ಪ್ರಧಾನಿ ರೋಡ್‌ಶೋ: ಬೆಂಗಳೂರಿನಲ್ಲಿ ಭಾನುವಾರವೂ ನೆಮ್ಮದಿಯಿಂದ ಓಡಾಡುವಂತಿಲ್ಲ, ಈ ರಸ್ತೆಗಳು ಬಂದ್!
ಬೆಂಗಳೂರು, ಮೇ. 06: ಮೇ 7 ರಂದು ಭಾನುವಾರ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ದಿನದ ರೋಡ್‌ಶೋ ನಡೆಯಲಿದೆ. ಇದಕ್ಕೂ ಮುಂಚಿತವಾಗಿ ಬೆಂಗಳೂರು ಸಂಚಾರ ಪೊಲೀಸರು ಸಲಹೆಯನ್ನು ನೀಡಿದ್ದಾರೆ. ಹೀಗಾಗಿ ಈ ಮಾರ್ಗಗಳಲ್ಲಿ ನಾಳೆ ವಾಹನ ಸವಾರರು, ಸಾರ್ವಜನಿಕ ಸಂಚಾರ ನಿರ್ಬಂಧಿಸಲಾಗಿದೆ.
ಪ್ರಧಾನಿ ಬೆಂಗಾವಲು ಪಡೆಗೆ ಸುಗಮ ಸಂಚಾರಕ್ಕೆ ಸಹಾಯಕವಾಗುವಂತೆ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ಕೆಲವು ರಸ್ತೆಗಳಲ್ಲಿ ವಾಹನ ಸವಾರರು, ಸಾರ್ವಜನಿಕರು ತಮ್ಮ ಓಡಾಟವನ್ನು ತಪ್ಪಿಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ. ರೋಡ್‌ಶೋ ನಗರದ ಸಂಚಾರ ದಟ್ಟಣೆಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂಬ ಆರೋಪಗಳು ಕೇಳಿ ಬಂದಿವೆ.

ಭಾನುವಾರದಂದು ನೀಟ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅನಾನುಕೂಲತೆಯನ್ನು ಉಂಟುಮಾಡಬಹುದು ಎಂಬ ಕಳವಳದಿಂದಾಗಿ ಒಂದು ದಿನದ ರೋಡ್‌ಶೋ ವನ್ನು ಎರಡು ದಿನಗಳಿಗೆ ವಿಭಜನೆ ಮಾಡಲಾಗಿತ್ತು. ಆದರೆ, ಶನಿವಾರ ನಡೆದ ರೋಡ್‌ಶೋಯಿಂದ ಹಲವು ರಸ್ತೆಗಳನ್ನು ಬಂದ್ ಮಾಡಿದ ಕಾರಣ ಸಾರ್ವಜನಿಕರು, ಪ್ರಯಾಣಿಕರು, ಅದರಲ್ಲೂ ಆಟೋ ಚಾಲಕರು ತೀವ್ರ ಸಂಕಷ್ಟಕ್ಕೆ ಒಳಗಾದರು.
*ನಾಳೆ ಈ ಮಾರ್ಗಗಳು ಬಂದ್*
ರಾಜಭವನ ರಸ್ತೆ, ಮೇಖ್ರಿ ವೃತ್ತ, ರೇಸ್ ಕೋರ್ಸ್ ರಸ್ತೆ, ಟಿ.ಚೌಡಯ್ಯ ರಸ್ತೆ, ರಮಣ ಮಹರ್ಷಿ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ಸುರಂಜಂದಾಸ್ ರಸ್ತೆ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಜಗದೀಶ್ ನಗರ ಕ್ರಾಸ್, ಜೆ.ಬಿ.ನಗರ ಮುಖ್ಯರಸ್ತೆ, ಬಿಇಎಂಎಲ್ ಜಂಕ್ಷನ್, ಹೊಸ ತಿಪ್ಪಸಂದ್ರ ಮಾರುಕಟ್ಟೆ, 80 ಅಡಿ ರಸ್ತೆ ಇಂದಿರಾನಗರ, ಹೊಸ ತಿಪ್ಪಸಂದ್ರ ರಸ್ತೆ, 12ನೇ ಮುಖ್ಯರಸ್ತೆ 100 ಅಡಿ. ರಸ್ತೆ ಇಂದಿರಾನಗರ, ಕಾವೇರಿ ಶಾಲೆ, ಸಿಎಂಎಚ್ ರಸ್ತೆ, 17ನೇ ಎಫ್ ಕ್ರಾಸ್ ಆದರ್ಶ ಜಂಕ್ಷನ್, ಹಲಸೂರು ಮೆಟ್ರೋ ನಿಲ್ದಾಣ, ಮತ್ತು ಟ್ರಿನಿಟಿ ಜಂಕ್ಷನ್.

ನಿಗದಿತ ಸಮಯದಲ್ಲಿ ನಗರದ ಈ ಭಾಗಗಳಲ್ಲಿ ಸಂಚರಿಸುವ ನಾಗರಿಕರು ಅನಾನುಕೂಲಗಳನ್ನು ತಪ್ಪಿಸಲು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಒತ್ತಾಯಿಸಿದ್ದಾರೆ.












Click it and Unblock the Notifications