ಬೆಂ.ದಕ್ಷಿಣ: ಅನಂತ್ ವರ್ಸಸ್ ನಿಲೇಕಣಿ ವರ್ಸಸ್ ನೀನಾ
ಬೆಂಗಳೂರು, ಏಪ್ರಿಲ್ 9- ರಾಜಧಾನಿಯ ಪ್ರತಿಷ್ಠಿತ ಕಣವಾದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ಹಿಂದೆಂದೂ ಕಾಣದಷ್ಟು ತೀವ್ರ ಕುತೂಹಲ ಕೆರಳಿಸಿದೆ. ಇದಕ್ಕೆ ಮುಖ್ಯ ಕಾರಣ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಮತ್ತು ಹಾಲಿ ಸಂಸದ ಬಿಜೆಪಿಯ ಅನಂತಕುಮಾರ್. ಇದಕ್ಕೆ ಸಾಥ್ ನೀಡುತ್ತಿರುವುದು ಆಮ್ ಆದ್ಮಿ ಪಕ್ಷದ ಅಲೆ. ಈ ತ್ರಿವೇಣಿ ಸಂಗಮದಿಂದಾಗಿ ಬೆಂಗಳೂರು ದಕ್ಷಿಣ ಈ ಬಾರಿ ಭಾರಿ ಗಮನಸೆಳೆದಿದೆ.
ಹೌದು ಕಳೆದ 5 ಅವಧಿಗಳಿಂದ ಬಿಜೆಪಿಯ ಪಟ್ಟಭದ್ರ ಕ್ಷೇತ್ರವಾಗಿರುವ ಬೆಂಗಳೂರು ದಕ್ಷಿಣವು ಇನ್ಫೋಸಿಸ್ ಸಹ ಸಂಸ್ಥಾಪಕ, ಐಟಿ ಅಗ್ರಜ ನಿಲೇಕಣಿ ಅವರಿಂದಾಗಿ ವೆರೈಟಿಯಾಗಿ ಕಾಣುತ್ತಿದೆ. ಮಕ್ಕಳ ಹಕ್ಕು ಹೋರಾಟಗಾರ್ತಿ ನೀನಾ ನಾಯಕ್ ಬೆನ್ನಿಗೆ ಆಮ್ ಆದ್ಮಿ ಅಲೆ ಬೀಸುತ್ತಿರುವುದು ಸೈಲೆಂಟ್ ಕ್ಷೇತ್ರದಲ್ಲಿ ಬಿರುಗಾಳಿಯನ್ನೆಬ್ಬಿಸಿದೆ.
(top contests 2014)
ಏಪ್ರಿಲ್ 17ರಂದು ಚುನಾವಣೆಗೆ ಸಜ್ಜಾಗುತ್ತಿರುವ ಬೆಂಗಳೂರು ದಕ್ಷಿಣದಲ್ಲಿ ಕಳೆದ ಚುನಾವಣೆಯಲ್ಲಿ ಅನಂತಕುಮಾರ್ ಅವರು ಕಾಂಗ್ರೆಸ್ಸಿನ ಕೃಷ್ಣ ಬೈರೇಗೌಡ ಅವರನ್ನು 37 ಸಾವಿರಕ್ಕೂ ಹೆಚ್ಚು ಮತಗಳ ಅಂತರಿದಿಂದ ಗೆದ್ದಿದ್ದರು. ಆದರೆ ಈ ಬಾರಿ ಯಾರೇ ಗೆಲ್ಲಲಿ, ಇಷ್ಟೊಂದು ಭಾರಿ ಅಂತರದಿಂದ ಗೆಲ್ಲುವುದು ದೂರದ ಮಾತೇ ಸರಿ.

ಎಚ್. ಎನ್. ಅನಂತಕುಮಾರ್ (55):
ಮೂಲತಃ ದೇವನಹಳ್ಳಿಯ ಹೆಗ್ಗನಹಳ್ಳಿಯವರು: ಹೆಗ್ಗನಹಳ್ಳಿ ನಾರಾಯಣ ಶಾಸ್ತ್ರಿ ಅನಂತಕುಮಾರ್ ರಾಜಕೀಯದಲ್ಲಿ ಪಳಗಿದ ಹುಲಿ. ಬಿಜೆಪಿಯ ರಾಷ್ಟ್ರೀಯ ವರಿಷ್ಠ ಸ್ಥಾನಮಾನ, ಕಳೆದೈದು ಬಾರಿಯಿಂದ ಒಂದೇ ಸಮನೆ ಗೆದ್ದು ಬರುತ್ತಿದ್ದಾರಾದರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾರೆಯಾಗಿ ಬಿಜೆಪಿ ಹೀನಾಯಸೋಲುಂಡಿರುವುದು ಲೋಕಸಭಾ ಚುನಾವಣೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆಯಿದೆ. ಆದರೆ ಬಿಎಸ್ ಯಡಿಯೂರಪ್ಪ ಮರಳಿ ಪಕ್ಷಕ್ಕೆ ಬಂದಿರುವುದಷ್ಟೇ ಅಲ್ಲ, ಕ್ಷೇತ್ರದಲ್ಲಿ ಅನಂತ್ ಪರ ಖುದ್ದು ಪ್ರಚಾರ ನಡೆಸಿರುವುದು ಮತ್ತು ನರೇಂದ್ರ ಮೋದಿ ಅಲೆಯಿರುವುದು ಅನಂತಕುಮಾರ್ ಅವರ ಗೆಲುವಿಗೆ ಸೋಪಾನವಾಗಬಹುದು.
ಪತ್ನಿ ತೇಜಸ್ವಿನಿ ಅವರ ಜನಪರ ಅದಮ್ಯ ಚೇತನ ಎಂಬ ಎನ್ ಜಿಒ ಮೂಲಕ ಸಕ್ರಿಯವಾಗಿರುವುದು ಅನಂತ ಅವಕಾಶಗಳನ್ನು ಹೆಚ್ಚಿಸುವ ಅಂದಾಜಿದೆ. ಆದರೆ ಐಟಿ ದಿಗ್ಗಜ ನಂದನ್ ಮತ್ತು ಆಪ್ ಅಲೆ ಏನು ಮಾಡುವುದೋ ಎಂಬ ಆತಂಕ ಅನಂತಕುಮಾರ್ ಅವರಲ್ಲೂ ಒಂದು ಕ್ಷಣ ಖಂಡಿತ ಮನೆ ಮಾಡುವುದು ಸುಳ್ಳಲ್ಲ.
ನಂದನ್ ಮನೋಹರ್ ನಿಲೇಕಣಿ (58):
ಮೂಲತಃ ಉತ್ತರ ಕನ್ನಡದವರು. ರಾಜಕೀಯದಲ್ಲಿ ಮೊದಲ ಅನುಭವ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಿಶೇಷ ಗುರುತಿನ ಸಂಖ್ಯೆ ವಿತರಣೆ ಯೋಜನೆ ನಂದನ್ ನಿಲೇಕಣಿ ಅವರ ಲೇಟೆಸ್ಟ್ ಸಾಧನೆ. ಅದಕ್ಕೂ ಮುನ್ನ ಬೃಹತ್ ಪ್ರಮಾಣದಲ್ಲಿ ಇನ್ಫೋಸಿಸ್ ಕಂಪನಿಯನ್ನು ಮೇರುಪರ್ವತದಂತೆ ಕಟ್ಟಿ ಬೆಳೆಸಿದ್ದು.
ಆಡಳಿತಾರೂಢ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ನಂದನ್ ನಿಲೇಕಣಿ ಅವರಂತಹ ಮೇರು ವ್ಯಕ್ತಿಗಳು ಗೆದ್ದು ಬರಲೇಬೇಕು. ಈ ಸಂದರ್ಭದಲ್ಲಿ ಕ್ಷೇತ್ರದ ಯುವಜನತೆ ನಿಲೇಕಣಿ ಅವರ ಕೈಹಿಡಿಯಬೇಕಿದೆ. ಹಿಂದಿನ ದಿನ ಸರಕಾರಿ ಹುದ್ದೆಗೆ ರಾಜೀನಾಮೆ ಮಾರನೆಯ ದಿನವೇ ಪಕ್ಷಕ್ಕೆ ಸೇರ್ಪಡೆ ನಿಲೇಕಣಿ ಅವರ ಹೆಗ್ಗಳಿಕೆ. ನಂದನ್ ಅವರ ಪತ್ನಿ ರೋಹಿಣೀ ನಿಲೇಕಣಿ ಅವರು ಅರ್ಘ್ಯಂ NGO ಮೂಲಕ ಪತಿಗೆ ನೆರವಾಗುತ್ತಿದ್ದಾರೆ.
ನೀನಾ ನಾಯಕ್ (60):
ಮೂಲತಃ ದಕ್ಷಿಣ ಕನ್ನಡದವರು. ರಾಜಕೀಯದಲ್ಲಿ ಮೊದಲ ಅನುಭವ. ಮಕ್ಕಳ ಅಭಿವೃದ್ಧಿ ಮತ್ತು ಸರಕ್ಷಣೆ ಕ್ಷೇತ್ರದಲ್ಲಿ ಅಪಾರ ಅನುಭವ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕು ಮತ್ತು ಸಂರಕ್ಷಣಾ ಆಯೋಗದ ಅಧ್ಯಕ್ಷೆ ಆಗಿದ್ದವರು. ಯೋಜನಾ ಆಯೋಗದಡಿಯೂ ಮಕ್ಕಳ ಸಂರಕ್ಷಣಾ ಉಪ ಸಮಿತಿಯ ಸದಸ್ಯರಾಗಿದ್ದವರು.












Click it and Unblock the Notifications