ಬೆಂಗಳೂರು ಟ್ರಾಫಿಕ್ ಕಿರಿಕಿರಿ: ಕಿರಣ್ ಮಜುಂದಾರ್-ಶಾ, ಮೋಹನ್ ದಾಸ್ ಪೈ ಆಕ್ರೋಶ
ಬೆಂಗಳೂರು, ನವೆಂಬರ್ 11: ನಗರದ ಪಣತ್ತೂರು ಪ್ರದೇಶದ ಹಲವಾರು ವಿದ್ಯಾರ್ಥಿಗಳು ಬುಧವಾರ ಟ್ರಾಫಿಕ್‌ನಲ್ಲಿ ಬಹಳ ಸಮಯ ಸಿಕ್ಕಿಹಾಕಿಕೊಂಡು ಶಾಲೆಯನ್ನು ಬಿಟ್ಟು ಮನೆಗೆ ಮರಳಬೇಕಾದ ಘಟನೆಯನ್ನು ಖಂಡಿಸಿ ಹೆಸರಾಂತ ಉದ್ಯಮಿಗಳಾದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಹಾಗೂ ಮೋಹನ್ ದಾಸ್ ಪೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿತ್ಯದ ಟ್ರಾಫಿಕ್ ಸಮಸ್ಯೆಯನ್ನು ಖಂಡಿಸಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು. ಬಳಗೆರೆ ಪ್ರದೇಶದ ನಾಗರಿಕರ ಗುಂಪು ಟ್ವಿಟ್ಟರ್‌ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಇದು ಬುಧವಾರ ನಿವಾಸಿಗಳ ಟ್ರಾಫಿಕ್ ದೃಶ್ಯಗಳನ್ನು ಪೋಸ್ಟ್ ಮಾಡಿತ್ತು. ಇಲ್ಲಿನ ನಿತ್ಯದ ಟ್ರಾಫಿಕ್ ಸಮಸ್ಯೆಯು ಬಳಗೆರೆ ಪ್ರದೇಶದ ನಾಗರಿಕರಿಗೆ ಗಂಭೀರ ತೊಂದರೆಗಳನ್ನು ಉಂಟು ಮಾಡುತ್ತಿದೆ. ಇದು ಎಂದಿಗೂ ಕೊನೆಯಿಲ್ಲದ ಸಂಕಟವಾಗಿದೆ ಎಂದು ಅದು ಟ್ವೀಟ್ ಮಾಡಿತು.
ಜನರು ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆದುತ್ತಿರುವ ಚಿತ್ರಗಳನ್ನು ಗಮನಿಸಿದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್-ಶಾ ಮತ್ತು ಮಣಿಪಾಲ್ ಗ್ಲೋಬಲ್ ಎಜುಕೇಶನ್‌ನ ಅಧ್ಯಕ್ಷ ಮೋಹನ್‌ದಾಸ್ ಪೈ ಸೇರಿದಂತೆ ಹಲವರ ಗಮನ ಸೆಳೆದವು. 'ಸಿಟಿಜನ್ ಮೂವ್‌ಮೆಂಟ್, ಈಸ್ಟ್ ಬೆಂಗಳೂರು' ಎಂಬ ಟ್ವಿಟ್ಟರ್ ಪುಟವೊಂದು ಬೆಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಮಾನ ನಿಲ್ದಾಣದ ಬದಲು ಈ ಪ್ರದೇಶಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದೆ.

ಪಣತ್ತೂರು ಆರ್‌ಯುಬಿ ಜಂಕ್ಷನ್ ಈ ಹಿಂದೆ ಸಂಚಾರ ದಟ್ಟಣೆಯಿಂದ ಕುಖ್ಯಾತಿ ಪಡೆದಿದ್ದು, ರಸ್ತೆ ಅಗಲೀಕರಣಕ್ಕೆ ನಿವಾಸಿಗಳು ಹಲವು ಬಾರಿ ಮನವಿ ಮಾಡುತ್ತಿದ್ದಾರೆ. ಸ್ಥಳೀಯ ನಿವಾಸಿ ಸಂಗಪ್ಪ ದೇಸಾಯಿ ಅವರು ಪ್ರತಿಭಟನೆಯ ವಿಡಿಯೋವನ್ನು ಸಹ ಹಂಚಿಕೊಂಡಿದ್ದು, ನಂತರ ಮೋಹನ್‌ದಾಸ್ ಪೈ ಅವರು ನಮ್ಮ ಬೆಂಗಳೂರಿನ ರಸ್ತೆಗಳ ಸ್ಥಿತಿಯನ್ನು ಸರಿಪಡಿಸಲು ನರೇಂದ್ರ ಮೋದಿ ಸರ್ ದಯವಿಟ್ಟು ಸಹಾಯ ಮಾಡಿ ಎಂದು ಟ್ವೀಟ್ ಮಾಡಿದರು.
ಅಲ್ಲದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇತರ ಹಲವರನ್ನು ಟ್ಯಾಗ್ ಮಾಡಿದ ಅವರು, ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಏನು ಮಾಡುತ್ತಿದ್ದಾರೆ? ಬೆಂಗಳೂರಿನಲ್ಲಿ ಈ ಸಮಸ್ಯೆ ಬಗೆಹಿಸುವ ಕ್ರಮ ಭರವಸೆ ಇದೆಯೇ? ಎಂದು ಕೇಳಿದ್ದಾರೆ. ಬಯೋಕಾನ್ ಲಿಮಿಟೆಡ್‌ನ ಕಾರ್ಯಕಾರಿ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಕೂಡ ಟ್ವೀಟ್ ಮಾಡಿ ''ಅಧಿಕಾರಿಗಳು ಟ್ರಾಫಿಕ್ ಬಗ್ಗೆ ಕ್ರಮ ವಹಿಸುತ್ತಾರೆಯೇ? ಇಲ್ಲವೇ ನಾಗರಿಕರು ಅವರನ್ನು ಅವಮಾನಿಸುತ್ತಲೇ ಇರಬೇಕಾಗುತ್ತದೆ. ನಾವು ಎಲ್ಲದಕ್ಕೂ ರಾಜಕಾರಣಿಗಳನ್ನು ದೂಷಿಸಲು ಸಾಧ್ಯವಿಲ್ಲ. ಗುತ್ತಿಗೆದಾರರನ್ನು ಅಧಿಕಾರಿಗಳು ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ'' ಎಂದು ಅವರು ಹೇಳಿದರು.
ಇನ್ನು ಹಲವಾರು ದೃಶ್ಯಗಳನ್ನು ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಹಂಚಿಕೊಂಡಿದ್ದು, ಬಳಗೆರೆ ರಸ್ತೆ ಸವಾರರಿಗೆ ದುಃಸ್ವಪ್ನವಾಗಿದೆ. ಐದು ಕಿಲೋಮೀಟರ್ ಪ್ರಯಾಣಿಸಲು ಎರಡು ಗಂಟೆ ತೆಗೆದುಕೊಳ್ಳುತ್ತದೆ ಎಂದು ಬರೆದಿದ್ದಾರೆ.












Click it and Unblock the Notifications