ಗಣರಾಜ್ಯೋತ್ಸವ : ಬೆಂಗಳೂರಲ್ಲಿ ಎಲ್ಲೆಲ್ಲಿ ಪಾರ್ಕಿಂಗ್ ವ್ಯವಸ್ಥೆ?
ಬೆಂಗಳೂರು, ಜನವರಿ 25 : 67ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಾಹನ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.
ಜನವರಿ 26ರ ಮಂಗಳವಾರ ಬೆಳಗ್ಗೆ 8.58ಕ್ಕೆ ರಾಜ್ಯಪಾಲರು ಮಾಣೆಕ್ ಷಾ ಪೆರೇಡ್ ಮೈದಾನಕ್ಕೆ ಆಗಮಿಸಲಿದ್ದು, 9 ಗಂಟೆಗೆ ಧ್ವಜಾರೋಹಣ ಮಾಡಲಿದ್ದಾರೆ. ನಂತರ ಪೊಲೀಸರ ಪಥ ಸಂಚಲನ ಮತ್ತು ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯುತ್ತವೆ. [ಗಣರಾಜ್ಯೋತ್ಸವ : ಭದ್ರತೆಗೆ 5 ಸಾವಿರ ಪೊಲೀಸ್]

ವಾಹನಗಳ ಪಾರ್ಕಿಂಗ್ : ಮಾಣೆಕ್ ಷಾ ಪೆರೇಡ್ ಮೈದಾನಕ್ಕೆ ಆಗಮಿಸುವ ಸಾರ್ವಜನಿಕರು ಬೆಳಗ್ಗೆ 7.30ರಿಂದ 8.30ರೊಳಗೆ ಮೈದಾನ ಪ್ರವೇಶಿಸಬೇಕು. ಬಳಿಕ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಪಾರ್ಕಿಂಗ್ ವಿವರ ಕೆಳಗಿನಂತಿದೆ. [ಅಪ್ರತಿಮ ಯೋಧ, ಸ್ಫೂರ್ತಿಯ ನಾಯಕ ಮಾಣೆಕ್ ಷಾ]
* ಹಳದಿ ಕಾರು ಪಾಸುಗಳನ್ನು ಹೊಂದಿರುವವರು ಕಬ್ಬನ್ ರಸ್ತೆಯಲ್ಲಿ ಸಂಚರಿಸಿ ಮಾಣೆಕ್ ಷಾ ಪರೇಡ್ ಮೈದಾನಕ್ಕೆ ಉತ್ತರಾಭಿಮುಖವಾಗಿರುವ ಪ್ರವೇಶ ದ್ವಾರ-1ರ ಮೂಲಕ ಒಳ ಪ್ರವೇಶಿಸಿ, ವಾಹನಗಳನ್ನು ಪರೇಡ್ ಮೈದಾನದ ಪಶ್ಚಿಮ ಭಾಗದಲ್ಲಿ ನಿಲ್ಲಿಸಬೇಕು. [ಚಿತ್ರಗಳು : ಗಣರಾಜ್ಯೋತ್ಸವಕ್ಕೆ ವಾಯುಪಡೆ ತಾಲೀಮು]
* ದ್ವಿಚಕ್ರ ವಾಹನಗಳು ಹಾಗೂ ಕಾರು ಪಾಸು ಹೊಂದಿಲ್ಲದವರು ತಮ್ಮ ವಾಹನಗಳನ್ನು ಕಾಮರಾಜ ರಸ್ತೆಯಲ್ಲಿ ನಿಲ್ಲಿಸಿ, ಪ್ರವೇಶ ದ್ವಾರ 4 ಹಾಗೂ 5ರ ಮೂಲಕ ಮೈದಾನ ಪ್ರವೇಶಿಸಬಹುದು.
* ಬಿಳಿ ಕಾರು ಪಾಸು ಹೊಂದಿರುವವರು ಕಬ್ಬನ್ ರಸ್ತೆ ಮೂಲಕ ಪ್ರವೇಶ ದ್ವಾರ-2ರಿಂದ ಒಳ ಪ್ರವೇಶಿಸಿ ಮೈದಾನದ ಈಶಾನ್ಯ ಭಾಗದಲ್ಲಿ ವಾಹನ ನಿಲ್ಲಿಸಬೇಕು.
* ಪಿಂಕ್ ಪಾಸು ಹೊಂದಿರುವವರು ಕಬ್ಬನ್ ರಸ್ತೆ, ಮಣಿಪಾಲ್ ಸೆಂಟರ್‌ನಿಂದ ಕೆ.ಆರ್.ರಸ್ತೆ ಮತ್ತು ಕಾಮರಾಜ ರಸ್ತೆ ಆರ್ಮಿ ಶಾಲೆ ಮುಂಭಾಗ ವಾಹನ ನಿಲ್ಲಿಸಿ, ಪ್ರವೇಶದ್ವಾರ 3ರ ಮೂಲಕ ಮೈದಾನಕ್ಕೆ ಬರಬೇಕು.
* ಹಸಿರು ಬಣ್ಣದ ಪಾಸು ಹೊಂದಿರುವವರು ಕಾಮರಾಜ ರಸ್ತೆ ಹಾಗೂ ಮೈನ್‌ಗಾರ್ಡ್ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಿ ಪ್ರವೇಶ ದ್ವಾರ- 4 ಹಾಗೂ 5ರಲ್ಲಿ ಕಾಲ್ನಡಿಗೆ ಮೂಲಕ ಒಳ ಪ್ರವೇಶಿಸಬೇಕು.
* ಮಕ್ಕಳು ಹಾಗೂ ಸಾರ್ವಜನಿಕರನ್ನು ಕರೆತರುವ ವಾಹನಗಳು ಪ್ರವೇಶ ದ್ವಾರ- 1ರ ಬಳಿ ಅವರನ್ನು ಇಳಿಸಿ, ವಾಹನಗಳನ್ನು ಎಂ.ಜಿ. ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಮೆಟ್ರೋ ನಿಲ್ದಾಣದವರೆಗೆ ಉತ್ತರ ಭಾಗದಲ್ಲಿ ನಿಲುಗಡೆ ಮಾಡಬೇಕು.
* ಸರ್ಕಾರಿ ಇಲಾಖೆಗಳ ವಾಹನಗಳು ಪ್ರವೇಶ ದ್ವಾರ- 1ರ ಮೂಲಕ ಒಳ ಪ್ರವೇಶಿಸಿ ಪೋರ್ಟ್ ವಾಲ್ ಹಿಂಭಾಗ ನಿಲುಗಡೆ ಮಾಡಬೇಕು. ದ್ವಿಚಕ್ರ ವಾಹನ ಹಾಗೂ ಕಾರು ನಿಲುಗಡೆಗೆ ಸಫೀನಾ ಪ್ಲಾಜಾ ಮುಂಭಾಗ, ಶಿವಾಜಿನಗರ ಬಿಎಂಟಿಸಿ ಸಂಕೀರ್ಣದ 2ನೇ ಮಹಡಿ, ಶಿವಾಜಿನಗರದ ಛೋಟಾ ಮೈದಾನ ಹಾಗೂ ಕಂಠೀರವ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಸಂಚಾರ ಮಾರ್ಗ ಬದಲಾವಣೆ
67ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಜನವರಿ 26ರ ಮಂಗಳವಾರ ಬೆಳಗ್ಗೆ 8.30ರಿಂದ 10.30ರವರೆಗೆ ಕಬ್ಬನ್ ರಸ್ತೆಯಲ್ಲಿ ಬಿ.ಆರ್.ವಿ.ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ ಎರಡೂ ದಿಕ್ಕುಗಳಲ್ಲಿನ ಸಂಚಾರ ನಿರ್ಭಂದಿಸಲಾಗಿದೆ. ಸಂಚಾರ ಮಾರ್ಗದ ವಿವರ ಹೀಗಿದೆ....
* ಇನ್‌ಫೆಂಟ್ರಿ ರಸ್ತೆಯಿಂದ ಮಣಿಪಾಲ್ ಸೆಂಟರ್ ಕಡೆ ಬರುವ ವಾಹನಗಳು ಇನ್‌ಫೆಂಟ್ರಿ ರಸ್ತೆ- ಸಫೀನಾ ಪ್ಲಾಜಾ ಬಳಿ ಎಡ ತಿರುವು ಪಡೆದು, ಮೈನ್‌ಗಾರ್ಡ್ ರಸ್ತೆ-ಆಲಿ ವೃತ್ತ-ಡಿಸ್ಪೆನ್ಸರಿ ರಸ್ತೆ-ಕಾಮರಾಜ ರಸ್ತೆ ಮೂಲಕ ಮತ್ತು ಡಿಕನ್ಸನ್ ರಸ್ತೆ ಜಂಕ್ಷನ್ ಬಳಿ ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ ಜಂಕ್ಷನ್ ಬಳಿ ಎಡಕ್ಕೆ ತಿರುವು ಪಡೆದು, ಕಬ್ಬನ್ ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್‌ಗೆ ಹೋಗಬಹುದು.
* ಕಬ್ಬನ್ ರಸ್ತೆಯಲ್ಲಿ ಮಣಿಪಾಲ್ ಸೆಂಟರ್ ಜಂಕ್ಷನ್‌ನಿಂದ ಬಿ.ಆರ್.ವಿ.ಜಂಕ್ಷನ್ ಕಡೆಗೆ ಹೋಗುವ ವಾಹನಗಳು ಕಾಮರಾಜ ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್‌ನಲ್ಲಿ ಕಾಮರಾಜ ರಸ್ತೆಗೆ ಎಡ ತಿರುವು ಪಡೆದು, ಕಾವೇರಿ ಆರ್ಟ್ಸ್ ಅಂಡ್ ಕ್ರಾಫ್ಟ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಎಂ.ಜಿ.ರಸ್ತೆಯ ಮೂಲಕ ಅನಿಲ್ ಕುಂಬ್ಳೆ ವೃತ್ತದಲ್ಲಿ ಬಲ ತಿರುವು ಪಡೆಯಬೇಕು.
* ಅನಿಲ್ ಕುಂಬ್ಳೆ ವೃತ್ತದಿಂದ ಕಬ್ಬನ್ ರಸ್ತೆ ಕಡೆಗೆ ಬರುವ ವಾಹನಗಳು ಸೆಂಟ್ರಲ್ ರಸ್ತೆಯಲ್ಲಿ ಸಾಗಿ ಬಲಕ್ಕೆ ತಿರವು ಪಡೆಯಬೇಕು. ಇನ್‌ಫೆಂಟ್ರಿ ರಸ್ತೆ-ಸಫೀನಾ ಪ್ಲಾಜಾ ಎಡಕ್ಕೆ ತಿರುವು ಪಡೆದು ಮೈನ್‌ಗಾರ್ಡ್ ರಸ್ತೆ- ಆಲಿ ಸರ್ಕಲ್-ಡಿಸ್ಪೆನ್ಸರಿ-ಕಾಮರಾಜ ರಸ್ತೆ ಮತ್ತು ಡಿಕನ್ಸನ್ ರಸ್ತೆ ಜಂಕ್ಷನ್ ಬಳಿ ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ- ಕಬ್ಬನ್ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನಲ್ಲಿ ಎಡಕ್ಕೆ ತಿರುವು ಪಡೆದು, ಕಬ್ಬನ್ ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್ ಕಡೆಗೆ ಸಾಗಬಹುದು.
* ಎಂ.ಜಿ.ರಸ್ತೆಯಲ್ಲಿ ಕಾವೇರಿ ಆರ್ಟ್ಸ್ ಅಂಡ್ ಕ್ರಾಫ್ಟ್ ವೃತ್ತದ ಮೂಲಕ ಆಗಮಿಸಿ ಕಬ್ಬನ್ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್‌ಗೆ ಹೋಗುವ ವಾಹನಗಳು ನೇರವಾಗಿ ಎಂ.ಜಿ.ರಸ್ತೆಯಲ್ಲಿ ಹೋಗಿ ಅನಿಲ್ ಕುಂಬ್ಳೆ ವೃತ್ತದ ಬಳಿ ಬಲ ತಿರುವು ಪೆಡದು ಬಿ.ಆರ್.ವಿ.ಜಂಕ್ಷನ್‌ನಲ್ಲಿ ನೇರವಾಗಿ ಸೆಂಟ್ರಲ್ ಸ್ಟ್ರೀಟ್ ರಸ್ತೆ ಮೂಲಕ ಹೋಗಬಹುದು.











Click it and Unblock the Notifications