರಣೆ ಆರಂಭಿಸಿವೆ.

ಪಾರ್ಕಿಂಗ್ ವಿಚಾರದಲ್ಲಿ ಪೋಲೀಸರ ಮತ್ತು ಮತ್ತು ವಾಹನ ಸವಾರರ ನಡುವಿನ ದೊಡ್ಡ ಸಂಘರ್ಷಕ್ಕೆ ನಾಂದಿ ಹಾಡಿರುವುದೇ ಟೋಯಿಂಗ್. ಸಾರ್ವಜನಿಕರು ಹಾಗೂ ಟೋಯಿಂಗ್ ಮಾಡುವರ ನಡುವೆ ಅನೇಕ ಘರ್ಷಣೆಗಳು ನಡೆದಿವೆ. ರಾಜಧಾನಿಯಲ್ಲಿ ಅದರಲ್ಲೂ ಹಬ್ಬದ ಆಚರಣೆ ವೇಳೆ ಸಾರ್ವಜನಿಕರು ಬಹು ಜನನಿಬಿಡ ಮಾರುಕಟ್ಟೆ ಪ್ರದೇಶಗಳಿಗೆ ಬರುವುದು ಅನಿವಾರ್ಯ. ಇದನ್ನೆ ಅವಕಾಶ ಎಂದು ಪರಿಗಣಿಸುವ ಟೈಗರ್ ವಾಹನಗಳು ನೋ ಪಾರ್ಕಿಂಗ್ ವಿರುದ್ಧ ಕಾರ್ಯಾಚರಣೆಗೆ ಇಳಿಯುತ್ತವೆ. ಮಾತ್ರವಲ್ಲ ಜನರಿಗೆ ಟೋಯಿಂಗ್ ಕಾರ್ಯಾಚರಣೆ ಮೇಲೆ ಇರುವ ಸಿಟ್ಟು ಬೇರೆ ಯಾರ ಮೇಲೂ ಇಲ್ಲ. ಇದನ್ನು ಅರ್ಥ ಮಾಡಿಕೊಂಡು ಸಂಚಾರ ಪೊಲೀಸ್ ಅಧಿಕಾರಿಗಳು ಪರ್ಯಾಯ ಬಗ್ಗೆಯೂ ಆಲೋಚನೆ ಮಾಡಿಲ್ಲ. ಹೀಗಾಗಿ ಟೋಯಿಂಗ್ ಒಂದು ಸಮಸ್ಯೆಯಾಗಿಯೇ ಮುಂದುವರೆದಿದೆ.

ಟೋಯಿಂಗ್ ವಾಹನ ಎತ್ತಲ್ಲ ಎಂದಿದ್ದ ಮಾಲೀಕರು:
ನೋ ಪಾರ್ಕಿಂಗ್ ಮಾಡುವ ದ್ವಿಚಕ್ರ ವಾಹನಕ್ಕೆ ಒಂದು ಸಾವಿರ ದಂಡ, ಟೋಯಿಂಗ್ ಶುಲ್ಕ 325 ರೂ. ಸರ್ಕಾರದ ಶುಲ್ಕ 325 ರೂ. ಸೇರಿ ಒಟ್ಟು 1650 ರೂ. ದಂಡ ಪಾವತಿಸಬೇಕು. ಟೋಯಿಂಗ್ ಮಾಡಿದ ದ್ವಿಚಕ್ರ ವಾಹನಗಳಲ್ಲಿ ಅರ್ಧಕ್ಕೆ ಪೊಲೀಸರು ರಶೀದಿ ನೀಡದೇ ನೋ ಪಾರ್ಕಿಂಗ್ ಶುಲ್ಕ , ಟೋಯಿಂಗ್ ಶುಲ್ಕ, ಸರ್ಕಾರದ ಸರ್ ಚಾರ್ಜ್ 1650 ರೂ. ಬದಲಿಗೆ 700 ರೂ. ನಿಂದ 800 ರೂ. ವಾಹನ ಸವಾರರಿಂದ ವಸೂಲಿ ಮಾಡುತ್ತಾರೆ. ಕಾನೂನು ಬದ್ಧವಾಗಿ ಟೋಯಿಂಗ್ ಮಾಡುವುದಕ್ಕಿಂತಲೂ ಅನಧಿಕೃವಾಗಿ ಹಣ ಪಡೆದು ಬಿಟ್ಟು ಕಳಿಸಲು ಟೋಯಿಂಗ್ ವಾಹನದ ಲಾಟ್ ಬಳಿ ಹುಡುಗರನ್ನು ನಿಯೋಜಿಸಲಾಗಿರುತ್ತದೆ. ಅಕ್ರಮ ಹಾದಿ ಮಾಡಿಕೊಂಡಿರುವ ಟೋಯಿಂಗ್ ವಿರುದ್ಧ ಸಾರ್ವಜನರ ಆಕ್ರೋಶ ಭುಗಿಲೆದ್ದಿದೆ. ಮಾತ್ರವಲ್ಲ ಟೋಯಿಂಗ್ ದಂಧೆಗೆ ಕಡಿವಾಣ ಹಾಕಲಾಗದ ಹಂತಕ್ಕೆ ಬಂತು ನಿಂತಿದೆ.

ಅರಗ ಜ್ಞಾನೇಂದ್ರ ಆದೇಶ ಪಾಲನೆ ಮುಗೀತು :
ಟೋಯಿಂಗ್ ದಂಧೆಯ ಬಗ್ಗೆ ಪೂರ್ಣ ಮಾಹಿತಿ ಪಡೆದ ನೂತನ ಗೃಹ ಸಚಿವ ಅರಗ ಜ್ಞಾನೇಂದ್ರ, ಅವರು ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘಿಸಿ ಟೋಯಿಂಗ್ ಮಾಡಬೇಡಿ. ನಿಯಮ ಬದ್ಧವಾಗಿ ಸಾರ್ವಜನಿಕರ ಜತೆ ವರ್ತನೆ ಮಾಡಿ. ಸುಖಾ ಸುಮ್ಮನೆ ತೊಂದರೆ ಕೊಡಬೇಡಿ. ನೋ ಪಾರ್ಕಿಂಗ್ ಬಗ್ಗೆ ಇರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಟೋಯಿಂಗ್ ಮಾಡುವ ಪ್ರತಿ ವಾಹನಕ್ಕೂ ಲೆಕ್ಕ ಕೊಡಿ ಎಂದು ಪೊಲಿಸ್ ಅಧಿಕಾರಿಗಳಿಗೆ ಕೆಲ ದಿನಗಳ ಹಿಂದಷ್ಟೇ ತಾಕೀತು ಮಾಡಿದ್ದರು.

ಗೃಹ ಸಚಿವರ ಈ ಮಾತಿನಿಂದ ಎಚ್ಚೆತ್ತ ಬೆಂಗಳೂರು ಸಂಚಾರ ವಿಭಾಗದ ಡಿಸಿಪಿಗಳು ಟೋಯಿಂಗ್ ವಾಹನಗಳ ಕಾರ್ಯ ವೈಖರಿ ಪತ್ತೆ ಮಾಡಲು ದಿಢೀರ್ ಭೇಟಿ ನೀಡಿದ್ದರು. ಕಳೆದ ನಾಲ್ಕೈದು ದಿನದಿಂದ ಟೋಯಿಂಗ್ ವಾಹನಗಳ ಬಳಿ ಠಿಕಾಣಿ ಹೂಡಿದ ಡಿಸಿಪಿಗಳು ನಿಯಮ ಬದ್ಧವಾಗಿ ರಶೀದಿ ಹರಿಯುವಂತೆ ಸೂಚಿಸಿದ್ದರು. ಟೈಗರ್ ವಾಹನ ಅಕ್ರಮಕ್ಕೆ ಬ್ರೇಕ್ ಬೀಳುತ್ತಿದ್ದಂತೆ ಟೋಯಿಂಗ್ ವಾಹನಗಳು ಅನಧಿಕೃತವಾಗಿ ಮುಷ್ಕರ ಆರಂಭಿಸಿದ್ದವು. ಗೃಹ ಸಚಿವರ ಮಾತು ಪಾಲನೆ ಆಗಬೇಕು, ಟೋಯಿಂಗ್ ನಡೆಯಬೇಕು ಎಂದು ತೀರ್ಮಾನಿಸಿರುವ ಸಂಚಾರ ಪೊಲೀಸ್ ಅಧಿಕಾರಿಗಳು ಮತ್ತೆ ಟೋಯಿಂಗ್ ಗೆ ಅವಕಾಶ ಕಲ್ಪಿಸಿದ್ದು, ಇದೀಗ ಟೈಗರ್ ವಾಹನಗಳು ಫೀಲ್ಡಿಗೆ ಇಳಿದಿವೆ.












Click it and Unblock the Notifications