ಕೊಲೆಯತ್ನದ ರಹಸ್ಯ ಬಿಚ್ಚಿಟ್ಟ ಇಸ್ರೋ ಹಿರಿಯ ವಿಜ್ಞಾನಿ
ಬೆಂಗಳೂರು, ಜನವರಿ 6: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ದ ಹಿರಿಯ ವಿಜ್ಞಾನಿಯೊಬ್ಬರು ತಮ್ಮ ಮೇಲೆ ಕೊಲೆಯತ್ನ ನಡೆದಿತ್ತು ಎಂಬ ಸುದ್ದಿಯನ್ನು ಹೊರಹಾಕಿದ್ದಾರೆ.
ತಪನ್ ಮಿಶ್ರಾ ಎಂಬ ವಿಜ್ಞಾನಿ ಅವರು ತಮಗೆ ವಿಷಪ್ರಾಶನ ಮಾಡಿ ಕೊಲ್ಲಲ್ಲು ಯತ್ನಿಸಲಾಗಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 2017ರ ಮೇ 23ರಂದು ಆಹಾರದಲ್ಲಿ ಅರ್ಸೆನಿಕ್ ಟ್ರಯಾಕ್ಸೈಡ್ ಬೆರೆಸಿ ತಿನ್ನಲು ನೀಡಲಾಗಿತ್ತು ಎಂದು ಹೇಳಿದ್ದಾರೆ.
ದೋಸೆ ಹಾಗೂ ಚಟ್ನಿ ತಿನ್ನಲು ನೀಡಲಾಗಿತ್ತು. ಚಟ್ನಿಯಲ್ಲಿ ಈ ಮಾರಕ ರಾಸಾಯನಿಕವನ್ನು ಬೆರೆಸಲಾಗಿತ್ತು ಎಂಬ ಅಂಶ ನಂತರ ತಿಳಿದು ಬಂದು ಆಘಾತಕ್ಕೊಳಗಾದೆ ಎಂದಿದ್ದಾರೆ.
ಈ ತಿಂಗಳ ಅಂತ್ಯಕ್ಕೆ ಇಸ್ರೋದ ಹಿರಿಯ ಸಲಹೆಗಾರ ಹುದ್ದೆಯಿಂದ ನಿವೃತ್ತರಾಗುತ್ತಿರುವ ತಪನ್ ಅವರು ಈ ಮುನ್ನ ಇಸ್ರೋದ ಅಹಮದಾಬಾದ್ ಘಟಕದ ನಿರ್ದೇಶಕರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ.
ಇತ್ತೀಚೆಗೆ ತಮ್ಮ ಫೇಸ್ಬುಕ್ ಪುಟದಲ್ಲಿ 'Long Kept Secret' ಎಂಬ ಶೀರ್ಷಿಕೆಯಡಿಯಲ್ಲಿ ಈ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ. ಜುಲೈ 2017ರಲ್ಲಿ ಗೃಹ ಸಚಿವಾಲಯದ ಸಿಬ್ಬಂದಿಯೊಬ್ಬರು ಭೇಟಿ ಮಾಡಿ, ಈ ವಿಷಪ್ರಾಶನ ವಿಷಯವನ್ನು ತಿಳಿಸಿದರು. ವೈದ್ಯರ ಸಲಹೆಯಂತೆ ಚೇತರಿಕೆ ಹೊಂದಿದ್ದೆ.
ಆದರೆ, ನಂತರ ತೀವ್ರ ಉಸಿರಾಟ ತೊಂದರೆ, ಚರ್ಮ ತುರಿಕೆ, ಚರ್ಮ ಸುಲಿಯುವುದು, ಫಂಗಸ್ ಸೋಂಕು ತಗುಲಿತ್ತು. ಈ ಬಗ್ಗೆ ದೆಹಲಿ ಏಮ್ಸ್ ನೀಡಿರುವ ವೈದ್ಯಕೀಯ ವರದಿಯನ್ನು ಕೂಡಾ ವಿಜ್ಞಾನಿ ಹಂಚಿಕೊಂಡಿದ್ದಾರೆ.
ಗೂಢಾಚಾರಿಗಳ ದಾಳಿಯಂತೆ ಇದು ತೋರುತ್ತದೆ. ದೇಶದ ಮಹತ್ವದ ಸೂಕ್ಷ್ಮ ವಿಷಯ ಬಲ್ಲ ವಿಜ್ಞಾನಿಗಳನ್ನು ಗುರಿಯನ್ನಾಗಿಸಿಕೊಂಡು ರಹಸ್ಯ ತಿಳಿಯಲು ಶತ್ರುಗಳು ಈ ತಂತ್ರ ಅನುಸರಿಸಿರಬಹುದು ಎಂದು ರಾಡಾರ್ ತಂತ್ರಜ್ಞಾನದಲ್ಲಿ ತಜ್ಞರಾಗಿರುವ ವಿಜ್ಞಾನಿ ಅನುಮಾನ ಪಟ್ಟಿದ್ದಾರೆ.
ಈ ಬಗ್ಗೆ ಇನ್ನೂ ತೀವ್ರ ತನಿಖೆ ನಡೆಸಿ, ಸತ್ಯಾಸತ್ಯತೆ ಬಯಲಿಗೆಳೆಯಬೇಕು ಎಂದು ಭಾರತ ಸರ್ಕಾರವನ್ನು ಕೋರುತ್ತೇನೆ, ವಿಜ್ಞಾನಿಗಳ ರಕ್ಷಣೆ ಹೊಣೆ ಯಾರು ಹೊತುತ್ತಾರೆ ಎಂದಿದ್ದಾರೆ. (ಪಿಟಿಐ)